ADVERTISEMENT

ಕಗ್ಗಳ: ಹತ್ತು ಮಂದಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 19:40 IST
Last Updated 11 ಏಪ್ರಿಲ್ 2018, 19:40 IST

ಗುಂಡ್ಲುಪೇಟೆ: ತಾಲ್ಲೂಕಿನ ಕಗ್ಗಳ ಗ್ರಾಮದಲ್ಲಿರುವ ಚೀನಾ ಮೂಲದ ಕಂಪನಿ ನಡೆಸುತ್ತಿರುವ ಚೆಂಡು ಹೂ ಸಂಸ್ಕರಣಾ ಘಟಕದಿಂದ ವಿಷಾನಿಲ ಹೊರಸೂಸಿ ಬುಧವಾರ 10ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ಘಟಕದಲ್ಲಿ ಚೆಂಡು ಹೂ ದಾಸ್ತನು ಮಾಡಿದ್ದು, ಅದರ ಬಾಗಿಲು ತೆರೆದು ನಿರ್ವಹಣಾ ಕಾರ್ಯ ನಡೆಸಲಾಗಿದೆ. ಈ ವೇಳೆ ವಿಷಾನಿಲ ಸುತ್ತಲಿನ ಪರಿಸರವನ್ನು ಆವರಿಸಿದೆ. ಇದರಿಂದ ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಗ್ರಾಮಸ್ಥರ ಪ್ರತಿಭಟನೆ: ಜನರು ಅಸ್ವಸ್ಥರಾಗುತ್ತಿರುವ ವಿಚಾರ ತಿಳಿದು ವಿವಿಧ ಗ್ರಾಮಗಳ ಜನರು ಶಿಂಡನಪುರ ಗ್ರಾಮ ಪಂಚಾಯಿತಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ಘಟಕಕ್ಕೆ ನೀಡಿರುವ ಅನುಮತಿ ರದ್ದುಪಡಿಸುವಂತೆ ಆಗ್ರಹಿಸಿದರು.

ADVERTISEMENT

‘ಸ್ಥಳೀಯರ ವಿರೋಧದ ನಡುವೆಯೂ ಕಳೆದ ವರ್ಷ ಘಟಕವನ್ನು ಸ್ಥಾಪಿಸಲಾಗಿದೆ. ಇದನ್ನು ವಿರೋಧಿಸಿ ಕಗ್ಗಳದಹುಂಡಿ ಗ್ರಾಮದ ರೈತ ನಾಗೇಶ್ ವಿಷ ಕುಡಿದು ಮೃತಪಟ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಘಟಕದಿಂದ ಕೊಳೆತ ವಾಸನೆ ಬರುತ್ತಿದೆ. ಉಸಿರಾಡಲು ಕಷ್ಟವಾಗುತ್ತಿದ್ದು, ಮಂಪರು ಬಂದಂತೆ ಆಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಎಸ್.ಟಿ.ಮಹದೇವಸ್ವಾಮಿ ತಿಳಿಸಿದರು.

ತಹಶೀಲ್ದಾರ್ ಚಂದ್ರಕುಮಾರ್‌, ಸಿಪಿಐ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚುನಾವಣೆ ಮುಗಿಯುವವರೆಗೂ ಕಾರ್ಖಾನೆ ತೆರೆಯಲು ಬಿಡುವುದಿಲ್ಲ. ಬಳಿಕ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಅಗತ್ಯಕ್ರಮ ಕೈಗೊಳ್ಳುವರು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.