ಬೆಂಗಳೂರು: `ಆಧಾರ್~ ಸಂಖ್ಯೆ ಆಧರಿಸಿದ ಅಡುಗೆ ಅನಿಲ (ಎಲ್‌ಪಿಜಿ) ಪೂರೈಕೆ ವ್ಯವಸ್ಥೆಯನ್ನು ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಸಜ್ಜಾಗುತ್ತಿದ್ದು, ಅರಮನೆ ನಗರಿಯ ಕೆಲ ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಮರುಭರ್ತಿಗೆ ಆಧಾರ್ ಸಂಖ್ಯೆ ಕಡ್ಡಾಯವಾಗಲಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮೈಸೂರಿನ ಮೂರು ಜನವಸತಿ ಪ್ರದೇಶಗಳ 50,000 ಎಲ್‌ಪಿಜಿ ಗ್ರಾಹಕರ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಿವೆ. ಮೈಸೂರಿನ ವೀನಸ್ ಗ್ಯಾಸ್ ಸರ್ವಿಸಸ್, ಪ್ರಸಾದ್ ಗ್ಯಾಸ್ ಸರ್ವಿಸಸ್ ಮತ್ತು ಲಿಟ್ಲ್ ಗ್ಯಾಸ್ ಸರ್ವಿಸಸ್ ತಮ್ಮ ಗ್ರಾಹಕರನ್ನು ಆಧಾರ್ ಸಂಖ್ಯೆ ಆಧರಿಸಿದ ಸಿಲಿಂಡರ್ ವಿತರಣೆ ವ್ಯವಸ್ಥೆಗೆ ಜೋಡಿಸುತ್ತಿವೆ.
`ಕೆಲವೇ ದಿನಗಳಲ್ಲಿ ನಮ್ಮ ಎಲ್ಲ ಗ್ರಾಹಕರೂ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ನೀಡುವುದನ್ನು ಕಡ್ಡಾಯ ಮಾಡುತ್ತೇವೆ. ನಮ್ಮ 25,000 ಗ್ರಾಹಕರಲ್ಲಿ 12,000 ಮಂದಿ ಈಗಾಗಲೇ ಈ ಮಾಹಿತಿಯನ್ನು ಒದಗಿಸಿದ್ದಾರೆ~ ಎಂದು ಮೈಸೂರಿನ ಅಗ್ರಹಾರ ಪ್ರದೇಶದ ವೀನಸ್ ಗ್ಯಾಸ್ ಸರ್ವಿಸಸ್‌ನ ಆಡಳಿತಾಧಿಕಾರಿ ನೀತಾ ಮರೋಳಿ `ಪ್ರಜಾವಾಣಿ~ಗೆ ತಿಳಿಸಿದರು.
ಕೇಂದ್ರ ವಿಶೇಷ ಗುರುತು ಸಂಖ್ಯೆ ಪ್ರಾಧಿಕಾರ ಕೆಲ ಭದ್ರತಾ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಾತ್ಕಾಲಿಕವಾಗಿ `ಆಧಾರ್~ ಸಂಖ್ಯೆ ನೀಡುವುದನ್ನು ಸ್ಥಗಿತಗೊಳಿಸಿದೆ. ಅಲ್ಲದೇ ಎಲ್‌ಪಿಜಿ ವಿತರಣೆಗೆ `ಆಧಾರ್~ ಸಂಖ್ಯೆಯನ್ನು ಇನ್ನೂ ಕಡ್ಡಾಯಗೊಳಿಸಿಲ್ಲ. ಪ್ರಾಯೋಗಿಕವಾಗಿ ಯೋಜನೆ ಜಾರಿಯಾಗುತ್ತಿರುವ ಪ್ರದೇಶದಲ್ಲಿ ಹಲವರ ಬಳಿ ಆಧಾರ್ ಸಂಖ್ಯೆ ಇಲ್ಲ. ಇದರಿಂದ ಅವರೆಲ್ಲ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಮೈಸೂರಿನಲ್ಲಿ `ಆಧಾರ್~ ಸಂಖ್ಯೆ ವಿತರಣೆ ಯೋಜನೆ 2011ರಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿತ್ತು. ಈವರೆಗೆ ಶೇಕಡ 95ರಷ್ಟು ಜನರಿಗೆ ಗುರುತಿನ ಸಂಖ್ಯೆ ವಿತರಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ `ಆಧಾರ್~ ಸಂಖ್ಯೆಯ ಆಧಾರದಲ್ಲಿ ಎಲ್‌ಪಿಜಿ ಪೂರೈಸುವ ಪ್ರಾಯೋಗಿಕ ಯೋಜನೆಯನ್ನೂ ಮೈಸೂರಿನಲ್ಲೇ ಜಾರಿಗೆ ತರಲು ನಿರ್ಧರಿಸಲಾಗಿತ್ತು.
`ಈ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸುವ ಮೊದಲು ಇಡೀ ಮೈಸೂರು ನಗರದಲ್ಲಿ ಅನುಷ್ಠಾನಕ್ಕೆ ತಂದು ಪರೀಕ್ಷಿಸಲು ಯೋಚಿಸಲಾಗಿದೆ. ನಗರದ 3.5 ಲಕ್ಷ ಗ್ರಾಹಕರನ್ನೂ ಯೋಜನೆಯ ವ್ಯಾಪ್ತಿಗೆ ತರಲು ಶೀಘ್ರದಲ್ಲಿ ಪೆಟ್ರೋಲಿಯಂ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು~ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳ ಅಧಿಕಾರಿಗಳು ತಿಳಿಸಿದ್ದಾರೆ.
ನೇರ ಸಹಾಯಧನ: ಗೃಹಬಳಕೆ ಎಲ್‌ಪಿಜಿ ಗ್ರಾಹಕರಿಗೆ `ನೇರ ಸಹಾಯಧನ~ ವಿತರಿಸುವ ಯೋಜನೆಯನ್ನೂ ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ತೈಲ ಕಂಪೆನಿ ಸಜ್ಜಾಗುತ್ತಿವೆ. ವಾರದಲ್ಲಿ ಯೋಜನೆ ಆರಂಭವಾಗುವ ಸಾಧ್ಯತೆ ಇದೆ.ನೇರ ಸಹಾಯಧನ~ ವಿತರಣೆ ಯೋಜನೆಯ ಪ್ರಾಯೋಗಿಕ ಅನುಷ್ಠಾನ ಆರಂಭಕ್ಕೆ ರಿಸರ್ವ್ ಬ್ಯಾಂಕ್‌ನ ಅನುಮತಿಯನ್ನು ತೈಲ ಕಂಪೆನಿಗಳು ನಿರೀಕ್ಷಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.