ADVERTISEMENT

ಕೇಂದ್ರ ತಿದ್ದುಪಡಿಗೆ ಸಮ್ಮತಿ

ಹೈದರಾಬಾದ್ ಕರ್ನಾಟಕಕ್ಕೆ `ವಿದರ್ಭ ಮಾದರಿ' ವಿಶೇಷ ಸ್ಥಾನಮಾನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಸುವರ್ಣ ವಿಧಾನಸೌಧ (ಬೆಳಗಾವಿ): ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವ ಮಸೂದೆ ಹಿಂದಕ್ಕೆ ಪಡೆಯಬೇಕೆಂಬ ಶಿಫಾರಸನ್ನು ವಾಪಸ್ ಪಡೆಯುವಂತೆ ಕೋರಿ, ಗೃಹ ಇಲಾಖೆಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.

ಸಂಸತ್ತಿನ ಸ್ಥಾಯಿ ಸಮಿತಿ ಮಾಡಿರುವ ಶಿಫಾರಸು ಹಿಂದಕ್ಕೆ ಪಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ವಿಧಾನಸಭೆಯಲ್ಲಿ ಒತ್ತಾಯಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು, `ಸೋಮವಾರ ಬೆಳಿಗ್ಗೆ ದೂರವಾಣಿ ಮೂಲಕ ವೆಂಕಯ್ಯ ನಾಯ್ಡು ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದೇನೆ. ಶಿಫಾರಸು ಹಿಂದಕ್ಕೆ ಪಡೆಯುವಂತೆ ಕೋರಿ ಪತ್ರವನ್ನೂ ಬರೆದಿದ್ದೇನೆ' ಎಂದರು.

ಆಂಧ್ರಪ್ರದೇಶದ ತೆಲಂಗಾಣ ಪ್ರಾಂತ್ಯಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 371(ಡಿ) ಕಲಂ ಮಾದರಿಯಲ್ಲೇ ಹೈದರಾಬಾದ್-ಕರ್ನಾಟಕಕ್ಕೂ ವಿಶೇಷ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ತೆಲಂಗಾಣ ಹಾಗೂ ಮಹಾರಾಷ್ಟ್ರದ ವಿದರ್ಭ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿರುವ ತಿದ್ದುಪಡಿ ಮಸೂದೆಗಳಲ್ಲಿನ ಉತ್ತಮ ಅಂಶಗಳನ್ನು ಸೇರಿಸಿ 371(ಜೆ) ಮಸೂದೆ  ಸಿದ್ಧಪಡಿಸಿದೆ. ವಿಧಾನಮಂಡಲ ಮತ್ತು ಚುನಾಯಿತ ಸರ್ಕಾರದ ಅಧಿಕಾರ ಮೊಟಕು ಮಾಡುವಂತಹ ನಿಯಮಗಳನ್ನು ಬದಲಿಸುವಂತೆ ರಾಜ್ಯ ಸರ್ಕಾರ ಕೋರಿತ್ತು ಎಂದರು.

ರಾಜ್ಯ ಸರ್ಕಾರದ ಜೊತೆ ಸಮಾಲೋಚಿಸದೇ ಮಸೂದೆ ಸಿದ್ಧಪಡಿಸಿರುವ ಕಾರಣಕ್ಕಾಗಿ ಅದನ್ನು ಹಿಂದಕ್ಕೆ ಪಡೆಯುವಂತೆ ಸಂಸತ್ತಿನ ಸ್ಥಾಯಿ ಸಮಿತಿ ಶಿಫಾರಸು ಮಾಡಿತ್ತು. ಆದರೆ, ಸಂಸತ್ತಿನ ಈ ಅಧಿವೇಶನದಲ್ಲೇ ಮಸೂದೆ ಅಂಗೀಕಾರವಾಗಬೇಕೆಂಬ ಜನಾಭಿಪ್ರಾಯ ಗಣನೆಗೆ ತೆಗೆದುಕೊಂಡು ರಾಜ್ಯ ಸರ್ಕಾರ ಆಕ್ಷೇಪವನ್ನು ಹಿಂದಕ್ಕೆ ಪಡೆದಿದೆ. ಅದರ ಆಧಾರದಲ್ಲೇ ಶಿಫಾರಸು ವಾಪಸ್ ಪಡೆಯುವಂತೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ. ತಕ್ಷಣವೇ ಸಮಿತಿಯ ಸಭೆ ಕರೆದು, ಶಿಫಾರಸು ಹಿಂದಕ್ಕೆ ಪಡೆಯುವ ಭರಸೆಯನ್ನು ವೆಂಕಯ್ಯ ನಾಯ್ಡು ನೀಡಿದ್ದಾರೆ ಎಂದರು.

ಅವಕಾಶ ಕೈ ತಪ್ಪಬಾರದು: ಹೈದರಾಬಾದ್-ಕರ್ನಾಟಕದ ಜನರ ಸುದೀರ್ಘ ಹೋರಾಟ  ಮನ್ನಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಂತದಲ್ಲಿ ಮಸೂದೆ ಅಂಗೀಕಾರಕ್ಕೆ ಅಡ್ಡಿ ಎದುರಾಗಬಾರದು. ಈ ಅಧಿವೇಶನದಲ್ಲೇ ಮಸೂದೆಗೆ ಒಪ್ಪಿಗೆ ದೊರೆಯಬೇಕು. ಬಜೆಟ್ ಅಧಿವೇಶನದಲ್ಲಿ ಇಂತಹ ಮಸೂದೆಗಳ ಚರ್ಚೆ ಮತ್ತು ಅಂಗೀಕಾರಕ್ಕೆ ಅವಕಾಶ ದೊರೆಯುವುದಿಲ್ಲ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕು ಎಂದು ಸಿದ್ದರಾಮಯ್ಯ ಸಲಹೆ ಮಾಡಿದರು.

ಕಾವೇರಿ- ಕೇಂದ್ರಕ್ಕೆ ಸರ್ವಪಕ್ಷ ನಿಯೋಗ:  ಕಾವೇರಿ ನ್ಯಾಯಮಂಡಳಿಯ ಐತೀರ್ಪನ್ನು ಅಧಿಸೂಚನೆಯಲ್ಲಿ ಪ್ರಕಟಿಸದಂತೆ ಪ್ರಧಾನಿ ಮೇಲೆ ಒತ್ತಡ ಹೇರಲು ಶೀಘ್ರದಲ್ಲೇ ದೆಹಲಿಗೆ ಸರ್ವಪಕ್ಷಗಳ ನಿಯೋಗ ಕರೆದೊಯ್ಯಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಧಾನಸಭೆಯಲ್ಲಿ ಪ್ರಕಟಿಸಿದರು.

ಮಂಗಳವಾರ ಸದನದ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಹಲವು ಅರ್ಜಿಗಳು ಇನ್ನೂ ಇತ್ಯರ್ಥಕ್ಕೆ ಬಾಕಿ ಇವೆ. ಈ ಸಂದರ್ಭದಲ್ಲಿ ನ್ಯಾಯಮಂಡಳಿಯ ಐತೀರ್ಪನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದರೆ ರಾಜ್ಯಕ್ಕೆ ಹಿನ್ನಡೆ ಆಗುತ್ತದೆ. ಈ ಪ್ರಕ್ರಿಯೆ ನಡೆಯದಂತೆ ಕೇಂದ್ರದ ಮೇಲೆ ಒತ್ತಡ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ರೂಪದಲ್ಲೇ ಮಸೂದೆ: ಸಲಹೆ

ನವದೆಹಲಿ: ಹೈದರಾಬಾದ್- ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಈಗಿರುವ ಸ್ವರೂಪದಲ್ಲಿ ಸ್ವೀಕರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಲು ಸಂಸದೀಯ ಸ್ಥಾಯಿ ಸಮಿತಿ ನಿರ್ಧರಿಸಿದೆ.

ಎಂ.ವೆಂಕಯ್ಯ ನಾಯ್ಡು ನೇತೃತ್ವದ ಗೃಹ ವ್ಯವಹಾರಗಳ ಕುರಿತ ಸ್ಥಾಯಿ ಸಮಿತಿಯು ಮಂಗಳವಾರ ಸಭೆ ನಡೆಸಿ,  ಸಾರ್ವಜನಿಕರ ಮತ್ತು ರಾಜಕೀಯ ಮುಖಂಡರ ಒತ್ತಡದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.  ಸಮಿತಿಯು ಇನ್ನು ಒಂದು ಅಥವಾ ಎರಡು ದಿನದೊಳಗೆ ಸರ್ಕಾರಕ್ಕೆ ಈ ಸಂಬಂಧ ಸಲಹೆ ನೀಡುವ ಸಾಧ್ಯತೆ ಇದೆ. ನಂತರ, ಗೃಹ ಸಚಿವಾಲಯವು ಪ್ರಸ್ತುತ ಅಧಿವೇಶನದ ಸಂದರ್ಭದಲ್ಲೇ ಮಸೂದೆಯನ್ನು ಸಂಸತ್ತಿನ ಮುಂದಿಡುವ ಯೋಜನೆ ಹೊಂದಿದೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.