
ಬೆಂಗಳೂರು (ಪಿಟಿಐ): ತಾಳ್ಮೆ ಕಾಯ್ದುಕೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಕಿವಿಮಾತು, ಮುಂಗಡಪತ್ರ ಮಂಡನೆಗೆ ಮುನ್ನ ಶಾಸಕಾಂಗ ಪಕ್ಷದ ಸಭೆ ಇಲ್ಲ ಎಂಬುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಸ್ಪಷ್ಟನೆ ಮಧ್ಯೆಯೇ ತಮ್ಮ ನಾಯಕತ್ವ ಮರುಸ್ಥಾಪನೆಗಾಗಿ ವರಿಷ್ಠರ ಮೇಲೆ ಒತ್ತಡ ತರಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊಸ ದಾಳ ಉರುಳಿಸಿದ್ದು, ಮಾರ್ಚ್ 30ರ ರಾಜ್ಯಸಭಾ ಚುನಾವಣೆಗೆ ಬಂಡಾಯ ಅಭ್ಯರ್ಥಿಯನ್ನು ಸೋಮವಾರ ಕಣಕ್ಕೆ ಇಳಿಸಿದ್ದಾರೆ.
ತನ್ಮೂಲಕ ತಮ್ಮನ್ನು ಮುಖ್ಯಮಂತ್ರಿಯಾಗಿ ಪುನಃಸ್ಥಾಪಿಸಬೇಕೆಂಬ ಆಗ್ರಹವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿ, ಉತ್ತರಾಧಿಕಾರಿ ಡಿ.ವಿ. ಸದಾನಂದಗೌಡ ಅವರ ಬಳಿಯೂ ಅದೇ ಹುದ್ದೆಯಲ್ಲಿ ಮುಂದುವರೆದಿರುವ ಬಿ.ಜೆ. ಪುಟ್ಟಸ್ವಾಮಿ ಅವರು ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ~(ಬಿಜೆಪಿಯ) ಮೂರನೇ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿದ್ದೇನೆ~ ಎಂದು ಪುಟ್ಟಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಕ್ಷದ ನಿರ್ದೇಶನದಂತೆ ನಾಮಪತ್ರ ಸಲ್ಲಿಸಿದ್ದೀರಾ ಎಂಬ ಪ್ರಶ್ನೆಗೆ ~ಅದು ನನಗೆ ಗೊತ್ತಿಲ್ಲ. ಪಕ್ಷದ ನಿರ್ಧಾರಕ್ಕಿಂತಲೂ ಹೆಚ್ಚಾಗಿ ನಾನು ಕಾನೂನು ಪ್ರಕಾರ 10 ಜನರ (ಶಾಸಕರ) ಸಹಿಯೊಂದಿಗೆ ಮೂರನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ~ ಎಂದು ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾದ ಪುಟ್ಟಸ್ವಾಮಿ ನುಡಿದರು.
ಯಡಿಯೂರಪ್ಪ ಸಲಹೆ ಮೇರೆಗೆ ನಾಮಪತ್ರ ಸಲ್ಲಿಸಿದ್ದೀರಾ ಎಂಬ ಪ್ರಶ್ನೆಗೆ ~ನಾನು ಹಾಗೆ ಹೇಳುತ್ತಿಲ್ಲ~ ಎಂದು ಪುಟ್ಟಸ್ವಾಮಿ ಉತ್ತರಿಸಿದರು.
ಪಕ್ಷದಿಂದ ಬಿ ಫಾರಂ ಸಲ್ಲಿಸಿದ್ದೀರಾ ಎಂಬ ಪ್ರಶ್ನೆಗೆ ~ಅದಕ್ಕೆ ನಾಳೆಯವರೆಗೆ ಸಮಯಾವಕಾಶ ಇದೆ~ ಎಂದು ಪಟ್ಟಸ್ವಾಮಿ ಹೇಳಿದರು. ನಾಮಪತ್ರದ ಜೊತೆಗೇ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹುದ್ದೆಗೆ ನೀಡಿರುವ ರಾಜೀನಾಮೆಯ ~ಸ್ವೀಕೃತಿಪತ್ರ~ವನ್ನೂ ಇಟ್ಟಿದ್ದೇನೆ ಎಂದು ಅವರು ನುಡಿದರು.
ಈ ಮಧ್ಯೆ ನಾಯಕತ್ವಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಣಯವನ್ನೂ ಒತ್ತಡದ ಮಧ್ಯೆ ತೆಗೆದುಕೊಳ್ಳಲಾಗುವುದಿಲ್ಲ. ಸ್ವಲ್ಪ ಸಮಯ ಸಹನೆಯಿಂದ ಕಾಯಿರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಯಡಿಯೂರಪ್ಪ ಅವರಿಗೆ ಮುಂಬೈಯಿಂದ ಸೂಚಿಸಿದ್ದಾರೆ.
ಚುನಾವಣೆಗಳು ಇದ್ದುದರಿಂದ ಈ ವಿಚಾರದ ಬಗ್ಗೆ ಗಮನ ಹರಿಸಲಾಗಿರಲಿಲ್ಲ. ಈಗ ಗಮನ ಹರಿಸಲಾಗುವುದು. ಆದರೆ ಒತ್ತಡಕ್ಕೆ ಮಣಿದು ಯಾವುದೇ ನಿರ್ಧಾರವನ್ನೂ ಕೈಗೊಳ್ಳಲಾಗುವುದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.
ಮುಖ್ಯಮಂತ್ರಿ ಸದಾನಂದ ಗೌಡ ಅವರು ಮಾರ್ಚ್ 21ರಂದು ಮುಂಗಡಪತ್ರ ಮಂಡನೆಯಾಗುವವರೆಗೆ ಶಾಸಕಾಂಗ ಪಕ್ಷದ ಸಭೆ ಕರೆಯುವ ಪ್ರಶ್ಮೆ ಇಲ್ಲ ಎಂದು ಬೆಂಗಳೂರಿನಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ನನಗೆ ಯಾರಿಂದಲೂ ಮನವಿ ಬಂದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.