ADVERTISEMENT

ಚರ್ಚ್ ಫಾದರ್, ಎಂಜಿನಿಯರ್‌ಗೆ ಜೈಲು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ಸಾಗರ (ಶಿವಮೊಗ್ಗ ಜಿಲ್ಲೆ): ವಿದ್ಯುತ್ ಪರಿವರ್ತಕವನ್ನು ವರ್ಗಾಯಿಸುವ ಕೆಲಸದಲ್ಲಿ ನಿರತನಾಗಿದ್ದ ಮೆಸ್ಕಾಂ ನೌಕರ ವಿದ್ಯುತ್ ಶಾಕ್‌ನಿಂದ ಸಾವಿಗೀಡಾಗಲು ಕಾರಣಕರ್ತರು ಎಂದು ಆರೋಪಿಸಲಾಗಿದ್ದ ಪ್ರರಕಣದಲ್ಲಿ ಇಕ್ಕೇರಿಯ ಸೇಂಟ್ ಥಾಮಸ್ ಚರ್ಚ್‌ನ ಧರ್ಮಗುರು ಸಂತ ಥಾಮಸ್ ಯಾನೆ ಜೈಸನ್ ಹಾಗೂ ಮೆಸ್ಕಾಂನ ಕಿರಿಯ ಎಂಜಿನಿಯರ್ ದಿನೇಶ್ ಅವರಿಗೆ ಇಲ್ಲಿನ ಜೆಎಂಎಫ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2005ರ ಜೂನ್ 4ರಂದು ಇಕ್ಕೇರಿ ಗ್ರಾಮದ ಬಳಿ ಮೆಸ್ಕಾಂ ನೌಕರ ಕುಮಾರ ವಿದ್ಯುತ್ ಪರಿವರ್ತಕ ವರ್ಗಾಯಿಸುವ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದರು.

ಸಮೀಪದಲ್ಲೇ ಇದ್ದ ಚರ್ಚ್‌ನಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಇನ್ವರ್ಟರ್‌ನ ದೋಷದಿಂದ ವಿದ್ಯುತ್ ಹಿಮ್ಮುಖವಾಗಿ ಸರಬರಾಜು ಆಗಿದ್ದೇ ಘಟನೆಗೆ ಕಾರಣ ಎಂದು ತನಿಖೆಯಿಂದ ದೃಢಪಟ್ಟಿತ್ತು.
ಈ ಸಂದರ್ಭದಲ್ಲಿ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸುವ ಕಾಮಗಾರಿಯ ಉಸ್ತುವಾರಿಯನ್ನು ಮೆಸ್ಕಾಂನ ಕಿರಿಯ ಎಂಜಿನಿಯರ್ ದಿನೇಶ್ ವಹಿಸಿಕೊಂಡಿದ್ದರು.

11ಕೆ.ವಿ. ಮಾರ್ಗದ ಮುಕ್ತತೆ ಪಡೆಯದೇ, ಸದರಿ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಇಲ್ಲ ಎಂಬುದನ್ನು ದೃಢಪಡಿಸಿಕೊಳ್ಳದೆ ಹಾಗೂ ಇಲಾಖೆಯ ನಿಯಮಗಳ ಪ್ರಕಾರ ಕೆಲಸಗಾರರಿಗೆ ಸೂಕ್ತ ಸುರಕ್ಷತಾ ಸಲಕರಣೆ ನೀಡದೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದರು ಎಂದು ಅವರ ಮೇಲೆ ಆರೋಪ  ಹೊರಿಸಲಾಗಿತ್ತು.

ಶಿವಮೊಗ್ಗದ ಉಪ ವಿದ್ಯುತ್ ಪರಿವೀಕ್ಷಕ ಡಿ. ಸಿದ್ದಪ್ಪ ಪ್ರಾಥಮಿಕ ಪರಿಶೀಲನೆ ನಡೆಸಿ ಪೊಲೀಸರಿಗೆ ದೂರು ನೀಡಿದ್ದು ಘಟನೆಯ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಗಳ ವಿರುದ್ಧ `ಕ್ರಿಮಿನಲ್ ನಿರ್ಲಕ್ಷ್ಯ ಪ್ರಕರಣ~ದಡಿ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಎಸ್. ಮಹೇಶ್ ತೀರ್ಪು ನೀಡಿ,  ಜೈಲು ಶಿಕ್ಷೆ ವಿಧಿಸುವ ಜತೆಗೆ ಮೃತ ಕುಮಾರ್ ಕುಟುಂಬಕ್ಕೆ ಇಬ್ಬರೂ ತಲಾ 50ಸಾವಿರ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿದರು. ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ಎಸ್. ಸುರೇಶ್ ಕುಮಾರ್ ವಾದಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.