ADVERTISEMENT

ಕಾನೂನು ಸುವ್ಯವಸ್ಥೆ ಹದಗೆಡಿಸುವುದೇ ಬಿಜೆಪಿ ಸಿದ್ಧಾಂತ: ಕೆ.ಸಿ. ವೇಣುಗೋಪಾಲ್

ಪ್ರತಾಪ ಸಿಂಹ ವಿಡಿಯೊಗೆ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 8:23 IST
Last Updated 5 ಡಿಸೆಂಬರ್ 2017, 8:23 IST
ಕೆ.ಸಿ. ವೇಣುಗೋಪಾಲ್
ಕೆ.ಸಿ. ವೇಣುಗೋಪಾಲ್   

ಬೆಂಗಳೂರು: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿ ಮುಂದಾಗಿದೆ. ಪ್ರತಾಪ ಸಿಂಹ ವಿಡಿಯೊ ನಾನು ನೋಡಿದ್ದೇನೆ. ಕಾನೂನು ಸುವ್ಯವಸ್ಥೆ ಹದಗೆಡಿಸಿ ಅಶಾಂತಿ ಉಂಟು ಮಾಡುವುದೇ ಅವರ ಸಿದ್ಧಾಂತ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೇ ಆ ರೀತಿ ಪ್ರಚೋದಿಸುತ್ತಾರೆ ಎಂದರೆ ಏನು ಅರ್ಥ? ಬಿಜೆಪಿ ನಾಯಕರಿಗೆ ಅಭಿವೃದ್ಧಿ ವಿಚಾರದಲ್ಲಿ ಮಾತಾಡಲು ವಿಚಾರಗಳಿಲ್ಲ. ಹಾಗಾಗಿ ರಾಜ್ಯದಲ್ಲಿ ಕೋಮುಭಾವನೆ ಕೆರಳಿಸಲು ಅವರು ಯತ್ನಿಸುತ್ತಿದ್ದಾರೆ. ಕೆಲವೇ ವಿಚಾರಗಳನ್ನು ಗುರಿಯಾಗಿಸಿಕೊಂಡು ಬಿಜೆಪಿಯವರು ರಸ್ತೆಗಿಳಿದಿದ್ದಾರೆ’ ಎಂದಿದ್ದಾರೆ.

‘ಪಕ್ಷ ಅಂದ ಮೇಲೆ ಅವೆಲ್ಲಾ ಸಾಮಾನ್ಯ’
ಡಾ.ಜಿ. ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವಿನ ಮನಸ್ತಾಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ವೇಣುಗೋಪಾಲ್, ‘ಅವರ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ದೆಹಲಿಯಿಂದ ಎಲ್ಲರೂ ಒಟ್ಟಿಗೆ ಬಂದಿದ್ದೇವೆ. ಸಣ್ಣಪುಟ್ಟ ಸಮಸ್ಯೆಗಳು ಇರಬಹುದು. ಪಕ್ಷ ಅಂದ ಮೇಲೆ ಅವೆಲ್ಲಾ ಸಾಮಾನ್ಯ. ಸಿದ್ದರಾಮಯ್ಯ ಸರ್ಕಾರದ ವತಿಯಿಂದ ಮಾಡುವ ಯಾತ್ರೆಗೆ ಪರಮೇಶ್ವರ್ ಹೋಗಲ್ಲ. ಯಾತ್ರೆಯಲ್ಲಿ ಸಿದ್ದರಾಮಯ್ಯ ಮಾತ್ರ ಪಾಲ್ಗೊಳ್ಳುತ್ತಾರೆ’ ಎಂದು ಹೇಳಿದ್ದಾರೆ.

ADVERTISEMENT

‘ಬಿಜೆಪಿ ಪ್ರತಿಭಟನೆ ಮಾಡಿಕೊಳ್ಳಲಿ’
ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಮಾತನಾಡಿದ ಅವರು, ‘ಅದು ರಾಜಕೀಯ ಪ್ರೇರಿತ ಆರೋಪ. ಬಿಜೆಪಿ ಪ್ರತಿಭಟನೆ ಮಾಡಿಕೊಳ್ಳಲಿ. ಎರ್ನಾಕುಲಂ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ನಾಯರ್ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದೇನೆ. ಆರೋಪ ಸಾಬೀತಾದರೆ ರಾಜಕೀಯದಿಂದ ನಿವೃತ್ತನಾಗುತ್ತೇನೆ. 40 ವರ್ಷದ ರಾಜಕಾರಣದಲ್ಲಿ ನನ್ನ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇಲ್ಲ. ಕೇರಳದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲ. ಸಿಪಿಎಂ ಸರ್ಕಾರ ಇರುವುದು. ಯಾವುದೇ ತನಿಖೆ ಎದುರಿಸಲು ನಾನು ಸಿದ್ದನಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.