ADVERTISEMENT

ಗೊಂದಲದ ಹೇಳಿಕೆ ಕೊಟ್ಟರೆ ಶಿಸ್ತುಕ್ರಮ: ವೇಣುಗೋಪಾಲ್‌

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಗೊಂದಲದ ಹೇಳಿಕೆ ಕೊಟ್ಟರೆ ಶಿಸ್ತುಕ್ರಮ: ವೇಣುಗೋಪಾಲ್‌
ಗೊಂದಲದ ಹೇಳಿಕೆ ಕೊಟ್ಟರೆ ಶಿಸ್ತುಕ್ರಮ: ವೇಣುಗೋಪಾಲ್‌   

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲೇ ಪಕ್ಷ ಮುಂದಿನ ಚುನಾವಣೆ ಎದುರಿಸಲಿದ್ದು, ಈ ವಿಷಯದಲ್ಲಿ ಗೊಂದಲದ ಹೇಳಿಕೆ ನೀಡುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಎಚ್ಚರಿಕೆ ನೀಡಿದ್ದಾರೆ.

‘ಮುಂದಿನ ಮುಖ್ಯಮಂತ್ರಿ ಯಾರು?’ ಎಂಬ ಬಗ್ಗೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ, ಕೆಲವು ಸಚಿವರು, ಶಾಸಕರು ಇತ್ತೀಚೆಗೆ ನೀಡಿದ್ದ ಹೇಳಿಕೆಯ ಬೆನ್ನಲ್ಲೇ ವೇಣುಗೋಪಾಲ್ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಗಡಸು ಧ್ವನಿಯಲ್ಲೇ ಮಾತನಾಡಿದ ಅವರು, ‘ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಗುವುದು ಎಂದು ಪಕ್ಷದ ಹೈಕಮಾಂಡ್ ಬಹಳ ಹಿಂದೆಯೇ ಸ್ಪಷ್ಟಪಡಿಸಿದೆ. ಹಾಗಿದ್ದರೂ ಕೆಲವರು ಅನಗತ್ಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರುವುದು ಪಕ್ಷದ ವರಿಷ್ಠರ ಗಮನಕ್ಕೆ ಬಂದಿದೆ. ಇನ್ನು ಮುಂದೆ ಇದನ್ನು ಸಹಿಸುವುದಿಲ್ಲ’ ಎಂದಿದ್ದಾರೆ.

ADVERTISEMENT

‘ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಯಾವುದೇ ಶಾಸಕರು ತಲೆ ಕೆಡಿಸಿಕೊಳ್ಳುವುದು ಬೇಡ. ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ಏಕೈಕ ಗುರಿ. ಈ ಬಗ್ಗೆ ಮಾಧ್ಯಮಗಳ ಮುಂದೆ ಯಾರೊಬ್ಬರೂ ಬಹಿರಂಗ ಹೇಳಿಕೆ ನೀಡಕೂಡದು’ ಎಂದೂ ತಾಕೀತು ಮಾಡಿದ್ದಾರೆ.

ಸಚಿವರ ಮೌನಕ್ಕೆ ಆಕ್ಷೇಪ:

‘ವಿರೋಧ ಪಕ್ಷಗಳು ಸರ್ಕಾರದ ವೈಫಲ್ಯಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರೂ ಸಚಿವರು, ಶಾಸಕರು ಮೌನ ವಹಿಸಿರುವುದು ಸರಿಯಲ್ಲ’ ಎಂದು ವೇಣುಗೋಪಾಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಮುಖ್ಯಮಂತ್ರಿ ಒಬ್ಬರೇ ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಸರ್ಕಾರ ನಿಮಗೆ ಸಂಬಂಧಿಸಿದ್ದಲ್ಲವೇ’ ಎಂದು ಸಚಿವರು, ಶಾಸಕರನ್ನು ಪ್ರಶ್ನಿಸಿದ ಅವರು, ‘ಕಾಂಗ್ರೆಸ್‌ ಪಕ್ಷದಿಂದ ನೀವೆಲ್ಲ ಸಚಿವರಾಗಿದ್ದೀರಿ. ಅದನ್ನು ಮರೆಯಬೇಡಿ. ಕಾಂಗ್ರೆಸ್‌ ಸರ್ಕಾರ ಅತ್ಯುತ್ತಮ ಸಾಧನೆ ಮಾಡಿದ್ದು, ಇದನ್ನು ಜನರಿಗೆ ಪರಿಚಯಿಸಿ ಕಾಂಗ್ರೆಸ್ ಪರ ಅಲೆ ಏಳುವಂತೆ ಮಾಡಲು ಶ್ರಮಿಸಿ’ ಎಂದು ಕಿವಿಮಾತು ಹೇಳಿದ್ದಾರೆ.

ಸಾಮಾಜಿಕ ಜಾಲ ತಾಣಗಳ ಬಳಕೆ ಗೊತ್ತಿಲ್ಲ ಎಂದ ಸಚಿವರು

ಫೇಸ್‌ಬುಕ್, ಟ್ವೀಟರ್‌, ವಾಟ್ಸ್ ಆ್ಯಪ್‌, ಇನ್‌ಸ್ಟ್ರಾ ಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಸಕ್ರಿಯವಾಗಿ ಬಳಸುತ್ತಿರುವ ಸಚಿವರು, ಶಾಸಕರ ಹೆಸರುಗಳನ್ನು ಉಲ್ಲೇಖಿಸಿದ ವೇಣುಗೋಪಾಲ್‌, ಅವರೆಲ್ಲರಿಗೂ ಮೆಚ್ಚುಗೆ ಸೂಚಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವರೇ ಸಾಮಾಜಿಕ ಜಾಲ ಬಳಸದಿದ್ದರೆ ಹೇಗೆ ಎಂದು ಉಮಾಶ್ರೀ ಹೆಸರು ಹೇಳಿ ಕುಟುಕಿದ ವೇಣುಗೋಪಾಲ್‌, ಆಧುನಿಕ ಮಾಧ್ಯಮವನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

‘ನಮಗೆ ಅವೆಲ್ಲ ಗೊತ್ತಾಗಲ್ಲ’ ಎಂದು ಕೆಲವು ಸಚಿವರು, ಶಾಸಕರು ಹೇಳಿದರು. ‘ನಿಮಗೆ ಆಪ್ತ ಸಹಾಯಕರನ್ನು ಸರ್ಕಾರ ಕೊಟ್ಟಿದೆಯಲ್ಲವೇ, ಅವರು ಇದನ್ನು ಮಾಡಬಹುದಲ್ಲ’ ಎಂದು ಪ್ರಶ್ನಿಸಿದ ವೇಣುಗೋಪಾಲ್‌, ‘ನಿಮ್ಮ ಇಲಾಖೆ, ನೀವು ಮಾಡಿದ ಕಾರ್ಯಕ್ರಮದ ಪ್ರಚಾರ ಪಡೆಯದೇ ಇದ್ದರೆ ಹೇಗೆ’ ಎಂದು ಸಚಿವರನ್ನು ಕೇಳಿದ್ದಾರೆ.

ಸಿಗದ ಅವಕಾಶ:ಶಾಸಕರ ಅಸಮಾಧಾನ

ಸಚಿವರ ಬಗ್ಗೆ ದೂರು ಹೇಳಲು ಅವಕಾಶ ಸಿಗದೇ ಇದ್ದುದಕ್ಕೆ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

‘ಸಚಿವರು ಸ್ಪಂದಿಸುತ್ತಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಕೈಗೆ ಸಿಗುತ್ತಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದರೂ ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿಲ್ಲ’ ಎಂದು ಉಸ್ತುವಾರಿ ಮುಂದೆ ದೂರು ಹೇಳಲು ಶಾಸಕರು ತಯಾರಾಗಿ ಬಂದಿದ್ದರು.

ವೇಣುಗೋಪಾಲ್‌, ಸಿದ್ದರಾಮಯ್ಯ, ಪರಮೇಶ್ವರ್ ಮಾತನಾಡಿದ ಬಳಿಕ ಶಿವಮೂರ್ತಿ ನಾಯ್ಕ್, ಕೆ.ಎನ್‌. ರಾಜಣ್ಣ, ವಿ.ಎಸ್‌. ಉಗ್ರಪ್ಪ ಮಾತನಾಡಲು ಮುಂದಾದರು. ಚರ್ಚೆಯನ್ನು ಬೆಳೆಸುವುದು ಬೇಡ ಎಂದು ವೇಣುಗೋಪಾಲ್ ತಾಕೀತು ಮಾಡಿದರು.

‘ಶಾಸಕರು, ಹಿಂದಿನ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಕರೆದು ಮತ್ತೊಂದು ಸಭೆ ನಡೆಸುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು. ‘ಠೇವಣಿ ಕಳೆದುಕೊಂಡವರನ್ನು ಕರೆದು ಚರ್ಚಿಸುವ ಅಗತ್ಯ ಏನಿದೆ’ ಕೆ.ಎನ್. ರಾಜಣ್ಣ ಪ್ರಶ್ನಿಸಿದರು. ‘ರಾಜಣ್ಣ ಹೇಳುವುದು ಸರಿ. ಕಡಿಮೆ ಅಂತರದಲ್ಲಿ ಸೋತವರನ್ನು ಮಾತ್ರ ಕರೆಯುತ್ತೇನೆ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕರ್ನಾಟಕದಿಂದಲೇ ಸಂದೇಶ ಹೋಗಲಿ: ಸಿದ್ದರಾಮಯ್ಯ

‘ಬಿಜೆಪಿಗೆ ಸೋಲಿನ ರುಚಿ ತೋರಿಸಿ, ದೇಶದಲ್ಲಿ ಮತ್ತೆ ಕಾಂಗ್ರೆಸ್‌ ಯುಗ ಆರಂಭಿಸುವ ಕೆಲಸ ಕರ್ನಾಟಕದಿಂದಲೇ ಆರಂಭವಾಗಲಿ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಇಡೀ ದೇಶಕ್ಕೆ ಹೊಸ ಸಂದೇಶ ನೀಡಲು ನಾವೆಲ್ಲ ಸಜ್ಜಾಗಬೇಕು’ ಎಂದು ಸಿದ್ದರಾಮಯ್ಯ ಶಾಸಕರಿಗೆ ಮನವಿ ಮಾಡಿದ್ದಾರೆ.

ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಿದರೆ ಬಿಜೆಪಿ ದಾರಿ ಸುಗಮವಾಗುತ್ತದೆ ಎಂದು ಮೋದಿ, ಅಮಿತ್ ಷಾ ಆಲೋಚಿಸಿದ್ದಾರೆ. ಅವರ ಯತ್ನ ಯಶಸ್ವಿಯಾದರೆ ಪ್ರಜಾಪ್ರಭುತ್ವಕ್ಕೆ ಆತಂಕ ಒದಗಲಿದೆ. ಇದು ತಪ್ಪಬೇಕಾದರೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಲು ಪಣತೊಡಬೇಕು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರದ್ದು ಬಾಯಿ ಬಡಾಯಿ. ಸಾಧನೆ ಶೂನ್ಯ. ಆದರೂ ಬಿಜೆಪಿಯವರು ಜನರಿಗೆ ಸುಳ್ಳು ಹೇಳಿ ನಂಬಿಸುತ್ತಿದ್ದಾರೆ. ನಾವು ಸುಳ್ಳು ಹೇಳುವ ಅಗತ್ಯವಿಲ್ಲ, ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಿದರೆ ನೂರಕ್ಕೆ ಇನ್ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ’ ಎಂದರು.

‘ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನದ ಬಗ್ಗೆ ಶಾಸಕರು ಆಸಕ್ತಿ ವಹಿಸಬೇಕು. ಮತದಾರನ ಮನೆ ಬಾಗಿಲಿಗೆ ಹೋಗಿ ಜನರ ನಾಡಿ ಮಿಡಿತ ಅರಿತರೆ ಶಾಸಕರಿಗೆ ಗೆಲುವು ಸುಲಭ. ಪಕ್ಷವೂ ಬಲಗೊಳ್ಳುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.