ADVERTISEMENT

ಕಾಮೆಡ್‌–ಕೆ ಫಲಿತಾಂಶ: ರಾಜ್ಯಕ್ಕೆ ಮೊದಲ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 27 ಮೇ 2018, 15:26 IST
Last Updated 27 ಮೇ 2018, 15:26 IST
ಆದಿತ್ಯ
ಆದಿತ್ಯ   

ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾದ ಕಾಮೆಡ್-ಕೆ ಪರೀಕ್ಷೆ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಮೊದಲ ರ‍್ಯಾಂಕ್‌ ನಗರದ ಪಾಲಾಗಿದೆ.

ಕಳೆದ ಬಾರಿ ಮೊದಲ 10 ರ‍್ಯಾಂಕ್‌ ರಾಜ್ಯಕ್ಕೆ ಲಭಿಸಿತ್ತು. ಆದರೆ, ಈ ಬಾರಿ ಕೇವಲ ಮೂರು ರ‍್ಯಾಂಕ್‌ಗಳು ಮಾತ್ರ ಬಂದಿವೆ. ಮೊದಲ, ಐದು ಹಾಗೂ ಆರನೇ ರ‍್ಯಾಂಕ್‌ಗಳನ್ನು ಬೆಂಗಳೂರಿನ ವಿದ್ಯಾರ್ಥಿಗಳು ಬಾಜಿಕೊಂಡಿದ್ದಾರೆ.

ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಆದಿತ್ಯ ದುರ್ಭ 180 ಅಂಕಗಳಿಗೆ 168 ಅಂಕಗಳನ್ನು ಪಡೆದು ಮೊದಲ ರ‍್ಯಾಂಕ್‌ ಗಳಿಸಿದ್ದಾರೆ. ಜಾರ್ಖಂಡ್‌ನ ಉನ್ಮೇಶ್‌ ರಾಯ್‌  ಎರಡನೇ ಹಾಗೂ ಆಂಧ್ರಪ್ರದೇಶದ ತಲಾರಿ ವೆಂಕಟ ದಿನೇಶ್‌ ಆದಿತ್ಯ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ಬೆಂಗಳೂರಿನ ಶ್ರೀ ಚೈತನ್ಯ ಶಾಲೆಯ ನಿಖಿಲ್‌ 165 ಅಂಕಗಳನ್ನು ಗಳಿಸಿ 5ನೇ ರ‍್ಯಾಂಕ್‌, ಬೆಂಗಳೂರಿನ ಮತ್ತೊಬ್ಬ ವಿದ್ಯಾರ್ಥಿ ಪ್ರತೀಕ್‌ ಸಹ 165 ಅಂಕಗಳನ್ನು ಪಡೆದು ಆರನೇ ರ‍್ಯಾಂಕ್‌ ಗಳಿಸಿದ್ದಾರೆ.

ADVERTISEMENT

137 ನಗರಗಳ 291 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.  ಇದೇ 17ರಂದು ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಇದರ ಅನ್ವಯ 77 ವಿದ್ಯಾರ್ಥಿಗಳು ಉತ್ತರಗಳ ಬಗ್ಗೆ ಸ್ಪಷ್ಟೀಕರಣ ಕೇಳಿದ್ದರು.

‌ಮೊದಲ 5,000 ರ‍್ಯಾಂಕ್ ಪಡೆದವರ ಪೈಕಿ 3955 ವಿದ್ಯಾರ್ಥಿಗಳು ಶೇ 70ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಉಳಿದ 1045 ಮಂದಿ ಶೇ 67.78ಕ್ಕಿಂತ ಹೆಚ್ಚು ಹಾಗೂ ಶೇ 70ಕ್ಕಿಂತ ಕಡಿಮೆ ಅಂಕ ಗಳಿಸಿದ್ದಾರೆ.

ಕರ್ನಾಟಕದ 42 ವಿದ್ಯಾರ್ಥಿಗಳು ಮೊದಲ 100 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಮೊದಲ 1,000 ರ‍್ಯಾಂಕ್‌ನಲ್ಲಿ ಕರ್ನಾಟಕದ 284 ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿಗಳ ವೈಯಕ್ತಿಕ ಅಂಕ ಮತ್ತು ವಿವರಗಳು ವೆಬ್‌ಸೈಟ್‌ನಲ್ಲಿ (www.comedk.org) ಲಭ್ಯವಿದೆ ಎಂದು ಕಾಮೆಡ್‌–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಸ್‌. ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಮತ್ತು ಕೌನ್ಸೆಲಿಂಗ್‌ ಸಂಬಂಧಿಸಿದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು’ ಎಂದೂ ವಿವರಿಸಿದ್ದಾರೆ.

* ತರಗತಿಯಲ್ಲಿನ ಪಾಠಗಳನ್ನು ಆಗ್ಗಿಂದಾಗೆ ಮನನ ಮಾಡಿಕೊಳ್ಳುತ್ತಿದ್ದೆ. ಗಿಟಾರ್‌ ನುಡಿಸುವುದು, ಟೆಬಲ್‌ ಟೆನ್ನಿಸ್‌ ಆಡುವ ಹವ್ಯಾಸ ಇದ್ದರೂ ಓದಿಗೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದೆ. ಮೆಕಾನಿಕಲ್‌ ಅಥವಾ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಓದುವ ಮನಸ್ಸಿದೆ.

–ಆದಿತ್ಯ ದರ್ಭ

ನಿಖಿಲ್‌ ಎಸ್‌. ಪೈ

* ಕಾಲೇಜಿನಲ್ಲಿ ಮಾಡುತ್ತಿದ್ದ ಪಾಠಗಳನ್ನು ಗಮನವಿಟ್ಟು ಕೇಳುತ್ತಿದ್ದೆ. ಎಲ್ಲಾ ಸಮಯದಲ್ಲಿಯೂ ಓದಿನ ಬಗ್ಗೆ ಯೋಚಿಸುತ್ತಿದ್ದೆ. ಹೀಗಾಗಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಯಿತು. ಎಲೆಕ್ಟ್ರಾನಿಕ್‌ ಎಂಜಿನಿಯರ್‌ ಆಗುವ ಕನಸಿದೆ.

–ನಿಖಿಲ್‌ ಎಸ್‌. ಪೈ

ಪ್ರತೀಕ್‌ ಸಂಜಯ್‌

* ಸಿಇಟಿಗೆ ನಡೆಸಿದ ಅಭ್ಯಾಸವನ್ನೇ ಇದಕ್ಕೂ ಮುಂದುವರೆಸಿದೆ. ಪರೀಕ್ಷಾ ಸಮಯದಲ್ಲಿ ಬೇರೆ ಯಾವುದರ ಬಗ್ಗೆಯೂ ಯೋಚಿಸುತ್ತಿರಲಿಲ್ಲ. ಓದಿನ ಬಗ್ಗೆಯೇ ಗಮನ ಕೇಂದ್ರೀಕರಿಸಿಕೊಂಡಿದ್ದೆ. ಮುಂದೆ ಯಾವ ಕೋರ್ಸ್‌ ಆಯ್ಕೆ ಮಾಡಬೇಕು, ಯಾವ ಕಾಲೇಜಿಗೆ ಸೇರಬೇಕು ಎಂಬ ಬಗ್ಗೆ ಇನ್ನೂ ಗೊಂದಲದಲ್ಲಿದ್ದೇನೆ

–ಪ್ರತೀಕ್‌ ಸಂಜಯ್‌

ಮುಖ್ಯಾಂಶಗಳು

* 76,414 ಪರೀಕ್ಷೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು

* 62,306 ಪರೀಕ್ಷೆ ಬರೆದ ವಿದ್ಯಾರ್ಥಿಗಳು

* 21,889 ಕರ್ನಾಟಕದ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.