ಬೆಂಗಳೂರು: ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸದಸ್ಯ ಡಿ.ಎಸ್. ವೀರಯ್ಯ ಮಂಗಳವಾರ ವಿಧಾನಪರಿಷತ್ನಲ್ಲಿ ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದ ಪ್ರಸಂಗ ನಡೆಯಿತು.
ನಿಯಮ 330ರ ಮೇರೆಗೆ ಈ ವಿಷಯ ಪ್ರಸ್ತಾಪಿಸಿದ ಅವರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ವಿಷಯದಲ್ಲಿ ರಾಜಕೀಯವೂ ನಡೆಯುತ್ತಿದೆ. ಆದರೆ, ಇದು ರಾಜಕೀಯದ ಪ್ರಶ್ನೆ ಅಲ್ಲ. ಜನರ ಜೀವನ್ಮರಣದ ಪ್ರಶ್ನೆಯಾಗಿದೆ. ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜನರ ಶಾಪ ಸರ್ಕಾರಕ್ಕೆ ತಟ್ಟುತ್ತದೆ. ಸರ್ಕಾರ ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯವಹಿಸದೆ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಇದೇ ವಿಷಯದ ಬಗ್ಗೆ ಮಾತನಾಡಿದ ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ, ನದಿ ನೀರನ್ನು ತಿರುಗಿಸುವ ಈ ಯೋಜನೆಗೆ ಸಾಕಷ್ಟು ವಿರೋಧವೂ ಇದೆ. ಆದ್ದರಿಂದ, ಜನರಲ್ಲಿ ಮೂಡಿರುವ ಗೊಂದಲ, ಆತಂಕಗಳನ್ನು ದೂರ ಮಾಡುವ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಎಲ್ಲ ಪಕ್ಷಗಳ ನಾಯಕರ ಸಭೆ ನಡೆಸಬೇಕು. ಇದು ರಾಜ್ಯ ಸರ್ಕಾರದ ಯೋಜನೆಯಾಗಿರುವುದರಿಂದ ಈ ಯೋಜನೆಗೆ ಕೇಂದ್ರ ಸರ್ಕಾರ ಶಂಕು ಸ್ಥಾಪನೆ ಮಾಡಬಾರದು ಎಂದರು.
ಬಿಜೆಪಿ ಸದಸ್ಯೆ ಪ್ರೊ.ಎಸ್.ಆರ್. ಲೀಲಾ ಮಾತನಾಡಿ, ಜಿಲ್ಲೆಗಳ ಮಧ್ಯೆ ದ್ವೇಷ ಬೆಳೆಸುವ ವಾತಾವರಣ ಕಲ್ಪಿಸುವುದು ಬೇಡ. ಯೋಜನೆ ಬಗ್ಗೆ ತಂತ್ರಜ್ಞರು ಮತ್ತು ರಾಜಕಾರಣಿಗಳ ಜತೆ ಪೂರ್ವಭಾವಿ ಸಭೆ ನಡೆಸಿ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದರು.
ನಂತರ ಜಲಸಂಪನ್ಮೂಲ ಸಚಿವ ಎಂ.ಬಿ . ಪಾಟೀಲ್ ಅವರಉತ್ತರದಿಂದ ಸಮಾಧಾನಗೊಳ್ಳದ ವೀರಯ್ಯ, ಸಭಾಪತಿ ಪೀಠದ ಮುಂದೆ ಕೆಲಕಾಲ ಧರಣಿ ನಡೆಸಿದರು.
‘ಒಂದು ವಾರದಲ್ಲಿ ಕಾರ್ಯಾದೇಶ’
ಎತ್ತಿನಹೊಳೆ ಯೋಜನೆಯ ಅನುಷ್ಠಾನದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಕಾಮಗಾರಿಗೆ ಒಂದು ವಾರದಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಈಗಾಗಲೇ ₨ 12,912 ಕೋಟಿ ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿ ತಯಾರಿಸಲಾಗಿದೆ. ಇದು ಕೇವಲ ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಪರಿಸರ ಇಲಾಖೆಯ ಅನುಮೋದನೆ ದೊರೆತಿದೆ. ಆದರೂ, ಜನರಲ್ಲಿ ಮೂಡಿರುವ ಆತಂಕಗಳನ್ನು ದೂರ ಮಾಡಲು ಶೀಘ್ರ ಜನಪ್ರತಿನಿಧಿಗಳ ಸಭೆ ಕರೆದು ಪರಿಹಾರ ರೂಪಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.