ADVERTISEMENT

ಖಾಸಗಿಯವರ ಪಾಲಾದ ಸರ್ಕಾರಿ ಕೋಟಾ ಸೀಟು

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 19:30 IST
Last Updated 2 ಜೂನ್ 2011, 19:30 IST

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪರಿಷ್ಕೃತ ಸೀಟು ಹಂಚಿಕೆ ಪಟ್ಟಿಯಲ್ಲಿ ಭಾರಿ ಪ್ರಮಾಣದ ಗೋಲ್‌ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಸರ್ಕಾರಿ ಕೋಟಾ ಮೂಲಕ ಹಂಚಿಕೆಯಾಗಿದ್ದ ಪ್ರಮುಖ ವಿಷಯಗಳ ಹಲವು ಸೀಟುಗಳು, ಎರಡನೇ ಬಾರಿಗೆ ನಡೆದ ಕೌನ್ಸೆಲಿಂಗ್‌ನಲ್ಲಿ ಖಾಸಗಿಯವರ ಪಾಲಾಗಿರುವ ಹಗರಣ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ.

ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜು ಮತ್ತು ನಗರದ ಎಂ.ವಿ.ಜೆ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ಸುತ್ತಿನ ಕೌನ್ಸೆಲಿಂಗ್ ಸಂದರ್ಭದಲ್ಲಿ ಇದ್ದ ಒಟ್ಟು ಸೀಟುಗಳು ಹಾಗೂ ಎರಡನೇ ಸುತ್ತಿನಲ್ಲಿ ಕೌನ್ಸೆಲಿಂಗ್‌ಗೆ ಲಭ್ಯವಿರುವ ಸೀಟುಗಳಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಆದರೆ ಸರ್ಕಾರಿ ಕೋಟಾದಲ್ಲಿ ಇದ್ದ ಮಹತ್ವದ ಸೀಟುಗಳನ್ನು ಖಾಸಗಿಯವರಿಗೆ ವರ್ಗಾಯಿಸಲಾಗಿದ್ದು, ಇದರಲ್ಲಿ ಕೋಟ್ಯಂತರ ರೂಪಾಯಿ ಹಣದ ವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.

ಮಂಗಳೂರಿನ ಎ.ಜೆ.ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಪರಿಷ್ಕೃತ ಸೀಟು ಹಂಚಿಕೆಯಲ್ಲಿ ಒಟ್ಟಾರೆ ಸೀಟುಗಳು ಹೆಚ್ಚಾಗಿದ್ದರೂ, ಸರ್ಕಾರಿ ಕೋಟಾದ ಕ್ಲಿನಿಕಲ್ ಸೀಟುಗಳು ಕಡಿಮೆಯಾಗಿರುವುದು ಅವ್ಯವಹಾರ ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ನವೋದಯ ಕಾಲೇಜಿನಲ್ಲಿ ಮೊದಲು ಹಂಚಿಕೆ ಮಾಡಿದ್ದ ಸೀಟು ಹಂಚಿಕೆ ಪಟ್ಟಿಯಲ್ಲಿ ಲಭ್ಯವಿದ್ದ 53 ಸೀಟುಗಳ ಪೈಕಿ 42 ಆಡಳಿತ ಮಂಡಳಿ ಮತ್ತು 11 ಸರ್ಕಾರಿ ಕೋಟಾ ಮೂಲಕ ಹಂಚಿಕೆಯಾಗಿದ್ದವು. 11ರಲ್ಲಿ ಏಳು ಸೀಟುಗಳನ್ನು ಕ್ಲಿನಿಕಲ್‌ಗೆ ನೀಡಲಾಗಿತ್ತು. ಇದರಲ್ಲಿ ರೇಡಿಯಾಲಜಿ, ಗೈನಕಾಲಜಿ, ಆರ್ಥೊಪಿಡಿಕ್ಸ್, ಜನರಲ್ ಸರ್ಜರಿ, ಜನರಲ್ ಮೆಡಿಸಿನ್, ಅನಸ್ತೇಷಿಯಾ ಮತ್ತು ಚರ್ಮ ವಿಭಾಗದಲ್ಲಿ ಸರ್ಕಾರಿ ಕೋಟಾಗೆ ತಲಾ ಒಂದೊಂದು ಸೀಟುಗಳು ಲಭ್ಯವಿದ್ದವು.


ಎರಡನೇ ಬಾರಿಯ ಕೌನ್ಸೆಲಿಂಗ್‌ಗೆ ಪ್ರಕಟಿಸಿದ ಸೀಟು ಹಂಚಿಕೆ ಪಟ್ಟಿಯಲ್ಲಿ ಕ್ಲಿನಿಕಲ್‌ಗೆ ಆರು ಸೀಟುಗಳನ್ನು ನೀಡಲಾಗಿದ್ದು, ಇಎನ್‌ಟಿ, ಜನರಲ್ ಮೆಡಿಸಿನ್, ಅನಸ್ತೇಷಿಯಾದಲ್ಲಿ ತಲಾ ಎರಡು ಸೀಟುಗಳನ್ನು ಹಂಚಲಾಗಿದೆ. ಆದರೆ ಪ್ರಮುಖ ವಿಷಯಗಳಾದ ರೇಡಿಯಾಲಜಿ, ಗೈನಕಾಲಜಿ, ಆರ್ಥೊಪಿಡಿಕ್ಸ್, ಜನರಲ್ ಸರ್ಜರಿಯಲ್ಲಿ ಸರ್ಕಾರಿ ಕೋಟಾಗೆ ಒಂದು ಸೀಟನ್ನೂ ನೀಡದಿರುವುದು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಅದೇ ರೀತಿ ಎಂ.ವಿ.ಜೆ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ಸುತ್ತಿನ ಸೀಟು ಹಂಚಿಕೆ ಪಟ್ಟಿ ಪ್ರಕಟವಾದಾಗ ಒಟ್ಟು 32 ಸೀಟುಗಳ ಪೈಕಿ 26 ಸೀಟುಗಳು ಆಡಳಿತ ಮಂಡಳಿ ಮತ್ತು ಆರು ಸೀಟುಗಳು ಸರ್ಕಾರಿ ಕೋಟಾ ಮೂಲಕ ಹಂಚಿಕೆಯಾಗಿದ್ದವು. ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲೂ ಒಟ್ಟು ಸೀಟುಗಳಲ್ಲಿ ಬದಲಾವಣೆಯಾಗಿಲ್ಲ. ಆದರೆ ಇಲ್ಲೂ ಸಹ ಸರ್ಕಾರಿ ಕೋಟಾ ಸೀಟುಗಳು ಆಡಳಿತ ಮಂಡಳಿಯ ಪಾಲಾಗಿವೆ.

ಪಿಡಿಯಾಟ್ರಿಕ್ಸ್, ರೇಡಿಯಾಲಜಿ, ಜನರಲ್ ಮೆಡಿಸಿನ್, ಆರ್ಥೊಪೆಡಿಕ್ಸ್ ಇತ್ಯಾದಿ ವಿಷಯಗಳಲ್ಲಿ ಸರ್ಕಾರಿ ಕೋಟಾದಲ್ಲಿ ಇದ್ದ ಸೀಟುಗಳನ್ನು ಆಡಳಿತ ಮಂಡಳಿಗೆ ವರ್ಗಾಯಿಸಲಾಗಿದೆ. ಈ ಎರಡೂ ಕಾಲೇಜುಗಳಲ್ಲಿ ಒಟ್ಟು ಸೀಟುಗಳ ಸಂಖ್ಯೆಯಲ್ಲಿ ಬದಲಾವಣೆ ಆಗದೆ ಇರುವುದರಿಂದ ಪರಿಷ್ಕೃತ ಸೀಟು ಹಂಚಿಕೆ ಪಟ್ಟಿ ಪ್ರಕಟಿಸುವ ಅಗತ್ಯವೇ ಇರಲಿಲ್ಲ. ಆದರೆ ಖಾಸಗಿಯವರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಹೊಸದಾಗಿ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಲಾಗಿದೆ ಎಂದು ಗೊತ್ತಾಗಿದೆ.

ಮಂಗಳೂರಿನ ಎ.ಜೆ.ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಮೊದಲ ಸುತ್ತಿನಲ್ಲಿ ಒಟ್ಟು 46 ಸೀಟುಗಳು ಲಭ್ಯವಿದ್ದವು. ಈ ಪೈಕಿ 37 ಆಡಳಿತ ಮಂಡಳಿ ಮತ್ತು 9 ಸರ್ಕಾರಿ ಕೋಟಾ ಮೂಲಕ ಹಂಚಿಕೆಯಾಗಿದ್ದವು. ಆದರೆ ಪರಿಷ್ಕೃತ ಸೀಟು ಹಂಚಿಕೆಯಲ್ಲಿ ಒಟ್ಟು ಸೀಟುಗಳ ಸಂಖ್ಯೆ 61 ಆಗಿದ್ದು, 49 ಆಡಳಿತ ಮಂಡಳಿ ಮತ್ತು 12 ಸರ್ಕಾರಿ ಕೋಟಾದ ಸೀಟುಗಳಿವೆ.

ಈ ಬಾರಿ ಸರ್ಕಾರಿ ಕೋಟಾದ ಸೀಟುಗಳ ಸಂಖ್ಯೆ ಹೆಚ್ಚಾಗಿದ್ದರೂ ಕ್ಲಿನಿಕಲ್‌ನಲ್ಲಿ ಕೇವಲ ನಾಲ್ಕು ಸೀಟುಗಳು ಮಾತ್ರ ಲಭ್ಯವಿವೆ. ಈ ಕಾಲೇಜಿನಲ್ಲೂ ಸಹ ರೇಡಿಯಾಲಜಿ, ಗೈನಕಾಲಜಿ, ಆರ್ಥೊಪಿಡಿಕ್ಸ್, ಜನರಲ್ ಸರ್ಜರಿಯಲ್ಲಿ ಸರ್ಕಾರಿ ಕೋಟಾಗೆ ಸೀಟುಗಳನ್ನು ನೀಡಿಲ್ಲ. ಮೊದಲು 9 ಸೀಟುಗಳು ಇದ್ದಾಗ ರೇಡಿಯಾಲಜಿ, ಜನರಲ್ ಸರ್ಜರಿ, ಜನರಲ್ ಮೆಡಿಸಿನ್‌ನಲ್ಲಿ ಸರ್ಕಾರಿ ಕೋಟಾ ಸೀಟುಗಳು ಇದ್ದವು. ಈಗ ಒಟ್ಟು ಸೀಟುಗಳ ಸಂಖ್ಯೆ ಜಾಸ್ತಿಯಾಗಿದ್ದರೂ ಸರ್ಕಾರಿ ಕೋಟಾದಲ್ಲಿ ಸೀಟುಗಳು ಲಭ್ಯವಿಲ್ಲದೆ ಇರುವುದು ಆಶ್ಚರ್ಯ ಮೂಡಿಸಿದೆ.

ಒಳ ಒಪ್ಪಂದ: ಮೇಲಿನ ಮೂರೂ ಕಾಲೇಜುಗಳಲ್ಲಿ ನಡೆದಿರುವ ಅಕ್ರಮಗಳು ಕೇವಲ ಸ್ಯಾಂಪಲ್ ಅಷ್ಟೇ. ಇಂತಹ ಹಗರಣಗಳು ಹಲವು ಕಡೆ ನಡೆದಿವೆ. ಸರ್ಕಾರ ಮತ್ತು ಆಡಳಿತ ಮಂಡಳಿಗಳ ನಡುವೆ ನಡೆಯುವ ಒಳ ಒಪ್ಪಂದದಿಂದಾಗಿ ಒಂದೂವರೆಯಿಂದ ಎರಡು ಕೋಟಿ ರೂಪಾಯಿಗೆ ಪ್ರಮುಖ ವಿಷಯಗಳ ಸೀಟುಗಳನ್ನು ಸರ್ಕಾರವೇ ಖಾಸಗಿಯವರಿಗೆ ಬಿಟ್ಟುಕೊಡುತ್ತಿದೆ. ಇದಕ್ಕೆ ಪ್ರತಿಯಾಗಿ ಕಾಲೇಜಿನವರು ಸರ್ಕಾರಕ್ಕೆ ಕಪ್ಪ ಕಾಣಿಕೆ ಸಲ್ಲಿಸುತ್ತಾರೆ. ಹಲವು ವರ್ಷಗಳಿಂದ ಈ ರೀತಿಯ ವ್ಯವಹಾರ ನಡೆದುಕೊಂಡು ಬಂದಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳಿಂದ ಹಣ ಪಡೆದು ಸರ್ಕಾರಿ ಕೋಟಾದ ಸೀಟುಗಳನ್ನು ವೈದ್ಯಕೀಯ ಇಲಾಖೆಯವರೇ ಮಾರಾಟ ಮಾಡಿದ್ದಾರೆ ಎಂಬ ನೇರ ಆರೋಪ ಕೇಳಿಬಂದಿದೆ. ಏಪ್ರಿಲ್‌ನಲ್ಲಿ ಮೊದಲು ಪ್ರಕಟಿಸಿದ್ದ ಸೀಟು ಹಂಚಿಕೆ ಪಟ್ಟಿ ಸಂದರ್ಭದಲ್ಲಿ ಸರ್ಕಾರ ದಿಟ್ಟ ನಿಲುವು ತೆಗೆದುಕೊಂಡು ಎಲ್ಲ ವಿಷಯಗಳಲ್ಲೂ ಸರ್ಕಾರಕ್ಕೆ ಶೇ 33ರಷ್ಟು ಸೀಟುಗಳು ಲಭ್ಯವಾಗುವಂತೆ ನೋಡಿಕೊಂಡಿತ್ತು. ಆದರೆ ಇಲಾಖೆಯ ಹಿರಿಯ ಅಧಿಕಾರಿಗಳ ಬದಲಾವಣೆ ಆಗುತ್ತಿದ್ದಂತೆಯೇ ಮನಬಂದಂತೆ ಸೀಟು ಹಂಚಿಕೆ ಪಟ್ಟಿಯನ್ನು ಬದಲಾಯಿಸುವ ಮೂಲಕ ಅಕ್ರಮಗಳಿಗೆ ದಾರಿ ಮಾಡಿಕೊಟ್ಟಿದೆ ಎನ್ನಲಾಗಿದೆ.

ಸರ್ಕಾರ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ನಡೆಯುವ ಒಪ್ಪಂದದ ಪ್ರಕಾರ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಶೇ 33ರಷ್ಟು ಸೀಟುಗಳು ಸರ್ಕಾರಿ ಕೋಟಾ ಮೂಲಕ ಹಂಚಿಕೆಯಾದರೆ, ಶೇ 42ರಷ್ಟು ಸೀಟುಗಳು ಕಾಮೆಡ್-ಕೆ ಮೂಲಕ ಹಂಚಿಕೆಯಾಗುತ್ತವೆ.

ಇನ್ನುಳಿದ ಶೇ 25ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಗೆ ಹಂಚಬೇಕು. ಆದರೆ ಕಾಮೆಡ್-ಕೆ ಸೀಟುಗಳನ್ನು ಅನಿವಾಸಿ ಭಾರತೀಯ ಕೋಟಾ ಮೂಲಕ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳೂ ಇವೆ. ಕೌನ್ಸೆಲಿಂಗ್‌ಗೆ ಹಾಜರಾದ ವಿದ್ಯಾರ್ಥಿಗಳಿಂದಲೂ ಈ ಬಗ್ಗೆ ದೂರುಗಳು ಕೇಳಿಬಂದಿವೆ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT