ADVERTISEMENT

ಎಚ್‌ಡಿಕೆ ಎರಡನೇ ಮದುವೆ: ದೂರು

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST

ನವದೆಹಲಿ: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯ ಎಚ್.ಡಿ. ಕುಮಾರಸ್ವಾಮಿ ಚಿತ್ರ ನಟಿ ರಾಧಿಕಾ ಅವರನ್ನು ಎರಡನೇ ಮದುವೆ ಆಗಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಅವರಿಗೆ ದೂರು ಬಂದಿದ್ದು, ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಲೋಕಸಭಾ ಸಚಿವಾಲಯ ಸ್ಪಷ್ಟಪಡಿಸಿದೆ.

`ಮಾಹಿತಿ ಹಕ್ಕು ಕಾಯ್ದೆ~ಯಡಿ ಸುಭಾಷ್‌ಚಂದ್ರ ಅಗರವಾಲ್ ಅವರು ಸಲ್ಲಿಸಿದ್ದ ಅರ್ಜಿಗೆ ಲೋಕಸಭಾ ಸಚಿವಾಲಯ ಉತ್ತರ ನೀಡಿದೆ. ಹಿಂದು ಸಮುದಾಯಕ್ಕೆ ಸೇರಿದ ವ್ಯಕ್ತಿ ಒಂದಕ್ಕಿಂತ ಹೆಚ್ಚು ಮದುವೆ ಆಗುವುದು `ಭಾರತ ದಂಡ ಸಂಹಿತೆ~ (ಐಪಿಸಿ) ಪ್ರಕಾರ ಶಿಕ್ಷಾರ್ಹ ಅಪರಾಧ. ಇಂಥ ಆರೋಪಗಳ ಬಗ್ಗೆ ವಿಚಾರಣೆ ನಡೆಸಿ ತೀರ್ಮಾನ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇರುತ್ತದೆ.

ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಬಳಿಕವಷ್ಟೇ ನಿರ್ದಿಷ್ಟ ಸದಸ್ಯರ ಮೇಲೆ ಮಾಹಿತಿ ಬಚ್ಚಿಟ್ಟ ಆರೋಪದಡಿ ಕ್ರಮ ಕೈಗೊಳ್ಳಲು ಸ್ಪೀಕರ್ ಅವರಿಗೆ ಅವಕಾಶವಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ತಿಳಿಸಲಾಗಿದೆ.

ಲೋಕಸಭಾ ಸದಸ್ಯರು ನಿರ್ದಿಷ್ಟ ನಿಯಮದಡಿ ಸಲ್ಲಿಸುವ ಆಸ್ತಿ ಘೋಷಣಾ ಪತ್ರದಲ್ಲಿ ತಮ್ಮ ಆಸ್ತಿ- ಸಾಲದ ಜತೆಗೆ ಪತ್ನಿ, ಮಕ್ಕಳ ವಿವರ ಬಹಿರಂಗಪಡಿಸುವುದು ಕಡ್ಡಾಯ. ಅದರಂತೆ  ಕುಮಾರಸ್ವಾಮಿ ಅವರೂ ಮಾಹಿತಿ ಪೂರೈಸಿದ್ದು, ಅದರಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಪತ್ನಿ ಎಂದು ನಮೂದಿಸಿದ್ದಾರೆ. ಕುಮಾರಸ್ವಾಮಿ ಮೇಲಿನ ಎರಡನೇ ಮದುವೆ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ವಿವರ ಪೂರೈಸುವಂತೆ ಲೋಕಸಭಾ ಸಚಿವಾಲಯ ಅವರನ್ನು ಕೇಳಿಲ್ಲ ಎಂದು ತಿಳಿಸಲಾಗಿದೆ.

ಲೋಕಸಭಾ ಸದಸ್ಯರ ಸದನದೊಳಗಿನ ನಡವಳಿಕೆ ಮತ್ತು ಕಾರ್ಯಕಲಾಪಗಳಿಗೆ ಸಂಬಂಧಪಟ್ಟಂತೆ ಯಾರಾದರೂ ದೂರು ಕೊಟ್ಟರೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಅಧಿಕಾರ ಸ್ಪೀಕರ್‌ಗಿದೆ ಎಂದು ಸುಭಾಷ್‌ಚಂದ್ರ ಅವರಿಗೆ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.