ADVERTISEMENT

ಚಿಕ್ಕಮಗಳೂರು: ಇಂದಿನಿಂದ ದತ್ತ ಜಯಂತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 20:08 IST
Last Updated 13 ಡಿಸೆಂಬರ್ 2013, 20:08 IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆಯುವ ದತ್ತ ಜಯಂತಿ ಇದೇ 14ರಿಂದ ಆರಂಭವಾಗಲಿದೆ.

ದತ್ತ ಜಯಂತಿ ಅಂಗವಾಗಿ ನಗರ ಪ್ರಮುಖ ರಸ್ತೆಗಳು, ವೃತ್ತಗಳು ಕೇಸರಿ ಬಣ್ಣದ ಭಗವಾಧಜ್ವ, ಬ್ಯಾನರ್‌, ಬಂಟಿಂಗ್ಸ್‌ಗಳಿಂದ ಶೃಂಗಾರಗೊಂಡಿವೆ. ಹನುಮಂತಪ್ಪ ವೃತ್ತ ಸೇರಿದಂತೆ ಮುಖ್ಯ ವೃತ್ತಗಳು ಸಂಪೂರ್ಣ ಕೇಸರಿಮಯವಾಗಿವೆ.

ಶನಿವಾರ ಇನಾಂ ದತ್ತಾತ್ರೇಯ ಪೀಠದಲ್ಲಿ ಅನುಸೂಯ ದೇವಿ ಪೂಜೆಯೊಂದಿಗೆ ದತ್ತ ಜಯಂತಿಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಮಹಿಳೆಯರು ನಗರದಲ್ಲಿ ಸಂಕೀರ್ತನಾ ಮೆರವಣಿಗೆ ನಡೆಸಿ, ಪೀಠಕ್ಕೆ ತೆರಳಿ ದತ್ತಾತ್ರೇಯರ ತಾಯಿ ಅನುಸೂಯ ದೇವಿಗೆ ಪೂಜೆ ಸಲ್ಲಿಸಲಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಪೂಜೆಗೆ ಬರುವ ಮಹಿಳೆಯರಿಗೆ ಸಂಘ ಪರಿವಾರದ ಮಹಿಳಾ ಘಟಕದಿಂದ ಅರಿಶಿಣ, ಕುಂಕುಮ ನೀಡಿ ಸತ್ಕರಿಸಲಾಗುತ್ತದೆ.

ಇದೇ 15ರಂದು ನಗರದಲ್ಲಿ ಶೋಭಾಯಾತ್ರೆ ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಮಾಲೆ ಧರಿಸಿ ದತ್ತಮಾಲಾಧಾರಿಗಳು ಆಗಮಿಸಲಿದ್ದಾರೆ. ನಗರದ ಕಾಮಧೇನು ಗಣಪತಿ ದೇವಾಲಯದಿಂದ ಆರಂಭಗೊಳ್ಳುವ ಶೋಭಾಯಾತ್ರೆ ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಆಜಾದ್ ಮೈದಾನ ತಲುಪಲಿದೆ. ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಮರುದಿನ ಬೆಳಿಗ್ಗೆ ಪೀಠಕ್ಕೆ ಹೊರಡುವ ದತ್ತಮಾಲಾಧಾರಿಗಳು ಮಾರ್ಗ ಮಧ್ಯೆ ಸಿಗುವ ಹೊನ್ನಮ್ಮನ ಹಳ್ಳದಲ್ಲಿ ಪವಿತ್ರ ಸ್ನಾನ ಮಾಡಿ, ಇರುಮುಡಿ ಹೊತ್ತು ಪೀಠಕ್ಕೆ ಕಾಲ್ನಡಿಗೆಯಲ್ಲಿ ಹೋಗಲಿದ್ದಾರೆ. ಪೀಠದ ಪ್ರವೇಶ ದ್ವಾರದ ಬಳಿ ಇರುಮುಡಿ ಸರ್ಮರ್ಪಿಸಿ, ಗುಹೆಯಲ್ಲಿರುವ ದತ್ತ ಪಾದುಕೆಗಳ ದರ್ಶನ ಪಡೆಯಲಿದ್ದಾರೆ.

ನಂತರ ಪೀಠದ ಹೊರ ಭಾಗದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಸಭಾಂಗಣದಲ್ಲಿ ನಡೆಯುವ ಹೋಮ, ಹವನಗಳಲ್ಲಿ ಭಾಗವಹಿಸಿ, ದತ್ತಮಾಲಾಧಾರಿಗಳು ಅಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಜಿಲ್ಲಾಡಳಿತ ನಗರ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿಪೊಲೀಸ್‌ ಬಂದೋಬಸ್ತ್‌ ಮಾಡಿದೆ. ಅಲ್ಲದೆ ಜಿಲ್ಲಾಡಳಿತ ದತ್ತ ಪಾದುಕೆಗಳ ದರ್ಶನಕ್ಕೆ ಬರುವ ಮಾಲಾಧಾರಿಗಳಿಗೆ ಅನುಕೂಲವಾಗುವಂತೆ ಪೀಠದಲ್ಲಿ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.