ADVERTISEMENT

ಗೌಡರನ್ನು ತಡೆದು ನಿಲ್ಲಿಸಿದರು..

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 19:30 IST
Last Updated 10 ಜುಲೈ 2012, 19:30 IST

ಬೆಂಗಳೂರು: ಡಿ.ವಿ.ಸದಾನಂದ ಗೌಡ ಮತ್ತು ಕೆ.ಎಸ್.ಈಶ್ವರಪ್ಪ ಅವರು ತಮ್ಮ ಬೇಡಿಕೆಗಳ ಬಗ್ಗೆ ವರಿಷ್ಠರ ಪ್ರತಿಕ್ರಿಯೆ ಏನು ಎಂಬುದನ್ನು ತಿಳಿಸಿ, ಶಾಸಕಾಂಗ ಪಕ್ಷದ ಸಭೆಗೆ ತೆರಳಲು ಸಿದ್ಧರಾದಾಗ ಅವರನ್ನು ಬೆಂಬಲಿಗ ಸಚಿವರು ಮತ್ತು ಶಾಸಕರು ತಡೆದು ನಿಲ್ಲಿಸಿದ ಘಟನೆ `ಅನುಗ್ರಹ~ದಲ್ಲಿ ನಡೆಯಿತು.

`ಈಶ್ವರಪ್ಪ ಅವರನ್ನು ಉಪ ಮುಖ್ಯಮಂತ್ರಿ ಮಾಡಲು ವರಿಷ್ಠರು ಒಪ್ಪಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನ ನೀಡುವುದರ ಬಗ್ಗೆ ದೆಹಲಿಯಲ್ಲಿ ತೀರ್ಮಾನವಾಗಲಿದೆ. ಹೆಚ್ಚಿನ ಸಂಖ್ಯೆಯ ಸಚಿವ ಸ್ಥಾನಗಳನ್ನು ನೀಡುವುದರ ಕಡೆಗೂ ಗಮನಹರಿಸುವ ಭರವಸೆ ಸಿಕ್ಕಿದೆ~ ಎಂದು ಈ ಇಬ್ಬರೂ ಮುಖಂಡರು ತಮ್ಮ ಬೆಂಬಲಿಗ ಶಾಸಕರಿಗೆ ವಿವರಿಸಿದರು.

ಇದರಿಂದ ಅಸಮಾಧಾನಗೊಂಡ ಶಾಸಕರು, `ಬರಿ ಭರವಸೆ ಮೇಲೆ ಶಾಸಕಾಂಗ ಪಕ್ಷದ ಸಭೆಗೆ ಹೋಗುವುದು ಬೇಡ. ಎಷ್ಟು ಮಂದಿಗೆ ಸಚಿವ ಸ್ಥಾನ ನೀಡುತ್ತಾರೆ. ಖಾತೆಗಳು ಯಾವುವು ಎಂಬುದು ಇಂದೇ ನಿರ್ಧಾರವಾಗಲಿ. ಹೊಸ ನಾಯಕನ ಆಯ್ಕೆ ನಂತರ ನಮ್ಮ ಬೇಡಿಕೆಗಳಿಗೆ ಯಾವ ಕಿಮ್ಮತ್ತೂ ಇರುವುದಿಲ್ಲ. ಸಭೆಗೆ ಹೋಗುವುದು ಬೇಡ~ ಎಂದು ಪಟ್ಟುಹಿಡಿದರು.

ಆದರೆ, ಎಲ್ಲರನ್ನೂ ಸಮಾಧಾನಪಡಿಸಿದ ಈ ಮುಖಂಡರು `ವರಿಷ್ಠರು ಕೊಟ್ಟಿರುವ ಭರವಸೆ ಈಡೇರುತ್ತದೆ. ಅವರ ಮೇಲೆ ನಾವು ವಿಶ್ವಾಸ ಇಡಬೇಕು~ ಎಂದು ಹೇಳಿದರು. ಬಳಿಕ ಸಚಿವರಾದ ಸಿ.ಪಿ. ಯೋಗೇಶ್ವರ್, ಶಾಸಕರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಅರವಿಂದ ಲಿಂಬಾವಳಿ ಸೇರಿದಂತೆ ಇತರರು ಕಾರು ಹತ್ತಲು ತೆರಳುತ್ತಿದ್ದ ಮುಖಂಡರನ್ನು ತಡೆದು `ಯಾವುದೇ ಕಾರಣಕ್ಕೂ ಸಭೆಗೆ ಹೋಗಬಾರದು~ ಎಂದು ಹಟ ಹಿಡಿದರು.

ಶಾಸಕರ ಒತ್ತಡ ಹೆಚ್ಚಾದ ಕಾರಣ ಮುಖಂಡರಿಬ್ಬರೂ ಮತ್ತೆ ಹೋಟೆಲ್‌ಗೆ ತೆರಳಿ ವರಿಷ್ಠರ ಜತೆ ಮಾತುಕತೆ ನಡೆಸಿದರು. `ಹೊಸ ನಾಯಕನ ಆಯ್ಕೆಗೆ ಸಹಕರಿಸುತ್ತೇವೆ. ಆದರೆ, ಬೇಡಿಕೆಗಳ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುವವರೆಗೂ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಬುಧವಾರ ಮಧ್ಯಾಹ್ನದೊಳಗೆ ಸೂಕ್ತ ತೀರ್ಮಾನಕ್ಕೆ ಬನ್ನಿ~ ಎಂದು ಸದಾನಂದ ಗೌಡರು ವರಿಷ್ಠರಿಗೆ ವಿವರಿಸಿದರು ಎಂದು ಗೊತ್ತಾಗಿದೆ.

ಸಚಿವರಾದ ಎಸ್. ಸುರೇಶ್‌ಕುಮಾರ್, ಬಾಲಚಂದ್ರ ಜಾರಕಿಹೊಳಿ, ಎಸ್.ಎ. ರಾಮದಾಸ್, ರವೀಂದ್ರನಾಥ್, ಸಿ.ಪಿ.ಯೋಗೇಶ್ವರ್, ನಾರಾಯಣಸ್ವಾಮಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಗೋವಿಂದ ಕಾರಜೋಳ, ವರ್ತೂರು ಪ್ರಕಾಶ್ ಸೇರಿದಂತೆ 11 ಮಂದಿ ಸಚಿವರು ಸಭೆಯಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.