ADVERTISEMENT

ಕೇಂದ್ರ ಮಾಡಿದ್ದೇನು,‌ ರಾಜ್ಯ ಅನುಷ್ಠಾನಗೊಳಿಸಿದ್ದೇನು? ಬಿಜೆಪಿ ಚರ್ಚೆಗೆ ಬರಲಿ: ಸಿದ್ದರಾಮಯ್ಯ ಸವಾಲು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 16:01 IST
Last Updated 28 ಏಪ್ರಿಲ್ 2018, 16:01 IST
ಕೆ.ಎಚ್. ಬಾಳೇಕುಂದ್ರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆ.
ಕೆ.ಎಚ್. ಬಾಳೇಕುಂದ್ರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆ.   

ಬೆಳಗಾವಿ: ‘ಒಂದೇ ವೇದಿಕೆಗೆ ಬರಲಿ ಅಭಿವೃದ್ಧಿ ಬಗ್ಗೆ ಜನರ ಮುಂದೆ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದೇನೆ‌’. ಲೆಕ್ಕ ಕೊಡಲು ನಾವು ತಯಾರಿದ್ದೇವೆ. ಅವರಿಗೆ ತಾಕತ್ತಿಲ್ಲ. ಅಪಪ್ರಚಾರ ಮಾಡಿಕೊಂಡು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿ,‌ ಅಮಿತ್ ಶಾ, ಯಡಿಯೂರಪ್ಪಗೆ ಅಭಿವೃದ್ಧಿ ಬಗ್ಗೆ ಆಸಕ್ತಿ ಇಲ್ಲ. ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತಿ ಸಾಮರಸ್ಯ ಹಾಳು ಮಾಡೋದೇ ಬಿಜೆಪಿ ಧ್ಯೇಯ ಹಾಗೂ ಉದ್ದೇಶ. ಆ ಪಕ್ಷ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು ಎಂದರು.

ಬೆಳಗಾವಿ ತಾಲ್ಲೂಕಿನ ಕೆ.ಎಚ್.ಬಾಳೇಕುಂದ್ರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿದರು.

ADVERTISEMENT

‘ಪಕ್ಷದ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಕಳೆದ ಚುನಾವಣೆಯಲ್ಲಿ ಸೋತೆ ಎಂದು ಮನೆಯಲ್ಲಿ ಕೂರಲಿಲ್ಲ. ನಿರಂತರವಾಗಿ ಜನಸೇವೆ ಮಾಡುತ್ತಿದ್ದಾರೆ. ಅಭಿವೃದ್ಧಿ ಪರ ಹಾಗೂ ಜನಪರ ಆಗಿರುವವರು ವಿಧಾನಸಭೆಗೆ ಬಂದರೆ, ಈ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ.

ಇಲ್ಲಿನ ಶಾಸಕರು ಅಭಿವೃದ್ಧಿ ಬಗ್ಗೆ ಬಾಯಿ ಬಿಟ್ಟಿಲ್ಲ. ಇಂಥವರು ಮತ್ತೆ ಶಾಸಕ ಆಗಬಾರದು. ಜನರ ದನಿ ಆಗಿರುವವರನ್ನು ಬೆಂಬಲಿಸಿ. ಮೋಜು, ಶೋಕಿಗೆ ಬರುವವರನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡಬೇಡಿ‌’ ಎಂದರು.

‘ಕರ್ನಾಟಕದ ಇತಿಹಾಸದಲ್ಲಿ ಮುಖ್ಯಮಂತ್ರಿ ಆಗಿದ್ದವರು ಜೈಲಿಗೆ ಹೋಗಿದ್ದರೆ ಅದು ಯಡಿಯೂರಪ್ಪ ಮಾತ್ರ. ಜೈಲಿಗೆ ಹೋಗಿದ್ದ, ಕಳಂಕಿತ ವ್ಯಕ್ತಿ ಮುಖ್ಯಮಂತ್ರಿ ಆಗಬೇಕಾ? ಯಡಿಯೂರಪ್ಪ, ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ’ ಎಂದು ಭವಿಷ್ಯ ನುಡಿದರು.

ರಮೇಶ ಜಾರಕಿಹೊಳಿ, ಧೀರಜ್ ದೇಶಮುಖ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.