ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿಯ ಬಜೆಟ್‌ನಲ್ಲಿ ಒಟ್ಟು ರೂ 289 ಕೋಟಿಯ ಪಾಲು ಪಡೆದುಕೊಂಡಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗುವ ಯಾವುದೇ ಹೊಸ ಯೋಜನೆಗಳನ್ನು ಬಜೆಟ್ ಒಳಗೊಂಡಿಲ್ಲ. ಆದರೆ, ರಾಜ್ಯದ ಎಲ್ಲ ಪಾರಂಪರಿಕ ತಾಣಗಳ ಅಭಿವೃದ್ಧಿ, ಸಂರಕ್ಷಣೆ ಮತ್ತು ನಿರ್ವಹಣೆಗೆ `ಕರ್ನಾಟಕ ವಿಶ್ವ ಪರಂಪರಾ ಆಯೋಗ' ರಚಿಸುವುದಾಗಿ ಸರ್ಕಾರ ಘೋಷಿಸಿದೆ.
ಈ ಆಯೋಗಕ್ಕೆ ಬಜೆಟ್‌ನಲ್ಲಿ ರೂ 2 ಕೋಟಿ ಮೀಸಲಿಡಲಾಗಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿರುವ ವಸ್ತು ಸಂಗ್ರಹಾಲಯವನ್ನು ಅಂತರರಾಷ್ಟ್ರೀಯ ದರ್ಜೆಗೆ ಏರಿಸಲು, ಗಾಂಧಿ ಅಧ್ಯಯನ ಕೇಂದ್ರ ನಿರ್ಮಾಣ ಮತ್ತು ಗಾಂಧಿ ಸಾಹಿತ್ಯ ಪ್ರಚಾರಕ್ಕೆ ಮತ್ತು ಗಾಂಧಿ ಭವನದ ನಿರ್ವಹಣಾ ವೆಚ್ಚಕ್ಕೆ ಒಟ್ಟು ರೂ 4 ಕೋಟಿ ನೀಡಲಾಗಿದೆ.
ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆ ಅಂಗವಾಗಿ ಆಯೋಜಿಸುವ ವಿವಿಧ ಕಾರ್ಯಕ್ರಮಗಳಿಗೆ ರೂ 5 ಕೋಟಿ, ಮೈಸೂರಿನಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ರೂ 2 ಕೋಟಿ ನಿಗದಿ ಮಾಡಲಾಗಿದೆ.
ರಾಮನಗರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ದಾವಣಗೆರೆ ಮತ್ತು ಯಾದಗಿರಿ ಜಿಲ್ಲೆಗಳ ಗೆಜೆಟಿಯರ್‌ಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಲು ರೂ 1 ಕೋಟಿ ಮೀಸಲಿಡಲಾಗಿದೆ. ಕವಿಗುರು ರವೀಂದ್ರನಾಥ ಟಾಗೋರ್ ಅವರಿಗೆ ನೊಬೆಲ್ ಪುರಸ್ಕಾರ ದೊರೆತು ನೂರು ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ, ಸಾಂಸ್ಕೃತಿಕ ಸಮುಚ್ಚಯ ನಿರ್ಮಾಣಕ್ಕೆ ರೂ 15 ಕೋಟಿ ಅನುದಾನ ಘೋಷಿಸಲಾಗಿದೆ.
ಉತ್ತರ ಕರ್ನಾಟಕದ ನಶಿಸುತ್ತಿರುವ ಜಾನಪದ ಕಲೆ, ಸಂಸ್ಕೃತಿ ಮತ್ತು ಪರಂಪರೆ ಪ್ರತಿಬಿಂಬಿಸಲು ಧಾರವಾಡ ಜಿಲ್ಲೆಯಲ್ಲಿ `ಕರ್ನಾಟಕ ಜಾನಪದ ಜಗತ್ತು' ನಿರ್ಮಾಣಕ್ಕೆ ರೂ 3 ಕೋಟಿ ಅನುದಾನ. ಹೂವಿನ ಹಡಗಲಿಯ ರಂಗಭಾರತಿ ಸಂಸ್ಥೆ ನಿರ್ಮಿಸುತ್ತಿರುವ ರಂಗಸಮುಚ್ಚಯಕ್ಕೆ ರೂ 1 ಕೋಟಿ. ಹೊರ ರಾಜ್ಯಗಳು ಹಾಗೂ ಹೊರ ದೇಶಗಳಲ್ಲಿರುವ ಕನ್ನಡಿಗರು ಆಯೋಜಿಸುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರೂ 10 ಕೋಟಿ ನೀಡುವುದಾಗಿ ಸರ್ಕಾರ ಹೇಳಿದೆ.
ಹಿರೇಕೆರೂರು ತಾಲ್ಲೂಕಿನಲ್ಲಿ ಸರ್ವಜ್ಞ ಪ್ರಾಧಿಕಾರಕ್ಕೆ ರೂ 2 ಕೋಟಿ. ಕನಕದಾಸರ ಜನ್ಮಸ್ಥಳವಾದ ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಯಾತ್ರಾರ್ಥಿಗಳಿಗೆ ವಿವಿಧ ಸೌಲಭ್ಯ ಕಲ್ಪಿಸಲು ರೂ 1 ಕೋಟಿ. ಧಾರವಾಡದ ಕಲಾಭವನ ಮತ್ತು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದ ನವೀಕರಣಕ್ಕೆ ರೂ 5 ಕೋಟಿ. ಧಾರವಾಡದಲ್ಲಿ `ಗಾಂಧಿ ಗ್ರಾಮ' ನಿರ್ಮಾಣಕ್ಕೆ ಪ್ರಾರಂಭಿಕ ಅನುದಾನವಾಗಿ ರೂ 5 ಕೋಟಿ ನೀಡುವ ಭರವಸೆ ಈ ಬಾರಿಯ ಬಜೆಟ್‌ನಲ್ಲಿದೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆಶ್ರಯದಲ್ಲಿ `ದರ್ಶನ ಭವನ' ನಿರ್ಮಾಣಕ್ಕೆ ರೂ 5 ಕೋಟಿ, ಡಾ. ಮಲ್ಲಿಕಾರ್ಜುನ ಮನ್ಸೂರ ಪ್ರತಿಷ್ಠಾನ ಭವನ ನಿರ್ಮಾಣಕ್ಕೆ ರೂ 5 ಕೋಟಿ, ಸೇನೆಯ ಮಹಾ ದಂಡನಾಯಕರಾಗಿದ್ದ ಜಿ.ಜಿ. ಬೇವೂರ ಸ್ಮರಣಾರ್ಥ ಬಾಗಲಕೋಟೆಯಲ್ಲಿ ಭವನ ಹಾಗೂ ಮಹಾದ್ವಾರ ನಿರ್ಮಾಣಕ್ಕೆ ರೂ 2 ಕೋಟಿ, ಮಂಗಳೂರಿನಲ್ಲಿ ಕಲಾಂಗಣಿ ಪಾರಂಪರಿಕ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ರೂ 2 ಕೋಟಿ, ಹುಬ್ಬಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಭವನ ನಿರ್ಮಾಣಕ್ಕೆ ರೂ 2 ಕೋಟಿ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.
ಪ್ರಮುಖ ಸಂಸ್ಥೆಗಳಿಗೆ ನೆರವು
ಕರ್ನಾಟಕ ವಿಶ್ವ ಪರಂಪರಾ ಆಯೋಗ ರಚನೆ
ಕನಕದಾಸರ ಬಾಡ, ಹಡಗಲಿಯ ರಂಗಭಾರತಿಗೆ ತಲಾ ರೂ 1 ಕೋಟಿ
ಧಾರವಾಡದ ಕಲಾಭವನ, ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾಂಗಣಕ್ಕೆ ಹಣ
ಗಾಂಧಿ, ವಿವೇಕಾನಂದ, ಮನ್ಸೂರ, ರಾಯಣ್ಣ, ಬೆವೂರ, ಟ್ಯಾಗೋರ್, ಸರ್ವಜ್ಞ ಸ್ಮರಣೆಗೆ ನೆರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.