ADVERTISEMENT

ಚುನಾವಣೆ ನೆಪ: ಸಮಯ ಕೇಳಲು ನಿರ್ಧಾರ

ಬಡ್ತಿ ಮೀಸಲು: ‘ಸುಪ್ರೀಂ’ನಲ್ಲಿ 20ರಂದು ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
ಚುನಾವಣೆ ನೆಪ: ಸಮಯ ಕೇಳಲು ನಿರ್ಧಾರ
ಚುನಾವಣೆ ನೆಪ: ಸಮಯ ಕೇಳಲು ನಿರ್ಧಾರ   

ಬೆಂಗಳೂರು: ‘ಬಡ್ತಿ ಮೀಸಲು ಕಾಯ್ದೆ–2002’ ಅನ್ನು ರದ್ದುಪಡಿಸಿ ಸುಪ್ರಿಂ ಕೋರ್ಟ್‌ 2017ರ ಫೆ. 9ರಂದು ನೀಡಿದ ಆದೇಶ ಅನುಷ್ಠಾನಕ್ಕೆ ಇನ್ನಷ್ಟು ಕಾಲಾವಕಾಶ ಕಾಲಾವಕಾಶ ಕೋರಿ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆದೇಶ ಪಾಲಿಸದ ಕಾರಣಕ್ಕೆ ಸರ್ಕಾರದ ವಿರುದ್ಧ ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗದ ನೌಕರರ ಒಕ್ಕೂಟ) ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಇದೇ 20ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.

1978ರಿಂದ ಅನ್ವಯವಾಗುವಂತೆ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ ಬಡ್ತಿ ನೀಡುವಂತೆ ಕೋರ್ಟ್‌ ಆದೇಶ ನೀಡಿತ್ತು. ಆದರೆ, ಈಗಾಗಲೇ ಎರಡು ಬಾರಿ ಕಾಲಾವಕಾಶ ಪಡೆದಿದ್ದ ಸರ್ಕಾರ, ಇದೀಗ ಎರಡು ತಿಂಗಳ ಒಳಗೆ ನಡೆಯುವ ಚುನಾವಣೆಯನ್ನು ಕಾರಣವಾಗಿಟ್ಟು ಸಮಯ ಕೇಳಲು ತೀರ್ಮಾನಿಸಿದೆ.

ADVERTISEMENT

ಈಗಾಗಲೇ ಅಡ್ವೊಕೇಟ್‌ ಜನರಲ್‌ ಜೊತೆ ಚರ್ಚೆ ನಡೆಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಅಧಿಕಾರಿಗಳು, ಆದೇಶದಂತೆ ಬಡ್ತಿ ಪ್ರಕ್ರಿಯೆ ನಡೆಸಿದರೆ ಚುನಾವಣಾ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವ ವಿಷಯವನ್ನು ಕೋರ್ಟಿನ ಗಮನಕ್ಕೆ ತರಲು ಚಿಂತನೆ ನಡೆಸಿದ್ದಾರೆ.

ಕೋರ್ಟ್‌ ಆದೇಶ ಪಾಲನೆಯಿಂದ ಹಿಂಬಡ್ತಿ ಪಡೆಯಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಹಿತ ಕಾಪಾಡಲು ರೂಪಿಸಿದ ಮಸೂದೆಯನ್ನು ಅಂಕಿತಕ್ಕಾಗಿ ರಾಷ್ಟ್ರಪತಿಗೆ ಕಳುಹಿಸಲಾಗಿದೆ. ಸದ್ಯ ಕೇಂದ್ರ ಗೃಹ ಇಲಾಖೆಯಲ್ಲಿರುವ ಈ ಮಸೂದೆಗೆ ಕೇಂದ್ರ ಕಾನೂನು ಇಲಾಖೆ ಎರಡನೇ ಬಾರಿಗೆ ಸ್ಪಷ್ಟೀಕರಣ ಕೇಳಿದೆ.

ಕೇಂದ್ರ ಕಾನೂನು ಇಲಾಖೆ ಕೇಳಿದ ಪ್ರಶ್ನೆಗಳ ಬಗ್ಗೆ ಅಡ್ವೊಕೇಟ್‌ ಜನರಲ್‌ ಜೊತೆ ಸಮಾಲೋಚಿಸಿ ಉತ್ತರ ಸಿದ್ಧಪಡಿಸಲಾಗಿದೆ. ಮೊದಲ ಬಾರಿ ಕೇಳಿದ್ದ ಪ್ರಶ್ನೆಗಳಿಗೇ ಮತ್ತೊಮ್ಮೆ ಸ್ಪಷ್ಟೀಕರಣ ಕೇಳಲಾಗಿದೆ. ಶುಕ್ರವಾರವೇ (ಮಾರ್ಚ್‌ 16) ಉತ್ತರಗಳನ್ನು ಕಳುಹಿಸಿಕೊಡಲಾಗಿದೆ ಎಂದು ಸಂಸದೀಯ ಇಲಾಖೆ ಅಧಿಕಾರಿ ತಿಳಿಸಿದರು.
***
ಕೆಪಿಟಿಸಿಎಲ್‌ನಲ್ಲಿ ಸಿಇ ಹುದ್ದೆಗೆ ಬಡ್ತಿ
ಈ ಮಧ್ಯೆ, ಕೆಪಿಟಿಸಿಎಲ್‌ನಲ್ಲಿ ಖಾಲಿ ಇರುವ ಏಳು ಮುಖ್ಯ ಎಂಜಿನಿಯರ್‌ (ಸಿಇ) ಹುದ್ದೆಗಳಿಗೆ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಹುದ್ದೆಯಿಂದ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಅನ್ವಯ ಬಡ್ತಿ ನೀಡಲಾಗಿದೆ.

ಆದರೆ, ಈಗಾಗಲೇ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿರುವ ಕೆಲವರು ಪರಿಷ್ಕೃತ ಪಟ್ಟಿ ಅನ್ವಯ ಹಿಂಬಡ್ತಿ ಪಡೆಯಬೇಕಿದೆ. ಆದರೆ, ಈ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಕೆಪಿಟಿಸಿಎಲ್‌ನಲ್ಲಿ ಒಟ್ಟು 34 ಮುಖ್ಯ ಎಂಜಿನಿಯರ್ ಹುದ್ದೆಗಳಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.