ADVERTISEMENT

ಒಬ್ಬ ವ್ಯಕ್ತಿಗೆ ಇಡೀ ಗ್ರಾಮದ ಒಡೆತನ!

ಚಂದ್ರಹಾಸ ಹಿರೇಮಳಲಿ
Published 19 ಸೆಪ್ಟೆಂಬರ್ 2013, 20:03 IST
Last Updated 19 ಸೆಪ್ಟೆಂಬರ್ 2013, 20:03 IST

ದಾವಣಗೆರೆ: ಜೀವನದಲ್ಲಿ ಒಂದು ನಿವೇಶನ ಖರೀದಿಸ­ಬೇಕು, ಸ್ವಂತ ಮನೆ ಹೊಂದ­ಬೇಕು ಎನ್ನುವುದು ಪ್ರತಿ ಯೊಬ್ಬ ನಾಗರಿ­ಕನ  ಮಹಾದಾಸೆ. ಅಂತಹದ್ದರಲ್ಲಿ ಒಬ್ಬ ವ್ಯಕ್ತಿಗೆ ಇಡೀ ಗ್ರಾಮದ ಒಡೆತನವೇ ಸಿಕ್ಕರೆ?

–ಇದು ತಮಾಷೆ ಮಾತಲ್ಲ. ಸ್ವಾತಂತ್ರ್ಯ ಪೂರ್ವ ದಲ್ಲಿ ನಿರ್ಮಾಣವಾದ ಹೊನ್ನಾಳಿ ತಾಲ್ಲೂಕು ಚಟ್ನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಂಗನ­ಕೊಪ್ಪ ಗ್ರಾಮದ ಸಂಪೂರ್ಣ ಒಡೆತನದ ಹಕ್ಕು ಒಬ್ಬ ವ್ಯಕ್ತಿಗೆ ಸೇರಿದ್ದು ಎಂದು ಹೊನ್ನಾಳಿಯ ಜೆಎಂಎಫ್‌ ಕೋರ್ಟ್‌ ಈಚೆಗೆ ಆದೇಶ ಹೊರಡಿಸಿದ್ದು,  73 ವರ್ಷಗಳಿಂದ ಗ್ರಾಮದ ಮಣ್ಣಿನ ಜತೆ ಬಾಂಧವ್ಯ ಕಟ್ಟಿ­ಕೊಂಡಿದ್ದ ಗ್ರಾಮಸ್ಥರ ಬದುಕು ತ್ರಿಶಂಕು ಸ್ಥಿತಿಯಲ್ಲಿದೆ. ಜತೆಗೆ, ಕಂದಾಯ ಹಾಗೂ ಸರ್ವೇ ಇಲಾಖೆ ಹೊಣೆಗೇಡಿತನಕ್ಕೆ ಈ ಆದೇಶ ಕನ್ನಡಿ ಹಿಡಿದಿದೆ.

ಇತಿಹಾಸ: ಬೆಳಗುತ್ತಿ ಹೋಬಳಿಯಿಂದ 6 ಕಿ.ಮೀ. ದೂರ ಇರುವ ಮಂಗನಹಳ್ಳಿ ಅತ್ಯಂತ ಹಳೆಯ ಗ್ರಾಮ. ಗ್ರಾಮಕ್ಕೆ ಕೂಗಳತೆಯ ದೂರದಲ್ಲಿ ಇರುವ ಸವಳಂಗ ಹೊಸ ಕೆರೆ ನಾಲೆಯ ನೀರು ಮಳೆಗಾಲದಲ್ಲಿ ತುಂಬಿ ಹರಿದಾಗ ಗ್ರಾಮದ ಬಹುತೇಕ ಮನೆಗಳಿಗೆ ನೀರು ನುಗ್ಗುತ್ತಿತ್ತು. 1940ರಲ್ಲಿ ಭಾರಿ ನೀರು ನುಗ್ಗಿ ಸಂಕಷ್ಟದ ಪರಿಸ್ಥಿತಿ ಎದುರಾದಾಗ ತುರ್ತು ಕ್ರಮ ಕೈಗೊಂಡ ಅಂದಿನ ಶಿವಮೊಗ್ಗ ಜಿಲ್ಲಾಡಳಿತ ಈ ಬಗ್ಗೆ ಸಮೀಕ್ಷೆ ನಡೆಸಿ ಗ್ರಾಮವನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲು ನಿರ್ಧರಿಸಿತ್ತು.

ಜಿಲ್ಲಾಡಳಿತದ ಆದೇಶದಂತೆ ಹಾಲಮ್ಮ ಪರಮೇಶ್ವ­ರಪ್ಪ, ಬಸಪ್ಪ ಎನ್ನುವವರಿಗೆ ಸೇರಿದ ಸರ್ವೇ ನಂಬರ್ 2/7, 2/8ರಲ್ಲಿನ 5.5 ಎಕರೆ ಜಮೀನು ಸ್ವಾಧೀನಕ್ಕೆ ಪಡೆದ ಕಂದಾಯ ಇಲಾಖೆಯ ಅಧಿಕಾರಿಗಳು ಅಲ್ಲಿಗೆ ಹಳೇ ಗ್ರಾಮ­ವನ್ನು ಸ್ಥಳಾಂತರ ಮಾಡಿದ್ದಾರೆ. ನಂತರ  ಪ್ರತಿ­ಯೊಬ್ಬ­ರಿಗೂ ನೀಡಿದ ಜಾಗದ ಆಧಾರದಲ್ಲಿ ಹಕ್ಕು­ಪತ್ರ ನೀಡುವ ಉದ್ದೇಶದಿಂದ ಜಮೀನು ಪೋಡಿಗಾಗಿ ಸರ್ವೇ ಇಲಾಖೆಗೆ ದಾಖಲೆ ಸಲ್ಲಿಸಿದ್ದಾರೆ.

ದಾಖಲೆ­ಗಳನ್ನು ಪಡೆದ ಸರ್ವೇ ಇಲಾಖೆ ಅಧಿಕಾರಿ­ಗಳು ಅವುಗಳನ್ನು ಮತ್ತೆ ಕಂದಾಯ ಇಲಾಖೆಗೆ ಹಿಂದಿರು­ಗಿಸಿಲ್ಲ. ಕೆಲ ಸಮಯ ಹಕ್ಕು ಪತ್ರಕ್ಕಾಗಿ ಅಲೆದಾಡಿದ ಗ್ರಾಮಸ್ಥರು ಸ್ವಾತಂತ್ರ್ಯ ಚಳವಳಿಯ ಗುಂಗಿನಲ್ಲಿ ಎಲ್ಲ ಮರೆತು­ಬಿಟ್ಟಿದ್ದಾರೆ. ಸ್ವಾಧೀನಕ್ಕೂ ಮುಂಚೆ ಹಾಲಮ್ಮ–ಪರಮೇಶ್ವರಪ್ಪ ಅವರ ಹೆಸರಿಗಿದ್ದ ಪಹಣಿ ಹಾಗೆಯೇ ಮುಂದುವರಿದಿದೆ. 

ಕಾನೂನು ಹೋರಾಟ: ಹಿಂದೆ ಹೊಸ ಗ್ರಾಮ ನಿರ್ಮಾಣ­ಕ್ಕಾಗಿ ಜಮೀನು ನೀಡಿದ್ದ ಹಾಲಮ್ಮ–ಪರಮೇಶ್ವರಪ್ಪ ಅವರ ಹೆಸರಿನಲ್ಲೇ ಪಹಣಿ ಇರುವುದನ್ನು ಗಮನಿಸಿದ ಅವರ ಮೊಮ್ಮಗ (ಮಗಳ ಮಗ) ಪರಮೇಶ್ವ­ರಪ್ಪ  12 ವರ್ಷಗಳ ಹಿಂದೆ ಭೂಮಿ ಹಕ್ಕು ತಮ್ಮದು ಎಂದು ಕೋರ್ಟ್‌ ಮೆಟ್ಟಿಲು ಏರಿದ್ದಾರೆ. ಆದೇಶ ಅವರ ಪರ ಬಂದಿದೆ. ಸ್ಥಳೀಯ ಕೋರ್ಟ್‌ ಆದೇಶದಿಂದ ಆತಂಕ­ಗೊಂಡಿರುವ ಗ್ರಾಮಸ್ಥರು ಹರಿಹರದ ಹಿರಿಯ ಸಿವಿಲ್‌ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದ ಜನರಿಗೆ ಇಂತಹ ಸ್ಥಿತಿ ಎದುರಾಗಿದೆ. ಇದು ನನ್ನೊಬ್ಬನ ಸಮಸ್ಯೆ ಅಲ್ಲ. ಎಲ್ಲ ಗ್ರಾಮಸ್ಥರ ಅನುಕೂಲಕ್ಕಾಗಿ ಕಾನೂನು ಹೋರಾಟ ಮುಂದುವರಿಸುತ್ತೇವೆ
– ಎಂ.ಜಿ.ಮಹೇಶ್ವರಪ್ಪ, ಗ್ರಾಮಸ್ಥ

ಇದು ಸ್ವಾತಂತ್ರ್ಯಪೂರ್ವದ ಪ್ರಕರಣ. ಅಗತ್ಯ ದಾಖಲೆ ಕೊರತೆ ಕಾರಣ ಹೀಗಾಗಿ ರಬಹುದು. ಈ ಸಂಬಂಧ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಗ್ರಾಮ ಪಂಚಾಯ್ತಿ ಜತೆ ಚರ್ಚಿಸಿ, ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
–ಟಿ.ವಿ.ಪ್ರಕಾಶ್‌, ತಹಶೀಲಾದರ್‌ ಹೊನ್ನಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.