ADVERTISEMENT

ಕರ್ನಾಟಕದ ಅಖಾಡಕ್ಕೆ ಧುಮುಕದ ಶಾ?

ಫಲಿತಾಂಶ ಪ್ರಕಟವಾದರೂ ಬಾರದ ಬಿಜೆಪಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:30 IST
Last Updated 16 ಮೇ 2018, 19:30 IST
ಅಮಿತ್‌ ಶಾ
ಅಮಿತ್‌ ಶಾ   

ಬೆಂಗಳೂರು: ದೇಶದ ಅನೇಕ ರಾಜ್ಯಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ನೇರವಾಗಿ ಅಖಾಡಕ್ಕೆ ಧುಮುಕಿದ್ದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕರ್ನಾಟಕದಲ್ಲಿ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯಕ್ಕೆ ಭೇಟಿ ನೀಡಿಲ್ಲ.

ಕಳೆದ ವರ್ಷ ನಡೆದ ಗೋವಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. ಬಿಜೆಪಿಯನ್ನು ಹಿಂದಿಕ್ಕಿದ್ದ ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 13 ಸ್ಥಾನ ಪಡೆದಿತ್ತು. ಫಲಿತಾಂಶ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಶಾ ಅಖಾಡಕ್ಕೆ ಇಳಿದಿದ್ದರಿಂದಾಗಿ, ಅಲ್ಲಿ ಸರ್ಕಾರ ಪ್ರತಿಷ್ಠಾಪಿಸುವಲ್ಲಿ ಪಕ್ಷ ಯಶಸ್ಸು ಕಂಡಿತ್ತು. ಸರ್ಕಾರ ರಚಿಸಲು ಅಗತ್ಯವಾದ ಸಂಖ್ಯಾಬಲಕ್ಕೆ ಬಿಜೆಪಿಯು ಪಕ್ಷೇತರರು ಹಾಗೂ ಪ್ರಾದೇಶಿಕ ಪಕ್ಷಗಳ ಜತೆ ಕೈಜೋಡಿಸಿತ್ತು.

ಈ ವರ್ಷದ ಫೆಬ್ರುವರಿಯಲ್ಲಿ ಮೇಘಾಲಯದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 21 ಸ್ಥಾನಗಳನ್ನು ಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಎರಡು ಸ್ಥಾನಗಳ
ನ್ನಷ್ಟೇ ಗಳಿಸಿದ್ದ ಕಮಲ ಪಕ್ಷವು ಎನ್‌ಪಿಪಿ ಜತೆಗೂಡಿ ಸರ್ಕಾರ ರಚಿಸಿತ್ತು. ಇಲ್ಲೂ ಶಾ ‘ಕೈ’ಚಳಕ ತೋರಿದ್ದರು. ಅಗತ್ಯ ಸ್ಥಾನ ಬಲದ ಕೊರತೆಯ ನಡುವೆಯೂ ಶಾ ‘ಚಾಣಕ್ಯ’ ತಂತ್ರದಿಂದ ಜಮ್ಮು–ಕಾಶ್ಮೀರ, ಬಿಹಾರ, ನಾಗಾಲ್ಯಾಂಡ್‌ನಲ್ಲಿ ಸರ್ಕಾರಗಳು ರಚನೆಯಾಗಿದ್ದವು. ಆಡಳಿತ ಹಿಡಿಯಲು ಬಿಜೆಪಿ ಅಡ್ಡಹಾದಿ ಹಿಡಿದಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದ್ದವು.

ADVERTISEMENT

ರಾಜ್ಯದಲ್ಲಿ ಈ ಸಲ ಅತಂತ್ರ ವಿಧಾನಸಭೆ ರಚನೆಯಾಗಿದ್ದು, ಇಲ್ಲೂ ಶಾ ಮ್ಯಾಜಿಕ್‌ ಮಾಡಲಿದ್ದಾರೆ ಎಂಬುದು ಪಕ್ಷದ ಕಾರ್ಯಕರ್ತರ ಮಹದಾಸೆಯಾಗಿತ್ತು. ಬಿಜೆಪಿ ಅಧ್ಯಕ್ಷರು ಮಂಗಳವಾರ (ಮೇ 15) ರಾತ್ರಿಯೇ ನಗರಕ್ಕೆ ಧಾವಿಸಲಿದ್ದಾರೆ ಎಂಬ ಸುದ್ದಿ ಪಕ್ಷದ ಪಡಸಾಲೆಯಲ್ಲಿ ಜೋರಾಗಿ ಹಬ್ಬಿತ್ತು. ಆದರೆ, ಬುಧವಾರ ಸಂಜೆವರೆಗೂ ಶಾ ಬಂದಿರಲಿಲ್ಲ. ‘ಸರ್ಕಾರ ರಚನೆ ವಿಷಯವಾಗಿ ನಾವು ಇಲ್ಲಿಗೆ ಬರುವುದಿಲ್ಲ. ನೀವೂ ದೆಹಲಿಗೆ ಬರಬೇಡಿ’ ಎಂಬ ಖಡಕ್‌ ಸೂಚನೆ ವರಿಷ್ಠರಿಂದ ಬಂದಿದೆ ಎಂದು ಮುಖಂಡರೊಬ್ಬರು ತಿಳಿಸಿದರು.

ರಾಜ್ಯದಲ್ಲೇ ಮೊಕ್ಕಾಂ ಹೂಡುವಂತೆ ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌, ಜೆ.ಪಿ.ನಡ್ಡಾ ಹಾಗೂ ಧರ್ಮೇಂದ್ರ ಪ್ರಧಾನ್‌ ಅವರಿಗೆ ಸೂಚನೆ ದೊರೆತಿದೆ ಎಂದು ಗೊತ್ತಾಗಿದೆ. ಸಚಿವರು ನಗರದಲ್ಲಿ ಬುಧವಾರ ಸರಣಿ ಸಭೆಗಳನ್ನು ನಡೆಸಿದರು.
*
ಶಾ ಹಿಂದೇಟಿಗೆ ಕಾರಣವೇನು?
2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಅದಕ್ಕೆ ಒಂದು ವರ್ಷ ಉಳಿದಿರುವಾಗ, ಕರ್ನಾಟಕದಲ್ಲಿ ಸರ್ಕಾರ ರಚನೆಯ ವಿಷಯದಲ್ಲಿ ನೇರವಾಗಿ ಭಾಗಿಯಾದರೆ ಅಪವಾದ ಎದುರಿಸಬೇಕಾಗುತ್ತದೆ. ಇದನ್ನೇ ವಿರೋಧ ಪಕ್ಷಗಳು ದೊಡ್ಡ ವಿಷಯವನ್ನಾಗಿ ಮಾಡಿ ಹೋರಾಟ ನಡೆಸುವ ಸಾಧ್ಯತೆ ಇದೆ. ಅಲ್ಲದೆ, ಈಗ ಅಖಿಲೇಶ್‌ ಯಾದವ್‌, ಮಾಯಾವತಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಲಾಲು ಪ್ರಸಾದ್‌, ಕೆ. ಚಂದ್ರಶೇಖರ ರಾವ್‌, ಶರದ್‌ ಪವಾರ್‌, ಎಚ್.ಡಿ.ದೇವೇಗೌಡ ಅವರೆಲ್ಲ ಮೈತ್ರಿಕೂಟ ರಚಿಸಲು ಮುಂದಾಗಿದ್ದಾರೆ. ಇಲ್ಲಿ ನೇರವಾಗಿ ಅಖಾಡಕ್ಕೆ ಇಳಿದರೆ ಅವರಿಗೆ ಆಹಾರ ಕೊಟ್ಟಂತೆ ಆಗುತ್ತದೆ ಎಂಬ ಕಾರಣಕ್ಕೆ ಶಾ ಬಂದಿಲ್ಲ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.