ADVERTISEMENT

ಎತ್ತಿನಹೊಳೆ: ಕೇಂದ್ರದ ಮನವರಿಕೆಗೆ ಪ್ರಯತ್ನ

ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2015, 19:32 IST
Last Updated 4 ಡಿಸೆಂಬರ್ 2015, 19:32 IST

ಬೆಂಗಳೂರು: ಹದಿನಾಲ್ಕು ಹೆಕ್ಟೇರ್‌ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಿಕೊಳ್ಳಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆದ ನಂತರವೇ ಎತ್ತಿನಹೊಳೆ  ಕಾಮಗಾರಿ ಪುನರಾರಂಭಿಸಲಾಗುವುದು ಎಂದು ನೀರಾವರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಪ್ರಾದೇಶಿಕ ಅಧಿಕಾರಿಗಳ ಜೊತೆ ಡಿಸೆಂಬರ್‌ 18ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಯೋಜನೆಗೆ ಅನುಮತಿ ನೀಡುವಂತೆ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಕೋರಲಿದೆ ಎಂದು ಅವರು ಹೇಳಿದರು.

ಯೋಜನೆಯ ಅನುಷ್ಠಾನ ವಿಚಾರದಲ್ಲಿ ರಾಜ್ಯ ಸರ್ಕಾರ ತಳೆಯಬೇಕಿರುವ ನಿಲುವಿನ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ನಡೆಸಿದ ಸಭೆ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಸಭೆಯಲ್ಲಿ ಬಿಜೆಪಿ ಮುಖಂಡರಾದ ಕೆ.ಎಸ್. ಈಶ್ವರಪ್ಪ, ಆರ್‌. ಅಶೋಕ, ಜೆಡಿಎಸ್‌ ಮುಖಂಡ ಬಸವರಾಜ ಹೊರಟ್ಟಿ, ಸಚಿವ ಎಸ್.ಆರ್. ಪಾಟೀಲ ಪಾಲ್ಗೊಂಡಿದ್ದರು.

‘ಎತ್ತಿನಹೊಳೆ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ರಾಷ್ಟ್ರೀಯ ಹಸಿರು ಪೀಠದಲ್ಲಿ ಸೋಮವಾರ ನಡೆಯಲಿದೆ. ಸಚಿವಾಲಯದ ಅಧಿಕಾರಿಗಳ ಜೊತೆಗಿನ ಸಭೆ ಡಿಸೆಂಬರ್‌ 18ಕ್ಕೆ ನಿಗದಿಯಾಗಿರುವ ಕಾರಣ, ಯೋಜನೆ ಬಗ್ಗೆ ತನ್ನ ನಿಲುವು ತಿಳಿಸಲು ಸರ್ಕಾರ ತುಸು ಕಾಲಾವಕಾಶ ಕೇಳಲಿದೆ’ ಎಂದು ಪಾಟೀಲ ವಿವರಿಸಿದರು.

‘ಅರಣ್ಯ ಪ್ರದೇಶವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವ ಮುನ್ನ ಸಚಿವಾಲಯದ ಅನುಮತಿ ಪಡೆಯದೇ ಇರುವುದು ಎಷ್ಟು ಸರಿ? ಈ ಬಗ್ಗೆ ವಿವರ ನೀಡಿ’ ಎಂದು ಪೀಠವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಸಚಿವಾಲಯದ ಅನುಮತಿ ಇಲ್ಲದೆ ಅರಣ್ಯೇತರ ಜಮೀನಿನಲ್ಲಿ ಯೋಜನೆ ಅನುಷ್ಠಾನಕ್ಕೆ ತರುವುದು ಕೂಡ ಅಕ್ರಮ. ಈ ಯೋಜನೆಗೆ ಏಕೆ ತಡೆಯಾಜ್ಞೆ ನೀಡಬಾರದು ಎಂದು ಪೀಠ ಕೇಳಿತ್ತು ಎಂದು ಸಚಿವ ಪಾಟೀಲ ಹೇಳಿದರು.

ಈಶ್ವರಪ್ಪ ಸಲಹೆ: ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ, ಈ ಯೋಜನೆಯ ಸಾಮಾಜಿಕ ಪರಿಣಾಮಗಳ ಅಧ್ಯಯನ ಪ್ರಕ್ರಿಯೆ ಕೈಬಿಡಬಹುದೆಂದು ಸಲಹೆ ನೀಡಲಾಗಿದೆ ಎಂದು ಈಶ್ವರಪ್ಪ ಹೇಳಿದರು. ಕರಾವಳಿ ಭಾಗದ ಜನಪ್ರತಿನಿಧಿಗಳ ಸಭೆ ಕರೆದು, ಯೋಜನೆಯ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂಬ ಸಲಹೆ ನೀಡಿರುವುದಾಗಿ ಹೊರಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.