ADVERTISEMENT

ಕಾಂಗ್ರೆಸ್, ಕೆಜೆಪಿ ಶಾಸಕರ ಧರಣಿ

ವಿರೋಧ ಪಕ್ಷದ ಉಪ ನಾಯಕ ದತ್ತ ಮಾತಿಗೆ ಕೋಪ ತಾಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 20:19 IST
Last Updated 4 ಡಿಸೆಂಬರ್ 2013, 20:19 IST

ಸುವರ್ಣಸೌಧ (ಬೆಳಗಾವಿ): ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳ ಬಗ್ಗೆ  ಉತ್ತರ ಕರ್ನಾಟಕ ಭಾಗದವರಿಗಿಂತ ಹಳೆ ಮೈಸೂರು ಭಾಗದ ಶಾಸಕರು ಹೆಚ್ಚಾಗಿ ಮಾತನಾಡಿದ್ದಾರೆ ಎಂದು ವಿರೋಧ ಪಕ್ಷದ ಉಪ ನಾಯಕ ವೈ.ಎಸ್.ವಿ.ದತ್ತ ಆಡಿದ ಮಾತಿನಿಂದ ಕೆರಳಿದ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್, ಕೆಜೆಪಿ ಶಾಸಕರು ವಿಧಾನಸಭೆಯಲ್ಲಿ ಧರಣಿ ನಡೆಸಿದರು.

ಇದರಿಂದ ಸದನದಲ್ಲಿ ಕೋಲಾಹಲ ಉಂಟಾಗಿ ಕಲಾಪ­ವನ್ನು ಕೆಲಕಾಲ ಮುಂದೂಡಬೇಕಾಯಿತು. ಉಪಾಧ್ಯಕ್ಷ ಎನ್.ಎಚ್. ಶಿವಶಂಕರ ರೆಡ್ಡಿ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯ ನಂತರ ಮತ್ತೆ ಸದನ ಆರಂಭ­ವಾಯಿತು.

ಆಗ ಮಾತನಾಡಿದ ವಿರೋಧ ಪಕ್ಷದ ನಾಯಕ ಎಚ್.ಡಿ.­ಕುಮಾರಸ್ವಾಮಿ, 'ಆಡಳಿತ ನಡೆಸಿದ ಎಲ್ಲರೂ ಅವರವರ ಶಕ್ತಿ ಅನುಸಾರ ಕೆಲಸ ಮಾಡಿದ್ದಾರೆ. ಆ ಭಾಗ, ಈ ಭಾಗ ಎಂದು ಅಗೌರವ ಸೂಚಿಸುವುದಿಲ್ಲ. ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಅವಹೇಳನ ಮಾಡುವ ಉದ್ದೇಶದಿಂದ ದತ್ತ ಮಾತನಾಡಿಲ್ಲ. ಆದರೂ ಶಾಸಕರ ಮನಸ್ಸಿಗೆ ನೋವಾ­ಗಿ­ರು­ವುದಕ್ಕೆ ವಿಷಾದ ವ್ಯಕ್ತಪಡಿಸಲಿದ್ದಾರೆ' ಎಂದು ಸ್ಪಷ್ಟಪಡಿಸಿದರು.

'ಕೃಷ್ಣಾ  ನದಿ ನೀರಿನ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡುವಾಗ ಅಶ್ಲೀಲ, ಅಸಂಸದೀಯ ಪದ ಬಳಸಿಲ್ಲ. ಕೃಷ್ಣಾ, ಕಾವೇರಿ ಎರಡು ಕಣ್ಣುಗಳು ಇದ್ದಂತೆ ಎಂದು ಅನೇಕ ಬಾರಿ ಹೇಳಿದ್ದೇನೆ. ನಾನೂ ಸಹ ಕೃಷ್ಣಾ ಭಾಗದ ಹುಡುಗ. ಕಾವೇರಿ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರು, ಕೃಷ್ಣಾ ವಿಚಾರವಾಗಿ ಹಳೆ ಮೈಸೂರು ಭಾಗದ ಶಾಸಕರು ಮಾತನಾಡಿದ್ದು, ಸಾಮರಸ್ಯ ಇದೆ ಎಂಬುದನ್ನು ಹೇಳುವಾಗ ಭಾವೊದ್ವೇಗದಿಂದ ಬಳಸಿರುವ ವಾಕ್ಯವನ್ನು ವಾಪಸ್ ಪಡೆದಿದ್ದೇನೆ. ಅಲ್ಲದೆ ವಿಷಾದ ಸೂಚಿಸುತ್ತೇನೆ' ಎಂದು ದತ್ತ ಕ್ಷಮೆಯಾಚಿಸಿದರು. ಬಳಿಕ ಧರಣಿ ಕೈಬಿಟ್ಟ ಸದಸ್ಯರು ಆಸನಗಳಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.