ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಧಿಕೃತ ನಿವಾಸ `ಕಾವೇರಿ~ಯಲ್ಲಿ ಬೆಂಬಲಿಗರ ಸಂಭ್ರಮ, ಅಭಿನಂದನೆಗಳ ಸುರಿಮಳೆ... ಆದರೆ `ಕಾವೇರಿ~ಗೆ ಹೊಂದಿಕೊಂಡಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಅಧಿಕೃತ ನಿವಾಸ `ಅನುಗ್ರಹ~ದಲ್ಲಿ ನೀರವ ಮೌನ...
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಶೆಟ್ಟರ್ ಎಂದು ಭಾನುವಾರ ದೆಹಲಿಯಲ್ಲಿ ಘೋಷಣೆ ಮಾಡಿದ ನಂತರ ಶೆಟ್ಟರ್ ನಿವಾಸದಲ್ಲಿ ಬೆಂಬಲಿಗರ ಸಡಗರ ಮುಗಿಲು ಮುಟ್ಟಿದೆ. ಸಚಿವರು, ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಶೆಟ್ಟರ್ ಅವರನ್ನು ಸೋಮವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
ವರಿಷ್ಠರ ಆದೇಶದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿರುವ ಸದಾನಂದ ಗೌಡ ಅವರ ನಿವಾಸಕ್ಕೆ ಸಚಿವರಾದ ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಪಿ. ಯೋಗೇಶ್ವರ್, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಆಪ್ತ ಸಚಿವರು, ಶಾಸಕರು ಭೇಟಿ ನೀಡಿದ್ದರು. ಆದರೆ ಅವರ ಮುಖ ಗಂಟಿಕ್ಕಿತ್ತು. ಶೆಟ್ಟರ್ ಸಂಪುಟದಲ್ಲಿ ಸದಾನಂದ ಗೌಡ ಬೆಂಬಲಿಗರಿಗೆ ಸ್ಥಾನ ಸಿಗುವಂತೆ ನೋಡಿಕೊಳ್ಳುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಯಾಯಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿ ಎಂದು ಇದೇ ಸಂದರ್ಭದಲ್ಲಿ ಸದಾನಂದಗೌಡ ಅವರನ್ನು ಸಚಿವರು ಒತ್ತಾಯಿಸಿದರು ಎನ್ನಲಾಗಿದೆ.
ಸಂಸದ ಶಿವರಾಮೇಗೌಡ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯ ಶಾಸಕರು ಶೆಟ್ಟರ್ ಅವರನ್ನು ಭೇಟಿಯಾಗಿ ತಮ್ಮ ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದರು.
`ಇಂತಹವರನ್ನೇ ಸಚಿವರನ್ನಾಗಿ ಮಾಡಿ ಎಂದು ನಾವು ಹೇಳುವುದಿಲ್ಲ. ಆದರೆ ಕೊಪ್ಪಳ ಜಿಲ್ಲೆಗೆ ಪ್ರಾತಿನಿಧ್ಯ ನೀಡಿ, ಜಿಲ್ಲೆಯವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು~ ಎಂದು ಶಿವರಾಮೇಗೌಡ ಆಗ್ರಹಿಸಿದರು.
ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಎಂ. ಉದಾಸಿ, ಶಾಸಕರಾದ ಸಿ.ಟಿ. ರವಿ, ಚಂದ್ರಕಾಂತ ಬೆಲ್ಲದ, ಕಳಕಪ್ಪ ಬಂಡಿ, ಶಶಿಲ್ ನಮೋಶಿ ಸೇರಿದಂತೆ ಹಲವು ಶಾಸಕರು ಶೆಟ್ಟರ್ ಅವರನ್ನು ಭೇಟಿಯಾದರು. ನಗರ ಪೊಲೀಸ್ ಕಮೀಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಸೇರಿದಂತೆ ಬೆಳಿಗ್ಗೆಯಿಂದ ಸಂಜೆಯವರೆಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಶೆಟ್ಟರ್ ಅವರನ್ನು ಭೇಟಿಯಾಗಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಅರಮನೆ ಆವರಣದಲ್ಲಿ ವ್ಯವಸ್ಥೆ |
ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಐದು ಸಾವಿರ ಜನರು ಬರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರೆಲ್ಲರಿಗೆ ನಗರದ ಅರಮನೆ ಮೈದಾನದ ಆವರಣದಲ್ಲಿರುವ `ಗಾಯತ್ರಿ ವಿಹಾರ~ದಲ್ಲಿ ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿಂದಲೇ ಪ್ರಮಾಣವಚನ ಕಾರ್ಯಕ್ರಮ ವೀಕ್ಷಿಸಲು (ಬೃಹತ್ ಪರದೆಗಳ ಮೂಲಕ) ಅವಕಾಶ ಕಲ್ಪಿಸಲಾಗುತ್ತದೆ. ಬುಧವಾರ ಬೆಳಿಗ್ಗೆ ಬೆಂಗಳೂರಿಗೆ ಬರಲಿರುವ ಬೆಂಬಲಿಗರಿಗೆ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಕಾರ್ಯಕ್ರಮದ ನಂತರ ಅವರೆಲ್ಲ ವಾಪಸ್ ತೆರಳುವುದರಿಂದ ರಾತ್ರಿ ಊಟಕ್ಕೆ ಆಹಾರದ ಪೊಟ್ಟಣ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ರಾಜಭವನದಲ್ಲಿ ಹೆಚ್ಚಿನ ಜನರಿಗೆ ಸ್ಥಳಾವಕಾಶ ಇಲ್ಲದಿರುವುದು ಹಾಗೂ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅರಮನೆ ಆವರಣದಲ್ಲಿಯೇ ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಶೆಟ್ಟರ್ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಗಾಯತ್ರಿ ವಿಹಾರಕ್ಕೆ ತೆರಳಿ ಜನರನ್ನು ಭೇಟಿಯಾಗಲಿದ್ದಾರೆ. |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.