ADVERTISEMENT

ಕೊಲೆಗೆ ಪ್ರಚೋದನೆ; ಭಾಸ್ಕರ್ ಪ್ರಸಾದ್ ವಿರುದ್ಧ ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ದೂರು

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 17:36 IST
Last Updated 2 ಜೂನ್ 2018, 17:36 IST
ಕೊಲೆಗೆ ಪ್ರಚೋದನೆ; ಭಾಸ್ಕರ್ ಪ್ರಸಾದ್ ವಿರುದ್ಧ ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ದೂರು
ಕೊಲೆಗೆ ಪ್ರಚೋದನೆ; ಭಾಸ್ಕರ್ ಪ್ರಸಾದ್ ವಿರುದ್ಧ ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ದೂರು   

ಬೆಂಗಳೂರು: ‘ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಾಧಾರವಾದ ಪೋಸ್ಟ್ ಪ್ರಕಟಿಸಿರುವ ನೆಲಮಂಗಲದ ನಿವಾಸಿ ಬಿ.ಆರ್. ಭಾಸ್ಕರ್ ಪ್ರಸಾದ್, ನನ್ನನ್ನು ಕೊಲೆ ಮಾಡಲು ದುಷ್ಕರ್ಮಿಗಳನ್ನು ಪ್ರಚೋದಿಸಿದ್ದಾರೆ’ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು, ಡಿ.ಜೆ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

‘ಭಾಸ್ಕರ್ ಪ್ರಸಾದ್‌ನನ್ನು ನನ್ನ ಫೇಸ್‌ಬುಕ್‌ ಖಾತೆಯಿಂದ ಅನ್ ಫ್ರೆಂಡ್ ಮಾಡಿ ಹಲವು ತಿಂಗಳಾಗಿದೆ. ಆತನ ಪೋಸ್ಟ್‌ಗಳನ್ನು ನೇರವಾಗಿ ನೋಡಲು ಆಗುವುದಿಲ್ಲ. ಗುರುವಾರ ರಾತ್ರಿ ಆತ ಮಾಡಿದ್ದ ಪೋಸ್ಟ್‌ನ್ನು ಸ್ನೇಹಿತರೇ ನನ್ನ ಗಮನಕ್ಕೆ ತಂದಿದ್ದರು. ಆ ಪೋಸ್ಟ್‌ನಲ್ಲಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ಅದರ ಹಿಂದೆ ನನ್ನ ಜೀವಕ್ಕೆ ಅಪಾಯ ಉಂಟು ಮಾಡುವ ಸಂಚಿದೆ’ ಎಂದು ದೂರಿನಲ್ಲಿ ದಿನೇಶ್ ಹೇಳಿದ್ದಾರೆ.

‘ಪತ್ರಕರ್ತನಾಗಿ 30 ವರ್ಷ ಸೇವೆ ಸಲ್ಲಿಸಿರುವ ನಾನು, ಸೈದ್ಧಾಂತಿಕವಾಗಿ ಕೋಮುವಾದದ ವಿರುದ್ಧ ಹಾಗೂ ಜಾತ್ಯಾತೀತತೆಯ ಪರವಾದ ಹೋರಾಟದಲ್ಲಿ ಸಕ್ರಿಯನಾಗಿದ್ದೇನೆ. ಇದರಿಂದ ಕೋಮುವಾದಿಗಳ ಕೆಂಗಣ್ಣಿಗೂ ಗುರಿಯಾಗಿದ್ದೇನೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ, ಜೀವ ಬೆದರಿಕೆ ಇರುವ 28 ವ್ಯಕ್ತಿಗಳಲ್ಲಿ ನಾನೂ ಒಬ್ಬ’.

ADVERTISEMENT

‘ಈಗ ಭಾಸ್ಕರ್‌ ಪ್ರಸಾದ್, ನನ್ನ ವಿರುದ್ಧ ನಿರಾಧಾರವಾದ ಆರೋಪ ಮಾಡಿ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿಸುತ್ತಿದ್ದಾನೆ. ಹಲ್ಲೆ, ಕೊಲೆ ಯತ್ನ ನಡೆಸಲು ಪ್ರಚೋದಿಸುತ್ತಿದ್ದಾನೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ’ ಎಂದು ದಿನೇಶ್ ಕೋರಿದ್ದಾರೆ.

ಡಿ.ಜೆ.ಹಳ್ಳಿ ಪೊಲೀಸರು, ‘ಜೀವ ಬೆದರಿಕೆವೊಡ್ಡಿದ (ಐಪಿಸಿ 506) ಆರೋಪದಡಿ ಭಾಸ್ಕರ್ ಪ್ರಸಾದ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ದೂರಿನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.