ADVERTISEMENT

ಖೋಟಾ ನೋಟು ಚಲಾವಣೆ: ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 18:55 IST
Last Updated 18 ಏಪ್ರಿಲ್ 2012, 18:55 IST

ವಿರಾಜಪೇಟೆ: ವಿರಾಜಪೇಟೆಯಲ್ಲಿ ರೂ. ಸಾವಿರ ಮೌಲ್ಯದ ಖೋಟಾ ನೋಟು ಚಲಾವಣೆ ಮಾಡಿದ ಆರೋಪದ ಮೇಲೆ ನಗರ ಪೊಲೀಸರು ಬೆಂಗಳೂರಿನ ರಾಜಾರಾಂ (32)ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ವಿರಾಜಪೇಟೆಯ ಗೋಣಿಕೊಪ್ಪ ರಸ್ತೆಯಲ್ಲಿರುವ ಬ್ರಾಂದಿ ಅಂಗಡಿಯಲ್ಲಿ ಮಂಗಳವಾರ ರಾತ್ರಿ ರೂ. ಸಾವಿರ ಮೌಲ್ಯದ ಖೋಟಾ ನೋಟು ನೀಡಿ ಒಂದು ಕ್ವಾರ್ಟರ್ ಬಾಟಲ್ ಬ್ರಾಂದಿ ಪಡೆದ ರಾಜಾರಾಂ ಚಿಲ್ಲರೆ ಪಡೆದು ಸಾರಿಗೆ ಸಂಸ್ಥೆ ಬಸ್‌ನಿಲ್ದಾಣ ಇರುವ ದಿಕ್ಕಿನತ್ತ ತೆರಳಿದ. ಸಂಶಯಗೊಂಡ ಅಂಗಡಿಯ ಕ್ಯಾಷಿಯರ್ ಸುರೇಶ್ ನೋಟನ್ನು ಪರಿಶೀಲಿಸಿದಾಗ ನೋಟು ನಕಲಿಯಾಗಿತ್ತು. ತಕ್ಷಣ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಆತನನ್ನು ಸಾರ್ವಜನಿಕರ ಸಹಕಾರದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ಪೊಲೀಸರು ಆತನನ್ನು ತನಿಖೆಗೊಳಪಡಿಸಿದಾಗ ಜೇಬಿನಲ್ಲಿ 1,000 ಮೌಲ್ಯದ ಇನ್ನೂ ಮೂರು ಖೋಟಾ ನೋಟುಗಳು ಪತ್ತೆಯಾದವು. ಬೆಂಗಳೂರಿನಲ್ಲಿ ಖೋಟಾ ನೋಟಿನ ಬೃಹತ್ ಜಾಲ ಇರುವುದಾಗಿ ರಾಜಾರಾಂನ ವಿಚಾರಣೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಸರ್ಕಲ್ ಇನ್‌ಸ್ಪೆಕ್ಟರ್ ಗಂಗಾಧರಸ್ವಾಮಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದ್ದು ಹೆಚ್ಚಿನ ತನಿಖೆಗಾಗಿ ತಂಡ ಆರೋಪಿ ರಾಜಾರಾಂನೊಂದಿಗೆ ಬುಧವಾರ ಬೆಂಗಳೂರಿಗೆ ತೆರಳಿದೆ.

ವಂಚನೆ; ಮೂವರ ಬಂಧನ: ಬೆಂಗಳೂರು: ಹೆಸರಾಂತ ಕಂಪೆನಿಯ ಕಾರಿನ ನಕಲಿ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ಮೂರು ಜನರನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಆರೋಪಿಗಳಿಂದ ಒಂಬತ್ತು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ವಿಲ್ಸ್‌ನ್‌ಗಾರ್ಡನ್ ನಿವಾಸಿ ಮನ್ನಾಲಾಲ್(38), ಜಯನಗರ 1ನೇ ಬ್ಲಾಕ್ ನಿವಾಸಿ ಖಲೀದ್ ಅಹಮ್ಮದ್ (26) ಹಾಗೂ ಜರ್ನಲಿಸ್ಟ್ ಕಾಲೊನಿ ನಿವಾಸಿ ಬಿನಯ್‌ಕುಮಾರ್(34) ಬಂಧಿತರು. ಈ ಆರೋಪಿಗಳು ಕಾರಿನ ನಕಲಿ ಬಿಡಿಭಾಗಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು, ಅಸಲಿ ಬಿಡಿಭಾಗಗಳೆಂದು ಗ್ರಾಹಕರಿಗೆ ವಂಚಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳ ವಿರುದ್ಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಪೂರ್ವ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಹಾಗೂ ಡಿಸಿಪಿ ಕೃಷ್ಣಂರಾಜು ಅವರ ಮಾರ್ಗದರ್ಶನದಲ್ಲಿ, ಎಸಿಪಿ ಜಿ.ಟಿ.ಅಜ್ಜಪ್ಪ ಅವರ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್ ಎನ್.ಹನುಮಂತರಾಯ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.