ADVERTISEMENT

ಚರಂಡಿ ಸ್ವಚ್ಛತೆಯೊಂದೇ ಈ ಅಜ್ಜಿಯ ಕಾಯಕ...

ಸಿದ್ದಯ್ಯ ಹಿರೇಮಠ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಬಳ್ಳಾರಿ: ಈ ವೃದ್ಧೆಗೆ ಈಗ ಅಂದಾಜು 85 ವರ್ಷ ವಯಸ್ಸು. ಬಾಗಿದ ಬೆನ್ನು, ಕೋಲಿಲ್ಲದೆ ಮುಂದಕ್ಕೆ ಹೋಗಲೂ ಆಗದ ಸ್ಥಿತಿ. ಆದರೂ ತಮ್ಮ ಓಣಿಯ ಜನರಿಗಾಗಿ  ಸೇವೆ ಸಲ್ಲಿಸುವ ಉತ್ಸಾಹ.

ನಗರದ 24ನೇ ವಾರ್ಡ್ ವ್ಯಾಪ್ತಿಯ ಪಾಂಡುರಂಗ ದೇವಸ್ಥಾನದ ಬಳಿಯಿರುವ ಬೋವಿಗೇರಿಯ ಬೀಸಮ್ಮ ಇತರರಿಗೆ ಮಾದರಿ. ತಮ್ಮ ಓಣಿಯಲ್ಲಿರುವ ಚರಂಡಿ ಸ್ವಚ್ಛಗೊಳಿಸುವ ಕಾಯಕವನ್ನು ಮೂರು ದಶಕಗಳಿಂದ ನಡೆಸುತ್ತಿದ್ದಾರೆ.

ಬೋವಿಗೇರಿಯ ಇವರ ನಿವಾಸದಿಂದ 100 ಅಡಿವರೆಗಿನ ಚರಂಡಿಯಲ್ಲಿ ಅವರಿವರು ಬಿಸಾಕಿದ ಕಸ, ಮುಸುರೆಯಿಂದಾಗಿ ಎರಡು ಮೂರು ದಿನಕ್ಕೊಮ್ಮೆ ಚರಂಡಿ ಕಟ್ಟಿಕೊಂಡು ದುರ್ನಾತ ಬೀರಲಾರಂಭಿಸುತ್ತದೆ. ಅದಕ್ಕೆಂದೇ ಕೊಳಾಯಿಯಲ್ಲಿ ನೀರು ಬಂದಾಗ ಈ ಬೀಸಮ್ಮ  ಕೈಯಲ್ಲೊಂದು ಉದ್ದನೆಯ ಕಟ್ಟಿಗೆ ಹಿಡಿದು ಆ ಚರಂಡಿಯ ಸ್ವಚ್ಛತೆಗೆ ನಿಂತು ಬಿಡುತ್ತಾರೆ.

ಚರಂಡಿಯಲ್ಲಿರುವ ಎಲ್ಲ ತ್ಯಾಜ್ಯವನ್ನೂ ಎತ್ತಿ ಮೇಲೆ ಬಿಸಾಕುವುದಲ್ಲದೆ, ಕೊಳಾಯಿಯಲ್ಲಿ ಬರುವ ನೀರನ್ನು ಕೊಡಗಳಲ್ಲಿ ಹಿಡಿದು ಚರಂಡಿಗೆ ಸುರಿದು, ಸರಾಗವಾಗಿ ಹರಿದು ಹೋಗುವಂತೆ ಮಾಡುತ್ತಾರೆ.

`ಚರಂಡಿ ಸ್ವಚ್ಛಮಾಡುವ  ಪೌರ ಕಾರ್ಮಿಕರು ತಿಂಗಳು ಕಳೆದರೂ ಈ ಕಡೆ ಬರುವುದಿಲ್ಲ. ಸ್ವಚ್ಛ ಮಾಡುವುದಿಲ್ಲ. ಅದರಿಂದಾಗಿ ದುರ್ನಾತ ಹೆಚ್ಚಿ, ಸೊಳ್ಳೆ ಮತ್ತಿತರ ಕೀಟಗಳ ಉತ್ಪತ್ತಿಯೂ ಹೆಚ್ಚಿ ಆರೋಗ್ಯಕ್ಕೇ ಸಂಚಕಾರ ಬರಲಾರಂಭಿಸಿತ್ತು. ಮನುಷ್ಯನಾಗಿ ಹುಟ್ಟಿದ ಮೇಲೆ ನಾಲ್ಕು ಜನರಿಗೆ ಉಪಕಾರ ಮಾಡಬೇಕು ಎಂದೇ ಸ್ವಯಂ ಪ್ರೇರಿತಳಾಗಿ ಚರಂಡಿ ಸ್ವಚ್ಛ ಮಾಡುತ್ತ ಬಂದಿದ್ದೇನೆ. ಜೀವ ಇರುವವರೆಗೂ ಈ ಕೆಲಸ ಬಿಡುವುದಿಲ್ಲ. ~ ಎಂದು ಬೀಸಮ್ಮ ಹೇಳುತ್ತಾರೆ. ಬೀಸಮ್ಮನಿಗೆ ಏಳು ಜನ ಮಕ್ಕಳು. ಒಬ್ಬ ಮಗನೊಂದಿಗೆ ಬೋವಿಗೇರಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.