ADVERTISEMENT

ಓಸ್ವಾಲ್ ನೇತ್ರ ಸಂಸ್ಥೆಯ ಕಟ್ಟಡಕ್ಕೆ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಬೆಂಗಳೂರು: ಬೆಂಗಳೂರು ಪಶ್ಚಿಮ ಲಯನ್ಸ್ ಸೂಪರ್‌ಸ್ಪೆಷಾಲಿಟಿ ಕಣ್ಣಾಸ್ಪತ್ರೆಯ ಬೆಳ್ಳಿ ಹಬ್ಬದ ವರ್ಷಾಚರಣೆ ಸ್ಮರಣಾರ್ಥ ಜೆ.ಪಿ. ನಗರದಲ್ಲಿ ನಿರ್ಮಿಸಲಿರುವ ನೂತನ `ಬೆಂಗಳೂರು ಪಶ್ಚಿಮ ಲಯನ್ಸ್- ವಿದ್ಯಾಸಾಗರ್ ಓಸ್ವಾಲ್ ನೇತ್ರ ವಿಜ್ಞಾನ ಸಂಸ್ಥೆ~ಯ ಕಟ್ಟಡಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಲಾಯಿತು.

ರೂ 8 ಕೋಟಿ ವೆಚ್ಚದಲ್ಲಿ ಸಂಸ್ಥೆಯ ಕಟ್ಟಡ ನಿರ್ಮಾಣವಾಗಲಿದೆ. ಈ ಸಂಸ್ಥೆಗಾಗಿ ದಾನಿ ಅರುಣಾ ಓಸ್ವಾಲ್ ಅವರು ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ಪ್ರತಿಷ್ಠಾನದ (ಎಲ್‌ಸಿಐಎಫ್) ಮೂಲಕ 5.1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಉಳಿದ 2.9 ಕೋಟಿ ಹಣವನ್ನು ಬೆಂಗಳೂರು ಪಶ್ಚಿಮ ಲಯನ್ಸ್ ಕ್ಲಬ್ ನಿಧಿ ಸಂಗ್ರಹದ ಮೂಲಕ ಸಂಗ್ರಹಿಸಲಾಗಿದೆ.

ಬೆಂ. ಪಶ್ಚಿಮ ಲಯನ್ಸ್ ಕ್ಲಬ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ.ಬಿ.ಎಲ್.ಎಸ್.ಮೂರ್ತಿ ಮಾತನಾಡಿ, `ನೂತನ ಸಂಸ್ಥೆಯಲ್ಲಿ ನೇತ್ರ ಚಿಕಿತ್ಸಾ ವೃತ್ತಿಪರರಂತಹ ಅರೆ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗುವುದು, ಮಧುಮೇಹದ ಕಾರಣದಿಂದ ಬರುವ ನೇತ್ರ ತೊಂದರೆಗಳು ಹಾಗೂ ಕಡಿಮೆ ದೃಷ್ಟಿ ದೋಷ ಮೊದಲಾದ ಸಮಸ್ಯೆಗಳ ತಪಾಸಣೆ ನಡೆಸಲಾಗುವುದು, ಇಂತಹ ವಿಶೇಷ ಸ್ವರೂಪದ ನೇತ್ರ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಯನ್ನೂ ನೆರವೇರಿಸಲಾಗುವುದು~ ಎಂದರು.

`ಕ್ಲಬ್‌ನ ಅಂತರರಾಷ್ಟ್ರೀಯ ನೇತ್ರ ಬ್ಯಾಂಕ್ ವತಿಯಿಂದ ಇದುವರೆಗೆ 19,000 ಕಾರ್ನಿಯಾಗಳನ್ನು ಸಂಗ್ರಹಿಸಲಾಗಿದೆ. 1,850 ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಲಾಗದೆ. 1.60 ಲಕ್ಷ ಮಂದಿಗೆ ಕ್ಯಾಟರ‌್ಯಾಕ್ಟ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬಡ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ~ ಎಂದು ಅವರು ಹೇಳಿದರು.

ಕ್ಲಬ್‌ನ ಕಾರ್ಯದರ್ಶಿ ಪಿ.ಎಸ್.ಪ್ರೇಮನಾಥ್ ಮಾತನಾಡಿ, `ನಮ್ಮ ಸಂಸ್ಥೆಯು ಕೊಳ್ಳೇಗಾಲ, ಹೊಳೆನರಸೀಪುರ, ಹುಣಸೂರುಗಳಲ್ಲಿ ಕಣ್ಣಾಸ್ಪತ್ರೆಗಳನ್ನು ನಿರ್ವಹಿಸುತ್ತಿದೆ~ ಎಂದರು.`ದೃಷ್ಟಿ ಧನುಷ್ ಯೋಜನೆ ಅಡಿಯಲ್ಲಿ ಮಕ್ಕಳ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗಾಗಿ ಸಂಚಾರಿ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗಿದೆ~ ಎಂದು ಅವರು ತಿಳಿಸಿದರು.

ಎಲ್‌ಸಿಐಎಫ್ ಅಧ್ಯಕ್ಷ ಸಿದ್ ಸ್ಕ್ರಗ್ಸ್ ಶಂಕುಸ್ಥಾಪನೆ ನೆರವೇರಿಸಿದರು. ದಾನಿಗಳಾದ ಅರುಣಾ ಓಸ್ವಾಲ್, ಅಭಯ್ ಓಸ್ವಾಲ್, ಸ್ಕ್ರಗ್ಸ್ ಅವರ ಪತ್ನಿ ಜೂಡಿ, ಲಯನ್ಸ್ ಕ್ಲಬ್ಸ್  ಇಂಟರ್‌ನ್ಯಾಷನಲ್ ಜಿಲ್ಲಾ ಗವರ್ನರ್ ಡಾ.ಪಿ.ಆರ್.ಎಸ್.ಚೇತನ್, ಡಾ.ಚಂದ್ರಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.