ADVERTISEMENT

ಕೃಷ್ಣಯ್ಯ ಮೊಗವೀರ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನ ಬಾಂಗಿ ವಿಮಾನ ನಿಲ್ದಾಣದಲ್ಲಿ ಫ್ರೆಂಚ್ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಕುಂದಾಪುರ ತಾಲ್ಲೂಕಿನ ಬಳ್ಕೂರಿನ ಕೃಷ್ಣಯ್ಯ ಮೊಗವೀರ ಅವರ ಮನೆಗೆ ಸೋಮವಾರ ಭೇಟಿ ನೀಡಿದ ಫ್ರಾನ್ಸ್ ಕಾನ್ಸುಲೇಟ್ ಜನರಲ್‌ನ ಲೆರಿಕ್ ಲೆವರ್ಟೊ ಅವರು ಕೃಷ್ಣಯ್ಯ ಮೊಗವೀರ ಅವರ ತಂದೆ ನಾರಾಯಣ ಮೊಗವೀರ ಅವರಿಗೆ ಸಾಂತ್ವನ ಹೇಳಿದರು
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನ ಬಾಂಗಿ ವಿಮಾನ ನಿಲ್ದಾಣದಲ್ಲಿ ಫ್ರೆಂಚ್ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಕುಂದಾಪುರ ತಾಲ್ಲೂಕಿನ ಬಳ್ಕೂರಿನ ಕೃಷ್ಣಯ್ಯ ಮೊಗವೀರ ಅವರ ಮನೆಗೆ ಸೋಮವಾರ ಭೇಟಿ ನೀಡಿದ ಫ್ರಾನ್ಸ್ ಕಾನ್ಸುಲೇಟ್ ಜನರಲ್‌ನ ಲೆರಿಕ್ ಲೆವರ್ಟೊ ಅವರು ಕೃಷ್ಣಯ್ಯ ಮೊಗವೀರ ಅವರ ತಂದೆ ನಾರಾಯಣ ಮೊಗವೀರ ಅವರಿಗೆ ಸಾಂತ್ವನ ಹೇಳಿದರು   

ಕುಂದಾಪುರ: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನ ರಾಜಧಾನಿ ಬಾಂಗಿ ವಿಮಾನ ನಿಲ್ದಾಣದ ಬಳಿ ಮಾರ್ಚ್ 25 ರಂದು  ಬಂಡುಕೋರರು ಎನ್ನುವ ಸಂಶಯದಿಂದ ಫ್ರೆಂಚ್ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಕುಂದಾಪುರ ತಾಲ್ಲೂಕಿನ ಕೃಷ್ಣಯ್ಯ ಮೊಗವೀರ (37) ಅವರ ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾಹ್ನ ಮೊಗವೀರ ಅವರ ತಾಯಿ ಮನೆಯಾದ ಕಂದಾವರ ಸಮೀಪದ ಬಳ್ಕೂರಿಗೆ ತಂದು ಅಂತ್ಯಸಂಸ್ಕಾರ ನಡೆಸಲಾಯಿತು.

ಭಾನುವಾರ ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮೃತದೇಹ ಸೋಮವಾರ ಇಲ್ಲಿಗೆ ಬರುತ್ತದೆ ಎನ್ನುವ ಮಾಹಿತಿಯಿಂದ ಊರಿನವರು ಹಾಗೂ ಕುಟುಂಬದವರು ಬೆಳಿಗ್ಗೆಯಿಂದಲೇ ಬಳ್ಕೂರಿನ ಅವರ ಮನೆಯ ಸಮೀಪ ಸೇರಿದ್ದರು.

ಮಧ್ಯಾಹ್ನ ಸುಮಾರು 2.45 ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಆಂಬುಲೆನ್ಸ್‌ನಲ್ಲಿ ತರಲಾದ ಶವವಿದ್ದ ಪೆಟ್ಟಿಗೆಯನ್ನು ಇಳಿಸುತ್ತಿದ್ದಂತೆ ಬಂಧುಗಳ, ಸ್ನೇಹಿತರ ದುಃಖದ ಕಟ್ಟೆಯೊಡೆಯಿತು. ತಂದೆ, ತಾಯಿ, ಪತ್ನಿ, ಸಹೋದರರು ಹಾಗೂ ಸಹೋದರಿಯರು ಬಿಕ್ಕಿ ಬಿಕ್ಕಿ ಅತ್ತರು. ಸಾರ್ವಜನಿಕರ ದರ್ಶನದ ಬಳಿಕ ಮನೆಯ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಫ್ರಾನ್ಸ್‌ನ ಕಾನ್ಸುಲೇಟ್ ಜನರಲ್‌ನ ಲೆರಿಕ್ ಲೆವರ್ಟೊ, ಸಹಾಯಕ ಭಾರತೀಯ ವಕ್ತಾರೆ ಹೇಮಾಂಗಿನಿ ರಕ್ಷಿತ್ ಅವರು ಮೊಗವೀರನ ಮನೆಗೆ ಬೆಳಿಗ್ಗೆಯೇ ಭೇಟಿ ನೀಡಿ ಸಾಂತ್ವನ ಹೇಳಿದರು. ಫ್ರಾನ್ಸ್ ಸರ್ಕಾರ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದೆ. ತನಿಖಾ ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಕುಟುಂಬಕ್ಕೆ  ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ನಿರ್ಲಕ್ಷ್ಯಕ್ಕೆ ಆಕ್ರೋಶ
ವಿದೇಶದಲ್ಲಿ ಘಟನೆ ನಡೆದು ವಾರ ಕಳೆದರೂ ಈವರೆಗೂ ಮೃತ ಕೃಷ್ಣಯ್ಯ ಅವರ ಮನೆಗೆ ಯಾವುದೇ ಸರ್ಕಾರಿ ಅಧಿಕಾರಿಗಳು ಬಾರದೆ ಇರುವುದು ಹಾಗೂ ಪಾರ್ಥಿವ ಶರೀರ ಬರುವಾಗಲೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿ ಕೂಡ ಇಲ್ಲದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಈ ಕುರಿತು ಹೇಳಿಕೆ ನೀಡಿದ ಮುಂಬೈನ ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಸುರೇಶ್ ಕಾಂಚನ್ ಹಾಗೂ ಬಗ್ವಾಡಿ ಸಂಘದ ಶಾಖಾಧ್ಯಕ್ಷ ಎಂ.ಎಂ ಸುವರ್ಣ ಅವರು `ನಮ್ಮ ದೇಶದ ಬಡ ಕುಟುಂಬದ ಯುವಕನೊಬ್ಬ ಈ ರೀತಿಯಲ್ಲಿ ದುರಂತಕ್ಕೆ ಬಲಿಯಾಗಿದ್ದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅವರ ಕುಟುಂಬದ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ. ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಬಾರದೇ ಇರುವುದು ನೋವು ತಂದಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.