ADVERTISEMENT

ಚುನಾವಣಾ ಸಿಬ್ಬಂದಿ ಮೇಲೆ ‘ಲೈಫ್’ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST

ಹುಣಸೂರು: ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕರ್ತವ್ಯದಲ್ಲಿರುವ ಸೆಕ್ಟರ್ ಮತ್ತು ಫ್ಲೈಯಿಂಗ್ ಅಧಿಕಾರಿಗಳ ಮೇಲೆ ನಿಗಾ ಇಡಲು ‘ಲೈಫ್‌– 360’ ಎಂಬ ಆ್ಯಪ್‌ ಸಿದ್ಧಗೊಳಿಸಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗ.

ಹುಣಸೂರು ಉಪವಿಭಾಗಾಧಿಕಾರಿ ಕೆ.ನಿತೀಶ್‌, ಪ್ರಭಾರಿ ತಹಶೀಲ್ದಾರ್‌ ರಕ್ಷಿತ್‌ ತಮ್ಮ ಮೊಬೈಲ್‌ಗೆ ಈ ಆ್ಯಪ್‌ ಅಳವಡಿಸಿಕೊಂಡಿದ್ದಾರೆ. ಕ್ಷೇತ್ರದ 6 ಸೆಕ್ಟರ್ ಹಾಗೂ 21 ಫ್ಲೈಯಿಂಗ್ ತಂಡದ ಸಿಬ್ಬಂದಿಗಳ ಮೊಬೈಲ್‌ಗಳಿಗೂ ಜೋಡಿಸಲಾಗಿದೆ. ಇದರಿಂದ ಅವರು ಯಾವ ಸ್ಥಳದಲ್ಲಿದ್ದಾರೆ, ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದಾರೆ ಎಂಬುದನ್ನು ವೀಕ್ಷಿಸಬಹುದು.

‘ಸಿಬ್ಬಂದಿ ಎಷ್ಟು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಯಲು ಹಾಗೂ ಕಾರ್ಯಕ್ಷಮತೆ ಗುರುತಿಸಲು ಈ ಆ್ಯಪ್ ಸಹಕಾರಿಯಾಗಿದೆ’ ಎಂದು ಉಪವಿಭಾಗಾಧಿಕಾರಿ ಕೆ.ನಿತೀಶ್ ತಿಳಿಸಿದರು.

ADVERTISEMENT

‘ಜಿಲ್ಲಾಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಹುಣಸೂರು ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಬಳಸಲು ಅನುಮತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇತರೆ ಕ್ಷೇತ್ರಗಳಿಗೂ ವಿಸ್ತರಿಸುವ ಆಲೋಚನೆ ಇದೆ. ನಾಮಪತ್ರ ಸಲ್ಲಿಸುವವರೆಗೂ ಮೊಬೈಲ್‌ನಲ್ಲೇ ನಿರ್ವಹಣೆ ಮಾಡಲಾಗುವುದು. ನಂತರ ಲ್ಯಾಪ್‌ಟಾಪ್‌ ಮೂಲಕ ಅಧಿಕಾರಿಗಳ ಚಲನವಲನ ವೀಕ್ಷಿಸಲಾಗುವುದು. ಇದರಿಂದ ಸಿಬ್ಬಂದಿ ಕಾರ್ಯದಕ್ಷತೆ ಹೆಚ್ಚಾಗಿ, ಚುನಾವಣಾ ಅಕ್ರಮ ನಿಯಂತ್ರಿಸಲು ಸಹಕಾರಿಯಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.