ADVERTISEMENT

ಕ್ಯಾಷುಯಲ್ ಸೀಟು ಇಂದೇ ಪ್ರಕಟಿಸಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಕ್ಯಾಷುಯಲ್ ಸುತ್ತಿನ ಸೀಟು ಆಯ್ಕೆ ಪಟ್ಟಿಯನ್ನು ಗುರುವಾರ ಬೆಳಿಗ್ಗೆ 11 ಗಂಟೆಗೆ ಪ್ರಕಟಿಸುವಂತೆ ಹೈಕೋರ್ಟ್ ಬುಧವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಆದೇಶಿಸಿದೆ.

ಆಯ್ಕೆ ಪಟ್ಟಿ ಪ್ರಕಟಣೆಯನ್ನು 25ಕ್ಕೆ ಮುಂದೂಡಿ ಪ್ರಾಧಿಕಾರ ಹೊರಡಿಸಿರುವ ಸುತ್ತೋಲೆಯ ರದ್ದತಿಗೆ ಕೋರಿ ಕೆ.ಶ್ರೀಧರ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.

ಸಿಇಟಿ ಕೋಟಾದಡಿ ಸೀಟು ಲಭ್ಯವಾಗಿರುವ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಾಧಿಕಾರ ಗುರುವಾರವೇ ಪ್ರಕಟಿಸಬೇಕು. ಸರ್ಕಾರಿ ಕೋಟಾ ಮೂಲಕ ಸೀಟು ಲಭ್ಯವಾದರೆ, ಕಾಮೆಡ್-ಕೆ ಅಡಿ ಈಗಾಗಲೇ ಸೀಟು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಆ ಸೀಟು ಹಿಂತಿರುಗಿಸಲು ಇದರಿಂದ ಅನುಕೂಲ ಆಗುತ್ತದೆ.

ಒಂದು ವೇಳೆ 25ಕ್ಕೆ ಸಿಇಟಿ ಆಯ್ಕೆ ಪಟ್ಟಿ ಪ್ರಕಟಗೊಂಡರೆ, ಕಾಮೆಡ್-ಕೆ ಅಡಿ ಈಗಾಗಲೇ ಪಡೆದಿರುವ ಸೀಟು ವಾಪಸ್ ಮಾಡಲು ಅವಕಾಶ ಇರುವುದಿಲ್ಲ. ಅಲ್ಲದೆ 25ಕ್ಕೆ ಪ್ರಕಟವಾಗುವ ಕ್ಯಾಷುಯಲ್ ಸುತ್ತಿನಲ್ಲಿ ಸೀಟು ಲಭ್ಯವಾದರೂ ಪ್ರವೇಶ ಪಡೆಯಲು ಆಗುವುದಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದು ಉಚಿತವಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

`ಸಿಇಟಿ ಕೋಟಾ ಮೂಲಕ ಆಯ್ಕೆ ಮಾಡಿಕೊಳ್ಳುವ ಸೀಟಿನ ಶುಲ್ಕವು ವರ್ಷಕ್ಕೆ 40 ಸಾವಿರ ರೂಪಾಯಿ. ಕಾಮೆಡ್-ಕೆ ಕೋಟಾ ಸೀಟಿನ ಶುಲ್ಕ 1.36 ಲಕ್ಷ ರೂಪಾಯಿ. ಒಂದು ವೇಳೆ ಎರಡನೆಯ ಸುತ್ತಿನಲ್ಲಿ ಸಿಇಟಿ ಕೋಟಾದಡಿ ಸೀಟು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಾಧ್ಯವಾಗದಿದ್ದರೆ, ಮಧ್ಯಮ ವರ್ಗದವರು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಆದುದರಿಂದ ಆಯ್ಕೆ ಪಟ್ಟಿ ಪ್ರಕಟ ಮುಂದೂಡಿಕೆ ಸರಿಯಲ್ಲ. ಒಮ್ಮೆ ಪ್ರಕಟಗೊಂಡ ದಿನಾಂಕವನ್ನು ಮುಂದೂಡಬಾರದು ಎಂದು ಸುಪ್ರೀಂಕೊರ್ಟ್ ಕೂಡ ತೀರ್ಪೊಂದರಲ್ಲಿ ಉಲ್ಲೇಖಿಸಿದೆ. ಈ ತೀರ್ಪಿಗೆ ವಿರುದ್ಧವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆದುಕೊಂಡಿರುವುದು ಸರಿಯಲ್ಲ~ ಎಂಬ ವಿದ್ಯಾರ್ಥಿಗಳ ವಾದವನ್ನು ಕೋರ್ಟ್ ಮಾನ್ಯ ಮಾಡಿದೆ.

ಆಯ್ಕೆ ಪಟ್ಟಿ ಪ್ರಕಟಣೆ ಮುಂದೂಡಿಕೆಗೆ ಸಂಬಂಧಿಸಿದಂತೆ ಇದೇ 13ರಂದು ಹೊರಡಿಸಿರುವ ಸುತ್ತೋಲೆಯಲ್ಲಿನ ಉಳಿದ ಯಾವುದೇ ಅಂಶಗಳನ್ನು ಬದಲಿಸದಂತೆಯೂ ಪೀಠ ಸೂಚಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸಿಇಟಿ ಕೋಟಾದಡಿ ಸೀಟು ಆಯ್ಕೆ ಮಾಡಿಕೊಂಡಿರುವ ಕೆಲವರು, ಈಗಾಗಲೇ ಧಾರವಾಡ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬೀದರ್‌ನ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ವಿವಿಧ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ. ಅಂತಹ ವಿದ್ಯಾರ್ಥಿಗಳು ಬುಧವಾರ ಸಂಜೆ ಒಳಗೆ ಸಿಇಟಿ ಸೀಟು ವಾಪಸ್ ಮಾಡಬೇಕು ಎಂದು ಪ್ರಾಧಿಕಾರ ಸೂಚನೆ ನೀಡಿತ್ತು.

ಈ ರೀತಿ ತೆರವಾಗುವ ಸೀಟುಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊರೆಯಬೇಕು ಎಂಬ ದೃಷ್ಟಿಯಿಂದ ಪ್ರಾಧಿಕಾರ 25ರಂದು ಆಯ್ಕೆಪಟ್ಟಿ ಪ್ರಕಟಿಸಲು ಉದ್ದೇಶಿಸಿತ್ತು. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗುರುವಾರವೇ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.