ADVERTISEMENT

‘ಚುನಾವಣೆ ಸಂದರ್ಭ ಗಲಭೆ ಸಾಧ್ಯತೆ’

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಜಾಮದಾರ
ಜಾಮದಾರ   

ಬೆಂಗಳೂರು: ‘ವೀರಶೈವ ಮಠಾಧೀಶರು, ಪಂಚಪೀಠಾಧೀಶರು ನೀಡುತ್ತಿರುವ ಪ್ರಚೋದನಕಾರಿ ಹೇಳಿಕೆಗಳಿಂದ ಚುನಾವಣೆ ಸಂದರ್ಭದಲ್ಲಿ ಹಿಂಸಾಚಾರ ನಡೆಯಬಹುದು’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಎಂ. ಜಾಮದಾರ ಆತಂಕ ವ್ಯಕ್ತಪಡಿಸಿದರು.

ಲಿಂಗಾಯತ ಸಮಾಜ ಮತ್ತು ಮುಖಂಡರಿಗೆ ರಕ್ಷಣೆ ನೀಡುವುದರ ಜೊತೆಗೆ ಗಲಭೆ ಆಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಆಗ್ರಹಿಸಿದರು. ಈ ಸಂಬಂಧ ಚುನಾವಣಾ ಆಯೋಗ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೂ ಮನವಿ ಮಾಡಿದರು.

ಪಂಚ ಪೀಠಾಧೀಶರಲ್ಲಿ ಕೆಲವರು ಲಿಂಗಾಯತ ಮುಖಂಡರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆದರಿಕೆ ಹಾಕುತ್ತಿದ್ದಾರೆ. ಇವರ ಪ್ರಚೋದನಕಾರಿ ಹೇಳಿಕೆಗಳಿಂದ ಗಲಭೆ ನಡೆಯುವ ವಾತಾವರಣ ಸೃಷ್ಟಿ ಆಗಿದೆ. ಪ್ರಚೋದನೆ ನೀಡುತ್ತಿರುವವರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಶ್ರೀಶೈಲಪೀಠದ ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ‘ವೀರಶೈವ– ಲಿಂಗಾಯತ ಧರ್ಮ ಒಡೆಯುತ್ತಿರುವವರು ಪಾಕಿಸ್ತಾನದ ಏಜೆಂಟರು ಎಂದಿದ್ದಾರೆ. ನಮ್ಮಮೇಲೆ ದೇಶದ್ರೋಹದ ಆರೋಪ ಮಾಡುವ ಮೊದಲು ಆಧಾರ ಇದ್ದರೆ ತೋರಿಸಲಿ’ ಎಂದು ಜಾಮದಾರ ಕಿಡಿ ಕಾರಿದರು.

‘ರಂಭಾಪುರಿ ಪೀಠದ ಪ್ರಸನ್ನ ವೀರ ಸೋಮೇಶ್ವರ ಪಂಡಿತಾರಾಧ್ಯ ಸ್ವಾಮೀಜಿ, ನನ್ನ ವಿರುದ್ಧ ವೈಯಕ್ತಿಕವಾಗಿ ಟೀಕಾಪ್ರಹಾರ ನಡೆಸಿದ್ದಾರೆ. ನಾನು ಒಬ್ಬ ನಾಗರಿಕನಾಗಿ, ಸ್ವಾಮೀಜಿಗಳನ್ನು ಪ್ರಶ್ನಿಸಬಾರದೆ. ಕೆ.ಜಿಗಟ್ಟಲೆ ಬಂಗಾರದ ಒಡವೆಗಳನ್ನು ಧರಿಸುವ ಪಂಚಪೀಠಾಧೀಶರ ವೈಭವ, ಆಡಂಬರದ ಬಗ್ಗೆ ನಾನು ಮಾತನಾಡಿದ್ದೇನೆ. ಈ ಬಗ್ಗೆ ಅವರಿಗೆ ತಕರಾರಿದ್ದರೆ, ನ್ಯಾಯಾಲಯದ ಮೆಟ್ಟಿಲು ಹತ್ತಲಿ. ನ್ಯಾಯಾಲಯದಲ್ಲಿ ಇನ್ನಷ್ಟು ವಿವರ ಬಹಿರಂಗ ಮಾಡಲು ಸಿದ್ಧ. ನನ್ನ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ’ ಎಂದು ತಾಕೀತು ಮಾಡಿದರು.

‘ಸಚಿವ ಎಂ.ಬಿ.ಪಾಟೀಲರನ್ನು ನೇಣಿಗೆ ಏರಿಸುತ್ತೇನೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಲಿಂಗಾಯತ ಧರ್ಮದ ಪರ ಹೋರಾಟ ಮಾಡುತ್ತಿರುವವರ ವಿರುದ್ಧ ಬಿಜೆಪಿ ನಾಯಕಿಯೊಬ್ಬರು ಕೆಟ್ಟದಾಗಿ ಮಾತನಾಡಿದ್ದಾರೆ.  ನಮ್ಮ ವಿರುದ್ಧ ಜನರನ್ನು ಎತ್ತಿಕಟ್ಟುವ ಹುನ್ನಾರ ನಡೆದಿದೆ’ ಎಂದು ದೂರಿದರು.

‘ಸತ್ಯ ಪ್ರತಿಪಾದಕರಾದ ಲಿಂಗಾಯತರನ್ನು ಪಾಕಿಸ್ತಾನ ಏಜೆಂಟರೆಂದು ಹೇಳಿಕೆ ನೀಡಿರುವ ಸ್ವಾಮೀಜಿ ಪೀಠ ತೊರೆದು ರಾಜಕೀಯ ಪಕ್ಷ ಸೇರಿಕೊಳ್ಳಲಿ. ಗುರು ಸ್ಥಾನದಲ್ಲಿ ಕುಳಿತು ಈ ರೀತಿಯ ಹೇಳಿಕೆಗಳನ್ನು ನೀಡಬಾರದು’ ಎಂದು ಬೇಲಿಮಠದ ಶಿವರುದ್ರ ಸ್ವಾಮೀಜಿ ಹೇಳಿದರು.

‘ಅಮಿತ್‌ ಶಾ ನಿಲುವು ಸ್ಪಷ್ಟಪಡಿಸಲಿ’
ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಎಸ್‌.ಎಂ.ಜಾಮದಾರ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಿದೆ. ಈಗ ರಾಜ್ಯ ಪ್ರವಾಸದಲ್ಲಿರುವ ಅವರು ಸತ್ಯ ಮತ್ತು ವಾಸ್ತವಾಂಶ ಅರಿಯುವ ಕೆಲಸ ಮಾಡಬೇಕು ಎಂದೂ ಹೇಳಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವುದರಿಂದ ಯಾರದೇ ಮೀಸಲಾತಿಗೆ ಧಕ್ಕೆ ಆಗುವುದಿಲ್ಲ ಎಂದೂ ಹೇಳಿದರು.

ಬಸವ ಜಯಂತಿ ಮಹಾಸಭಾದ ಜೊತೆ ಆಚರಿಸಲಿ
ಬೆಳಗಾವಿ: ‘
ಮುಂದಿನ ತಿಂಗಳು ನಡೆಯಲಿರುವ ಬಸವ ಜಯಂತಿಯನ್ನು ಲಿಂಗಾಯತ ಸಮುದಾಯದವರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಜಾಗತಿಕ ಲಿಂಗಾಯತ ಮಹಾಸಭಾದ ಜೊತೆಗೂಡಿಯೇ ರಾಜ್ಯ ಸರ್ಕಾರ ಆಚರಿಸಬೇಕು. ಜಯಂತಿ ಆಚರಣೆಗೆ ಸರ್ಕಾರದ ವತಿಯಿಂದ ನೀಡಲಾಗುವ ಅನುದಾನವನ್ನು ಅದಕ್ಕೇ ನೀಡಬೇಕು’ ಎಂದು ಮಹಾಸಭಾದ ಅಧ್ಯಕ್ಷ ಬಸವರಾಜ ಹೊರಟ್ಟಿ ಸೋಮವಾರ ಇಲ್ಲಿ ಒತ್ತಾಯಿಸಿದರು.

ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ಹೋರಾಟ ನಡೆಸಿದ್ದರ ಫಲವಾಗಿ ಪಂಚಪೀಠದ ಸ್ವಾಮೀಜಿಗಳು ಇಂದು ಬಸವಣ್ಣನನ್ನು ಹೊಗಳುತ್ತಿದ್ದಾರೆ. ಬಾದಾಮಿಯಲ್ಲಿರುವ ಶಿವಯೋಗ ಮಂದಿರದಲ್ಲಿ ಬಸವಣ್ಣನ ಭಾವಚಿತ್ರ ಹಾಕಿಕೊಂಡಿದ್ದಾರೆ. ಮುಂದೆ ನಡೆಯಲಿರುವ ಬಸವ ಜಯಂತಿಯನ್ನು ಕೂಡ ಅದ್ಧೂರಿಯಾಗಿ ಆಚರಿಸಲು ಮುಂದಾಗಬಹುದು. ಇದಕ್ಕೆ ಲಿಂಗಾಯತರು ಅವಕಾಶ ನೀಡಬಾರದು’ ಎಂದರು.

‘ಪಂಚಪೀಠದ ಸ್ವಾಮೀಜಿಗಳು ಮಾತನಾಡಿದಷ್ಟು ಜೋರಾಗಿ ಲಿಂಗಾಯತ ಸ್ವಾಮೀಜಿಗಳು ಮಾತನಾಡುತ್ತಿಲ್ಲ. ಕೆಲವರು ಪಂಚಪೀಠಾಧೀಶರ ಮಾತು ಕೇಳಿಕೊಂಡು ಲಿಂಗಾಯತ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಇನ್ನು ಕೆಲವರು ವೀರಶೈವ, ಲಿಂಗಾಯತ ಇಬ್ಬರ ಪರವಾಗಿಯೂ ಮಾತನಾಡುತ್ತಿದ್ದಾರೆ. ಎರಡೂ ಕಡೆ ಮಾತನಾಡುವವರು ನಮಗೆ ಬೇಡ. ಅಂಥವರು ವೀರಶೈವದವರ ಜೊತೆಯೇ ಇರಲಿ’ ಎಂದು ಹೇಳಿದರು.

ನಾಗನೂರ ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ, ಹುಕ್ಕೇರಿಯ ಶಿವಬಸವ ಸ್ವಾಮೀಜಿ, ಶೇಗುಣಸಿಯ ಮಹಾಂತ ದೇವ, ಮುಖಂಡರಾದ ಎ.ಬಿ. ಪಾಟೀಲ ಉಪಸ್ಥಿತರಿದ್ದರು.

‘ಲಿಂಗಾಯತ ಹೆಣ್ಮಕ್ಕಳೂ ಕಡಿಮೆಯಿಲ್ಲ’: ‘ಲಿಂಗಾಯತ ಹೆಣ್ಮಕ್ಕಳೂ ಕಡಿಮೆ ಇಲ್ಲ. ನಮ್ಮ ಧರ್ಮಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ಅಡ್ಡಿಪಡಿಸುವವರೆಗೆ ಸೂಕ್ತ ಉತ್ತರ ಕೊಡಲು ನಾವೂ ಸಿದ್ಧ’ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಿತಿಯ ಸದಸ್ಯೆ ಶ್ರುತಿ ಗುಡಸ ವಾಗ್ದಾಳಿ ನಡೆಸಿದರು.

‘ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಮಹಿಳೆಯೊಬ್ಬರು ನಮ್ಮನ್ನು ಪೀಸ್‌ ಪೀಸ್‌ ಮಾಡುವುದಾಗಿ ಹೇಳಿದ್ದಾರೆ. ಅವರ‍್ಯಾರು ನಮ್ಮನ್ನು ಕತ್ತರಿಸಲು? ಆ ಮಹಿಳೆಯ ಮಾತು ಕೇಳಿದರೆ ಅವರು ಆರ್‌ಎಸ್‌ಎಸ್‌ನಲ್ಲಿ ತರಬೇತಿ ಪಡೆದವರಂತೆ ಕಾಣುತ್ತದೆ’ ಎಂದರು.

ದಿವ್ಯಾ ಹಾಗರಗಿ ಬಂಧನಕ್ಕೆ ಆಗ್ರಹ
ವಿಜಯಪುರ:
‌ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರನ್ನು ಪೀಸ್‌ ಪೀಸ್‌ ಮಾಡುವುದಾಗಿ ಬಹಿರಂಗವಾಗಿ ಹೇಳಿರುವ, ಕಲಬುರ್ಗಿ ಗ್ರಾಮೀಣ ವಲಯದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ದಿವ್ಯಾ ಹಾಗರಗಿ ಅವರನ್ನು ಬಂಧಿಸುವಂತೆ ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಸೋಮವಾರ ಇಲ್ಲಿ ಆಗ್ರಹಿಸಿದರು.

‘‌ವಿಜಯಪುರದಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮಾವೇಶದಲ್ಲಿ ದಿವ್ಯಾ ಅವರು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ. ಪೊಲೀಸರು ಇವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು. ಇದರ ಜತೆಗೆ ಸಮಾವೇಶದ ಸಂಘಟಕರ ವಿರುದ್ಧವೂ ಪ್ರಕರಣ ದಾಖಲಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ವೇದಿಕೆಯಲ್ಲಿದ್ದ ನಾಡಿನ ಪ್ರಮುಖ ಮಠಾಧೀಶರು ದಿವ್ಯಾ ಹೇಳಿಕೆ ಖಂಡಿಸದಿರುವುದು ಸಹಮತ ವ್ಯಕ್ತಪಡಿಸಿದಂತಾಗಿದೆ. ಇದಕ್ಕೆ ಪಂಚಪೀಠಾಧೀಶ್ವರರು ಸ್ಪಷ್ಟನೆ ನೀಡಬೇಕು ಎಂದು ಗಣಿಹಾರ ಒತ್ತಾಯಿಸಿದರು.

‘ಶ್ರೀಶೈಲ ಪೀಠದ ಸ್ವಾಮೀಜಿ, ಲಿಂಗಾಯತ ಪ್ರತ್ಯೇಕ ಧರ್ಮದ ಮುಂಚೂಣಿಯಲ್ಲಿರುವ ಕಾಂಗ್ರೆಸ್ ನಾಯಕರನ್ನು ಪಾಕಿಸ್ತಾನದ ಏಜೆಂಟರು ಎಂದು ದೂರಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ಸಮಾವೇಶದುದ್ದಕ್ಕೂ ಬಿಜೆಪಿ ಪರ ಮಾತನಾಡಿದ್ದಾರೆ. ಹಾಗಿದ್ದರೆ ಇವರೇನು ಮೋದಿ ಏಜೆಂಟರಾ?’ ಎಂದು ಎಸ್‌.ಎಂ.ಪಾಟೀಲ ಖಾರವಾಗಿ ಪ್ರಶ್ನಿಸಿದರು.

‘ಮೋದಿ ಪ್ರಧಾನಿಯಾದ ಬಳಿಕವೇ ಉಗ್ರವಾದ ಹೆಚ್ಚಾಗಿದೆ. ಅಮಾಯಕ ಸೈನಿಕರ ಸಾವು ಹೆಚ್ಚಿದೆ. ಮಠಾಧೀಶರು ಸತ್ಯದ ಅರಿವಿಲ್ಲದೆ ಕಪಟಿಗಳನ್ನು ಬೆಂಬಲಿಸಲು ಮುಂದಾಗಬಾರದು. ರಾಜಕೀಯ ಮಾಡುವ ಇಚ್ಚೆಯಿದ್ದರೆ ಕಾವಿ ತೊರೆದು ಅಖಾಡಕ್ಕೆ ಧುಮುಕಿ’ ಎಂದು ಇದೇ ಸಂದರ್ಭ ತಾಕೀತು ಮಾಡಿದರು.

‘ಬಿಜೆಪಿ ಪ್ರಾಯೋಜಿತ ಸಮಾವೇಶ’: ವೀರಶೈವ ಸ್ವಾಮೀಜಿಗಳು, ಭಾನುವಾರ ಬಿಜೆಪಿ ಪ್ರಾಯೋಜಿತ ಸಮಾವೇಶ ನಡೆಸಿದ್ದಾರೆ ಎಂದು ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರವಿಕುಮಾರ ಬಿರಾದಾರ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ದೂರಿದರು.

ಬಸವ ಸೇನೆಯ ಬಬಲೇಶ್ವರ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ‘ದಿವ್ಯಾ ಅವರು ಇನ್ನು ಮುಂದೆ ಎಂದೂ ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ರಾಷ್ಟ್ರೀಯ ಬಸವಸೇನೆಯ ಮಹಿಳಾ ಘಟಕ ತಡೆಯುತ್ತದೆ. ಜಿಲ್ಲಾಡಳಿತವೂ ಸಹ ಪ್ರವೇಶ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.