ಸೋಮವಾರಪೇಟೆ: ತಕ್ಷಣವೇ ಸಂಪುಟ ವಿಸ್ತರಣೆ ಕಾರ್ಯ ಕೈಗೊಳ್ಳುವಂತೆ ರಾಜ್ಯದ ನಾಯಕರ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಸಮಾನ ಮನಸ್ಕ ಶಾಸಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಲಿರುವುದಾಗಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಲ್ಕು ವರ್ಷಗಳಿಂದ ಸಚಿವ ಸ್ಥಾನದ ಬಗ್ಗೆ ಹುಸಿ ಭರವಸೆ ನೀಡುತ್ತಲೇ ಬರಲಾಗಿದೆ. ಅದನ್ನು ನಾವು ನಂಬುತ್ತಲೇ ಬಂದಿದ್ದೇವೆ. ಯಡಿಯೂರಪ್ಪ, ಈಶ್ವರಪ್ಪ ಹಾಗೂ ಸದಾನಂದ ಗೌಡ ಇವರ ಮಾತುಗಳನ್ನು ಕೇಳಿ ಸಾಕಾಗಿದೆ. ಆದ್ದರಿಂದ ನಮ್ಮ ನಾಯಕರ ಮೇಲೆ ನಮಗೆ ನಂಬಿಕೆಯೇ ಇಲ್ಲದಂತಾಗಿದೆ ಎಂದು ಹೇಳಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಗಾಗಿ, ರಾಜ್ಯ ನಾಯಕರ ಮೇಲೆ ಒತ್ತಡ ಹೇರಲು ಹಾಗೂ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ನೀಡುವಂತೆ ಒತ್ತಾಯಿಸಲು ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರನ್ನು ಮುಂಬೈನಲ್ಲಿ ಭೇಟಿ ಮಾಡಲು ನಿರ್ಧರಿಸಲಾಗಿದೆ. ಜೂ.18ರಂದು ರಾಜ್ಯ ವಿಧಾನಸಭೆಯ 60ನೇ ವರ್ಷಾಚರಣೆಯ ನಂತರ ಅಂದರೆ ಸೋಮವಾರ ರಾತ್ರಿ 10 ಮಂದಿ ಸಮಾನ ಮನಸ್ಕ ಶಾಸಕರು ಮುಂಬೈಗೆ ತೆರಳಲಿದ್ದಾರೆ ಎಂದರು.
ರಾಜ್ಯದ ಸದ್ಯದ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಅನಿವಾರ್ಯವಾಗಿದೆ. 11 ಸ್ಥಾನಗಳು ಖಾಲಿ ಉಳಿದಿವೆ. ಪಕ್ಷದಲ್ಲಿನ ನಿಷ್ಠಾವಂತರಿಗೆ ಪ್ರಾತಿನಿಧ್ಯ ಕಲ್ಪಿಸಬೇಕಾಗಿದೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವನ್ನು ಬಲಪಡಿಸಬೇಕಾಗಿರುವದರಿಂದ ಪ್ರದೇಶವಾರು ಹಾಗೂ ಅವಕಾಶ ವಂಚಿತ ಹಿರಿಯ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ರಂಜನ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.