ಚಿಂತಾಕಿ (ಬೀದರ್): ಬರ ಪೀಡಿತ ತಾಲ್ಲೂಕುಗಳಲ್ಲಿ ಶೇ 50 ರ ರಿಯಾಯಿತಿ ದರದಲ್ಲಿ ಜಾನುವಾರುಗಳಿಗೆ ಮೇವು ಒದಗಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಕಾರ್ಮಿಕರಿಗೆ 3 ದಿನಗಳಲ್ಲಿ ವೇತನ ಪಾವತಿಸಬೇಕು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಗುರುವಾರ ಆದೇಶಿಸಿದರು.
ಜಿಲ್ಲೆಯ ಔರಾದ್ ತಾಲ್ಲೂಕಿನ ಗಡಿ ಭಾಗವಾದ ಚಿಂತಾಕಿ ಮತ್ತು ಯನಗುಂದಾ ಗ್ರಾಮಗಳಲ್ಲಿ ಗ್ರಾಮಸ್ಥರಿಂದ ಬರ ಪರಿಸ್ಥಿತಿಯ ಬಗ್ಗೆ ದೂರುಗಳನ್ನು ಆಲಿಸಿ, ಪರಿಹಾರ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಯನಗುಂದಾ ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಗೆ ಮೂರು ವರ್ಷಗಳಿಂದ ವೇತನ ಪಾವತಿಸಿಲ್ಲ ಎಂಬ ದೂರು ಕೇಳಿ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಮೂರು ದಿನಗಳಲ್ಲಿ ಎಲ್ಲ ಬಾಕಿ ವೇತನ ಪಾವತಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಬರ ಪೀಡಿತ ಪ್ರದೇಶಗಳಿಗೆ ಅನ್ವಯವಾಗುವಂತೆ ನಿಯಮಗಳನ್ನು ಸಡಿಲಿಸಬೇಕು.
ಕಾಮಗಾರಿಗಳ ಪ್ರಗತಿ ಕುರಿತಂತೆ ಸ್ವತಂತ್ರ ತಂಡದ ಪರಿಶೀಲನೆ ಸೇರಿದಂತೆ ನಿಯಮಗಳನ್ನು ಸಡಿಲಿಸಿ ಈಗಾಗಲೇ ಗ್ರಾಮೀಣ ಅಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯಂತೆ ಮೂರು ದಿನಗಳಲ್ಲಿ ಕೂಲಿ ಪಾವತಿಸಬೇಕು ಎಂದು ಸೂಚಿಸಿದರು. ಒಂದು ವಾರದ ಬಳಿಕ ಈ ಗ್ರಾಮಗಳಲ್ಲಿ ಸ್ಥಳೀಯ ಶಾಸಕ ಪ್ರಭು ಚವ್ಹಾಣ್ ಅವರು ಪ್ರವಾಸ ಮಾಡಿ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ನಿರ್ದೇಶಿಸಿದರು.
ಈ ಗ್ರಾಮಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಬಾಕಿ ಕೂಲಿ ಪಾವತಿಸಲಾಗುತ್ತಿದೆಯೇ ಎಂದು ಪರಿಶೀಲಿಸಲು ವಿಶೇಷ ಅಧಿಕಾರಿಯನ್ನು ನಿಯೋಜಿಸಲು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಅವರಿಗೆ ಆದೇಶಿಸಿದರು.
ಜೈಕಾರಕ್ಕೆ ವಿರೋಧ: ಎರಡೂ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಂತೆಯೇ ಸುತ್ತುವರಿದ ಗ್ರಾಮಸ್ಥರು ಕುಡಿಯುವ ನೀರಿನ ಕೊರತೆ ಮತ್ತು ಜಾನುವಾರುಗಳ ಮೇವಿನ ಅಭಾವ ಸಮಸ್ಯೆಗಳ ಬಗ್ಗೆ ಪ್ರಮುಖವಾಗಿ ಗಮನ ಸೆಳೆದರು.
ಒಂದು ಹಂತದಲ್ಲಿ ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ಜೈಕಾರ ಕೂಗಿದರು. ಅದನ್ನು ಆಕ್ಷೇಪಿಸಿದ ಮುಖ್ಯಮಂತ್ರಿಗಳು ಹಾಗೆ ಚಪ್ಪಾಳೆ ತಟ್ಟಿ ಜೈಕಾರ ಕೂಗಬೇಡಿ. ಹಿಂದೆ ಜೈಕಾರ ಹಾಕಿಸಿಕೊಂಡವರು ಏನಾಗಿ ಹೋಗಿದ್ದಾರೆ ಎಂದು ನನಗೆ ಗೊತ್ತಿದೆ. ನಾನು ಇಲ್ಲಿ ಸಮಸ್ಯೆ ಆಲಿಸಲು ಬಂದಿದ್ದೇನೆ. ಜೈಕಾರ ಬೇಡ ಎಂದು ಗ್ರಾಮಸ್ಥರಿಗೆ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.