ADVERTISEMENT

‘ಕೈ’ಗೆ ಸಿಗದ ಸಿ.ಎಂ; ಪರಮೇಶ್ವರ ಮುನಿಸು?

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 6:48 IST
Last Updated 20 ಮಾರ್ಚ್ 2019, 6:48 IST
   

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಎರಡು ದಿನಗಳಿಂದ ಯತ್ನಿಸಿದರೂ ಅವರು ಕೈಗೆ ಸಿಗದಿರುವುದು ಕೂಡಾ ಮಂಗಳವಾರ ನಡೆದ ಮೈತ್ರಿಕೂಟದ ಸಭೆಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಗೈರಾಗಲು ಕಾರಣ ಎನ್ನಲಾಗಿದೆ.

ತುಮಕೂರು ಕ್ಷೇತ್ರ ಜೆಡಿಎಸ್‌ ಪಾಲಾಗಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಪರಮೇಶ್ವರ, ಆ ಕ್ಷೇತ್ರವನ್ನು ಮರಳಿ ಪಕ್ಷದ ತೆಕ್ಕೆಗೆ ತರಲು ಪ್ರಯತ್ನಿಸಿದ್ದರು. ಆದರೆ, ಈ ಬೇಡಿಕೆಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.

ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಪರಮೇಶ್ವರ ಅವರ ಅಧೀನದಲ್ಲಿ ಬಿಎಂಆರ್‌ಡಿಎ, ಬಿಡಿಎ, ಜಲಮಂಡಳಿ, ಬಿಬಿಎಂಪಿ ಇದೆ. ಆದರೆ, ಮುಖ್ಯಮಂತ್ರಿಯವರ ಸೂಚನೆ ಇಲ್ಲದೆ ಇಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎನ್ನಲಾಗಿದ್ದು, ಇದರಿಂದಲೂ ಪರಮೇಶ್ವರ ಬೇಸರಗೊಂಡಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

‘ಪಕ್ಷದಲ್ಲೂ ನನ್ನ ಮಾತಿಗೆ ಬೆಲೆ ಇಲ್ಲ. ಸರ್ಕಾರದಲ್ಲೂ ಯಾವುದೇ ಕೆಲಸಗಳು ಆಗುತ್ತಿಲ್ಲ. ನನ್ನ ಅವಶ್ಯಕತೆ ಇಲ್ಲ ಎಂದ ಮೇಲೆ ಮೈತ್ರಿಕೂಟದ ಸಭೆಯಲ್ಲಿ ನಾನು ಭಾಗವಹಿಸುವ ಅಗತ್ಯವೇನಿದೆ’ ಎಂದು ತಮ್ಮ ಆಪ್ತರ ಬಳಿ ಪರಮೇಶ್ವರ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಮಂಗಳವಾರ ಬೆಳಿಗ್ಗೆ ಬೆಂಗಳೂರಿನಲ್ಲೇ ಇದ್ದ ಪರಮೇಶ್ವರ, ಸಭೆ ನಡೆಯುವ ಸಮಯದಲ್ಲಿ ತುಮಕೂರಿಗೆ ತೆರಳಿದ್ದರು. ಅಲ್ಲದೆ, ತಮ್ಮ ಬೆಂಗಾವಲು ವಾಹನವನ್ನು ಬೆಂಗಳೂರಿನಲ್ಲೇ ಬಿಟ್ಟು ಹೋಗಿದ್ದರು.

ಪೂಜೆ ಸಲ್ಲಿಸಿದ ಸುಮಲತಾ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಲಿರುವ ಸುಮಲತಾ ಅಂಬರೀಷ್‌, ಕಂಠೀರವ ಸ್ಟುಡಿಯೋದಲ್ಲಿರುವ ಪತಿ ಅಂಬರೀಷ್‌ ಸಮಾಧಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಸಮಾಧಿ ಸ್ಥಳದಲ್ಲಿ ನಾಮಪತ್ರ ಇಟ್ಟು ಸುಮಲತಾ ಕೆಲಹೊತ್ತು ಮೌನಕ್ಕೆ ಶರಣಾದರು. ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ನಟ ದೊಡ್ಡಣ್ಣ ಜೊತೆಗೆ ಇದ್ದರು. ನಾಮಪತ್ರ ಸಲ್ಲಿಸುವ ವೇಳೆ ನಟ ದರ್ಶನ್, ಯಶ್‌‌ ಸೇರಿದಂತೆ‌‌ ಚಿತ್ರರಂಗದ ಹಲವು ತಾರೆಯರು ಭಾಗವಹಿಸ
ಲಿದ್ದಾರೆ.

ಕಾಂಗ್ರೆಸ್‌ ಸಭೆ ಇಂದು: ಬೆಂಗಳೂರು ದಕ್ಷಿಣ, ಕೇಂದ್ರ, ಉತ್ತರಕನ್ನಡ, ಉಡುಪಿ– ಚಿಕ್ಕಮಗಳೂರು ಮತ್ತು ಹಾಸನ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್‌ ಪ್ರಮುಖರ ಸಭೆ ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ.

ಈ ಕ್ಷೇತ್ರಗಳ ಪೈಕಿ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷ ಅಭ್ಯರ್ಥಿ ಕೊರತೆಯನ್ನು ಎದುರಿಸುತ್ತಿದೆ. ಕೇಂದ್ರದ ಟಿಕೆಟ್‌ಗಾಗಿ ಆ ಪಕ್ಷದ 4–5 ಅಭ್ಯರ್ಥಿಗಳು ಲಾಬಿ ನಡೆಸುತ್ತಿದ್ದಾರೆ. ಕ್ಷೇತ್ರ ಹಂಚಿಕೆಯ ಪರಿಣಾಮ ಉತ್ತರ ಕನ್ನಡ, ಉಡುಪಿ– ಚಿಕ್ಕಮಗಳೂರು ಮತ್ತು ಹಾಸನ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

ಈ ಐದೂ ಕ್ಷೇತ್ರಗಳಲ್ಲಿ ಪಕ್ಷದ ಸ್ಥಳೀಯಮಟ್ಟದ ನಾಯಕರು ಮತ್ತು ಕಾರ್ಯಕರ್ತರಲ್ಲಿರುವ ಗೊಂದಲಗಳನ್ನು ಪರಿಹರಿಸುವ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಈ ಸಭೆ ಕರೆದಿದ್ದಾರೆ.

ಸಿದ್ದರಾಮಯ್ಯ– ಯೋಗಾ ರಮೇಶ್ ಚರ್ಚೆ
ಬಿಜೆಪಿ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್ ಅವರು ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದ ಮಾಜಿ ಸಚಿವ ಎ. ಮಂಜು ಇತ್ತೀಚೆಗೆ ಬಿಜೆಪಿಗೆ ಸೇರಿದ್ದರು. ಮಂಜು ಸೇರ್ಪಡೆಗೆ ಯೋಗಾ ರಮೇಶ್ ವಿರೋಧ ವ್ಯಕ್ತಪಡಿಸಿದ್ದರು. ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿಯಿಂದ ಮಂಜು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.