ADVERTISEMENT

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕಾಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ಖಾನಾಪುರ ತಾಲ್ಲೂಕಿನ ತಾವರಗಟ್ಟಿ ಬಳಿ ಮೃತಪಟ್ಟ ಕಾಡಾನೆಯ ಕಳೇಬರಕ್ಕೆ ಪೂಜೆ ಸಲ್ಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಖಾನಾಪುರ ತಾಲ್ಲೂಕಿನ ತಾವರಗಟ್ಟಿ ಬಳಿ ಮೃತಪಟ್ಟ ಕಾಡಾನೆಯ ಕಳೇಬರಕ್ಕೆ ಪೂಜೆ ಸಲ್ಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ   

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಗೋಲಿಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ಹಳಿ ದಾಟುತ್ತಿದ್ದ ಹೆಣ್ಣಾನೆಯೊಂದು ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದೆ.

ಆಹಾರ ಅರಸಿ, ದಾಂಡೇಲಿ ಅರಣ್ಯ ಪ್ರದೇಶದಿಂದ ಆನೆಗಳ ಹಿಂಡೊಂದು ಇಲ್ಲಿಗೆ ಬಂದಿತ್ತು. ಮೃತಪಟ್ಟ ಆನೆ ಈ ಹಿಂಡಿಗೆ ಸೇರಿದ್ದು ಎಂದು ತಿಳಿದುಬಂದಿದೆ.

‘ಹಳಿ ದಾಟುತ್ತಿದ್ದ ಆನೆಗಳು, ರೈಲಿನ ಸದ್ದಿನಿಂದ ಗಾಬರಿಯಾಗಿ ಸೇತುವೆ ಬಳಿ ಓಡಿವೆ. ಹಳಿಗಳನ್ನು ಬಿಟ್ಟು ಪಕ್ಕದ ಕಂದಕಕ್ಕೆ ಹಾರಿದ ಅವು ಪ್ರಾಣಾಪಾಯದಿಂದ ಪಾರಾಗಿವೆ. ಆದರೆ, ಹಿಂಡಿನಿಂದ ಹಿಂದೆ ಇದ್ದ ಹೆಣ್ಣಾನೆ ಹಳಿ ದಾಟುವಾಗ ರೈಲಿಗೆ ಡಿಕ್ಕಿಯಾಗಿ, ಪಕ್ಕದಲ್ಲಿದ್ದ 20 ಅಡಿ ಎತ್ತರದ ಸೇತುವೆ ಮೇಲಿಂದ ಬಿದ್ದು ಮೃತಪಟ್ಟಿದೆ’ ಎಂದು ಖಾನಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಬಿ ಪಾಟೀಲ ತಿಳಿಸಿದರು.

ADVERTISEMENT

‘ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗುರುರಾಜ ಮನಗೂಳಿ ನೇತೃತ್ವದ ವೈದ್ಯರ ತಂಡ ಆನೆಯ ಮರಣೋತ್ತರ ಪರೀಕ್ಷೆ ನಡೆಸಿತು. ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು’ ಎಂದು ತಹಸೀಲ್ದಾರ್ ಶಿವಾನಂದ ಉಳ್ಳೇಗಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.