ADVERTISEMENT

ಉಸಿರುಗಟ್ಟಿಸಿ ಪತ್ನಿ, ಪುತ್ರಿ ಕೊಲೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2016, 10:21 IST
Last Updated 2 ಆಗಸ್ಟ್ 2016, 10:21 IST
ಉಸಿರುಗಟ್ಟಿಸಿ ಪತ್ನಿ, ಪುತ್ರಿ ಕೊಲೆ
ಉಸಿರುಗಟ್ಟಿಸಿ ಪತ್ನಿ, ಪುತ್ರಿ ಕೊಲೆ   

ಕೊಪ್ಪಳ: ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂರು ತಿಂಗಳ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಗರದ ಹಮಾಲರ ಕಾಲೊನಿಯಲ್ಲಿ ಮಂಗಳವಾರ ನಡೆದಿದೆ.

ಮುನ್ನಿ ಬೇಗಂ (25), ರಾಹೀನಾ ಕೊಲೆಯಾದವರು. ಪತ್ನಿಯ ತವರು ಮನೆಯಲ್ಲೇ ಕೊಲೆ ಮಾಡಿರುವ ಆರೋಪಿ ಸುಲೈಮಾನ್‌, ಘಟನೆ ಬಳಿಕ ಪರಾರಿಯಾಗಿದ್ದಾನೆ.

ಇನ್ನೊಬ್ಬ ಪುತ್ರಿ ಮುಜ್ಜು ಅದೇ ಮನೆಯಲ್ಲಿ ಬೇರೆಯವರ ಜತೆ ಮಲಗಿದ್ದ ಕಾರಣ ಪಾರಾಗಿದ್ದಾಳೆ. ಮುನ್ನಿ ಬೇಗಂ ಅವರಿಗೆ  2 ವರ್ಷಗಳ ಹಿಂದೆ ಕುಷ್ಟಗಿಯ ಸುಲೈಮಾನ್‌ ಜತೆ ವಿವಾಹ ಮಾಡಲಾಗಿತ್ತು.

ಸುಲೈಮಾನ್‌ ಕುಷ್ಟಗಿಯ ಬ್ಯಾಂಕ್‌ವೊಂದರಲ್ಲಿ ಕಾವಲುಗಾರನಾಗಿದ್ದ. ಪತ್ನಿ ಮೇಲೆ ಸದಾ ಅನುಮಾನಿಸುತ್ತಿದ್ದ. ವಿವಾಹ ಸಂದರ್ಭ ₹ 1 ಲಕ್ಷ ವರದಕ್ಷಿಣೆ ನೀಡಲಾಗಿತ್ತು. ಆಗಾಗ ಹಣ, ಬಂಗಾರ ತರುವಂತೆ ಮುನ್ನಿ ಅವರನ್ನು ಪೀಡಿಸುತ್ತಿದ್ದ.

ಕೆಲವು ದಿನಗಳ ಹಿಂದೆ ₹ 50 ಸಾವಿರ ನಗದು ಹಾಗೂ ಟಾಟಾ ಏಸ್‌ ವಾಹನ ಕೊಡಿಸುವಂತೆ ಬೇಡಿಕೆಯಿಟ್ಟಿದ್ದ. ಅದರಂತೆ  ₹ 30 ಸಾವಿರ ನೀಡಲಾಗಿತ್ತು. ಕಿರುಕುಳ ಸಂಬಂಧ ಈ ಹಿಂದೆ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮುನ್ನಿ ಸಹೋದರ ಅಮ್ಜದ್‌ ಖಾನ್‌ ತಿಳಿಸಿದರು.

ಮುನ್ನಿ ಮೂರು ತಿಂಗಳ ಹಿಂದೆ ಹೆರಿಗೆಗಾಗಿ ತವರು ಮನೆಗೆ ಬಂದಿದ್ದರು. ಬಳಿಕ ತಮ್ಮ ಸಹೋದರನ ಮದುವೆ ನಿಗದಿಯಾದ್ದರಿಂದ ಇಲ್ಲಿಯೇ ಉಳಿದುಕೊಂಡಿದ್ದರು. ಮೂರು ದಿನಗಳ ಹಿಂದೆ ಸುಲೇಮಾನ್‌ ಪತ್ನಿಯ ಮನೆಗೆ ಬಂದಿದ್ದ.

ಸೋಮವಾರ ಸಂಜೆ ಹೊಸಪೇಟೆಯಲ್ಲಿ ಸಹೋದರನ ಮದುವೆ ಆರತಕ್ಷತೆ ಮುಗಿಸಿ ಬಂದಿದ್ದರು. ನಸುಕಿನಲ್ಲಿ ಆರೋಪಿಯು ಚಹಾ ಮಾಡಿತರುವಂತೆ ಪತ್ನಿಗೆ ಹೇಳಿದ್ದ. ಅದರಂತೆ ಮುನ್ನಿ ಚಹಾ ಕೊಟ್ಟಿದ್ದರು. ಮುಂದೇನಾಯಿತೋ ಗೊತ್ತಿಲ್ಲ ಎಂದು ಅಮ್ಜದ್‌ ಖಾನ್‌ ಗದ್ಗದಿತರಾದರು.

ಮೃತದೇಹದ ಮೇಲೆ ಬಟ್ಟೆ ಇರಲಿಲ್ಲ. ಚಾದರದಲ್ಲಿ ಸುತ್ತಿ ಇಡಲಾಗಿತ್ತು ಎಂದು ಕುಟುಂಬದವರು ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.