ADVERTISEMENT

ಕೊಡಿಗೇಹಳ್ಳಿ - ಹಲ್ಲೆಗೊಳಗಾದ ಮಹಿಳೆಗೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 19:45 IST
Last Updated 14 ಜೂನ್ 2019, 19:45 IST
   

ರಾಮನಗರ: ಬೆಂಗಳೂರು ಹೊರವಲಯದ ಕೊಡಿಗೇಹಳ್ಳಿಯಲ್ಲಿಗುರುವಾರ ಹಲ್ಲೆಗೆ ಒಳಗಾಗಿದ್ದ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ರಾಮನಗರದ ಸಾಂತ್ವನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ತಾವರೆಕರೆ ಠಾಣೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದು, ಅವೆರಲ್ಲರೂ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಇದ್ದು, ಮಹಿಳೆಯನ್ನು ಅಲ್ಲಿಯೇ ಬಿಡುವ ಬದಲಿಗೆ ರಾಮನಗರಕ್ಕೆ ಕರೆತರಲಾಗಿದೆ.

ಧರ್ಮಸ್ಥಳದಲ್ಲಿ ಭೇಟಿ: ‘ಹಲ್ಲೆಗೆ ಒಳಗಾದ ಮಹಿಳೆ ರಾಜಮಣಿ ಅವರು ಕೊಡಿಗೆಹಳ್ಳಿಯಲ್ಲಿ ಜನರಿಂದ ಚೀಟಿ ವ್ಯವಹಾರ ನಡೆಸಿ ಹಣ ಸಂಗ್ರಹಿಸಿದ್ದರು. ಹೀಗೆ ಸುಮಾರು ₹11.5 ಲಕ್ಷ ಸಂಗ್ರಹ ಮಾಡಿದ್ದರು. ಆದರೆ ಚೀಟಿ ಹಾಕಿದವರಿಗೆ ಹಣ ನೀಡದೇ ಕಳೆದ ಏಪ್ರಿಲ್‌ನಲ್ಲಿ ಪರಾರಿ ಆಗಿದ್ದರು’ ಎಂದು ಹಲ್ಲೆ ಪ್ರಕರಣದ ಆರೋಪಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ADVERTISEMENT

‘ನಾಲ್ಕೈದು ದಿನದ ಹಿಂದೆ ಕೊಡಿಗೇಹಳ್ಳಿಯ ಕೆಲವರು ಧರ್ಮಸ್ಥಳಕ್ಕೆ ಹೋಗಿದ್ದ ವೇಳೆ ಅಲ್ಲಿ ರಾಜಮಣಿ ಸಿಕ್ಕಿದ್ದರು. ಬಳಿಕ ಆಕೆಯನ್ನು ಚಾಮರಾಜನಗರದ ಪತಿಯ ಮನೆಗೆ ಕರೆದೊಯ್ದೆವು. ಆದರೆ ಆಕೆಯ ಪತಿ ತಮಗೆಸಂಬಂಧವಿಲ್ಲ ಎಂಬಂತೆ ವರ್ತಿಸಿದರು. ಇದರಿಂದ ಮಹಿಳೆಯನ್ನು ವಾಪಸ್‌ಕೊಡಿಗೇಹಳ್ಳಿಗೆ ಕರೆತಂದು ಪಂಚಾಯಿತಿ ನಡೆಸಿದೆವು. ಈಸಂದರ್ಭ ಕೆಲವರು ಆಕೆಯನ್ನು ವಿದ್ಯುತ್‌‌ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದರು’ ಎಂದು ಆರೋಪಿಗಳು ಹೇಳಿದ್ದಾರೆ.

ಆದರೆ, ಹಣ ವಂಚನೆ ಆರೋಪದ ಮೇಲೆ ರಾಜಮಣಿ ವಿರುದ್ಧ ಯಾವ ಗ್ರಾಮಸ್ಥರೂ ದೂರು ದಾಖಲಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.