ADVERTISEMENT

ಜನರಷ್ಟೇ ಅಲ್ಲ, ಭೂಮಿ ದಾಹವೂ ತಣಿದಿಲ್ಲ!

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ವಿಜಾಪುರ: ‘ಅಷ್ಟಿಷ್ಟು ಬಿದ್ದ ಮಳಿಯಿಂದ ಕಸ ಬೆಳೆದೆತೇ  ಶಿವಾಯ್‌ ಬೆಳಿಗ ನಯಾಪೈಸೆ ಉಪಯೋಗ ಆಗಿಲ್ರಿ. ಶೇಂಗಾ, ಹೆಸರು, ಸಜ್ಜೆ ಕೈಬಿಟ್ಟು ಹೋಗ್ಯಾವ. ನಮ್ಮ ನೀರಡಿಕಿನೂ ತಣದಿಲ್ಲ. ಭೂಮ್‌ ತಾಯಿ  ನೀರಡಿಕಿನೂ ನೀಗಿಲ್ಲ' ಎಂದು ಹೇಳುತ್ತ ಇಂಡಿ ತಾಲ್ಲೂಕು ಚಿಕ್ಕಮಸಳಿ ಗ್ರಾಮದ ವಯೋವೃದ್ಧ ರೈತ ಜಟ್ಟೆಪ್ಪ ದೊಡಮನಿ ಮೌನಕ್ಕೆ ಶರಣಾದರು.

‘28 ಎಕರೆದಾಗ ತೊಗರಿ ಹಾಕಿದ್ವಿ. ಸೊಂಟ ಮಟಾ ಬೆಳಿಬೇಕಾಗಿತ್ತು. ಆದರ ಇನ್ನೂ ಚೋಟು, ಗೇಣು ಉದ್ದ ಐತಿ. ಈಗ ಮಳಿ ಬಿದ್ರೂ ಸುಧಾರಿಸೊ ಲಕ್ಷಣ ಇಲ್ಲ. ಇದನ್ನ ಹರಗಿ ಬಿಳಿಜ್ವಾಳಕ್ಕೆ ಭೂಮಿ ಹದ ಮಾಡೋದೊಂದ ದಾರಿ' ಎಂದು ಹಳಹಳಿಸಿದರು ಬಸವನ ಬಾಗೇವಾಡಿ ತಾಲ್ಲೂಕು ಮಸಬಿನಾಳ ಗ್ರಾಮದ ರೈತ ಹನುಮಂತ ನಾಟೀಕಾರ.

ಒಣ ಬೇಸಾಯ ಆಧಾರಿತ ರೈತರ ಜಮೀನುಗಳಿಗೆ ಭೇಟಿ ನೀಡಿದರೆ, ಸಾಲು ಸಾಲು ಜಮೀನುಗಳಲ್ಲಿಯ ಬೆಳೆ ಬಾಡಿತ್ತು. ತೇವಾಂಶದ ಕೊರತೆಯಿಂದ ಸೆಟೆದು ನಿಲ್ಲಲೂ ಆಗದೆ ಬೆಳೆ ಮಗುಚಿ ಬೀಳುತ್ತಿತ್ತು. ಇನ್ನು ಕೆಲವೆಡೆ ಬಿತ್ತಿದ ಬೀಜ ಮೊಳಕೆಯೊಡೆದ ಕೆಲವೇ ದಿನಗಳಲ್ಲಿ ಸತ್ತು ಹೋಗಿರುವುದು ಕಂಡುಬಂತು.

‘ಕಳೆದ ಬಾರಿಗಿಂತ ಉತ್ತಮ ಮಳೆಯಾಗಿದ್ದು, ಗುರಿ ಮೀರಿ ಬಿತ್ತನೆ ಆಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ವಸ್ತುಸ್ಥಿತಿ ಭಿನ್ನವಾಗಿದೆ. ಮಳೆ ಹೆಚ್ಚಾಗಿರುವುದು ಪಟ್ಟಣಗಳಲ್ಲಿ. ಬಹುತೇಕ ಕಡೆ ಹಸಿ ಮಳೆ ಆಗಿಲ್ಲ. ಬಿತ್ತನೆಯೂ ವಿಳಂಬವಾಗಿದೆ. ಹೊಲಕ್ಕೆ ಹೋದರೆ ಬಾಡುತ್ತಿರುವ ಬೆಳೆ ನೋಡಿದ ಕಣ್ಣುಗಳಲ್ಲಿ ನೀರು ಬರುತ್ತದೆ’ ಎಂದು ಸಾತ್ವಿಕ ಸಿಟ್ಟು ಪ್ರದರ್ಶಿಸಿದರು ಡೊಮನಾಳ ಗ್ರಾಮದ ರೈತ ಮಲ್ಲನಗೌಡ ಪಾಟೀಲ.

‘ವಿಜಾಪುರ ಜಿಲ್ಲೆ ದೇಶದಲ್ಲಿಯೇ ಅತ್ಯಂತ ಬರಪೀಡಿತ ಪ್ರದೇಶ’ ಎಂಬುದನ್ನು ಹಿಂದೆ ಬ್ರಿಟಿಷ್ ಆಡಳಿತ ಗುರುತಿಸಿತ್ತು. ಅದಕ್ಕಾಗಿ ವಿಜಾಪುರ ಮತ್ತು ರಾಜಸ್ತಾನದ ಜೈಸಲ್ಮೇರ್‌ನಲ್ಲಿ ‘ಬರಗಾಲ ನಿವಾರಣೆ ಸಂಸ್ಥೆ’ ಸ್ಥಾಪಿಸಿತ್ತು. ಸ್ವತಂತ್ರ ಭಾರತದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಗುಳೆ ಹೋಗುವುದು ತಪ್ಪಿಲ್ಲ. ಮಳೆಗಾಲದಲ್ಲಿಯೂ ಕೆಲ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದು ನಿಂತಿಲ್ಲ.

ಈಗಲೂ ಜಿಲ್ಲೆಯ 127 ಗ್ರಾಮಗಳು ಮತ್ತು 49 ಜನವಸತಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇಂಡಿ ತಾಲ್ಲೂಕಿನಲ್ಲಿ ಈ ತೀವ್ರತೆ ಹೆಚ್ಚಾಗಿದೆ.

123 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಆಲಮಟ್ಟಿ ಜಲಾಶಯ ಇದ್ದರೂ ಜಿಲ್ಲೆಯ ರೈತರಿಗೆ ಹೆಚ್ಚಿನ ಪ್ರಯೋಜನವಾಗಿಲ್ಲ. ಉಷ್ಣತೆಗೆ ನೀರು ಆವಿಯಾಗುತ್ತಿದೆಯೇ ವಿನಾ ಭೂಮಿಯಲ್ಲಿ ಬಂಡೆ ಹರಡಿಕೊಂಡಿರುವುದರಿಂದ (ಭೂಮಿಯ ಆಳದಲ್ಲಿ ಕೃಷ್ಣೆಯಿಂದ ಭೀಮೆಯ ವರೆಗೆ ಒಂದೇ ಬಂಡೆ ಇದೆ ಎಂಬುದು ಭೂಗರ್ಭ ಶಾಸ್ತ್ರಜ್ಞರ ಮಾಹಿತಿ) ಅಂತರ್ಜಲವೂ ಹೆಚ್ಚುತ್ತಿಲ್ಲ. ಕೃಷ್ಣೆ, ಭೀಮೆ ಇಲ್ಲಿಯ ನದಿಗಳು. ಮಳೆಯಾದರಷ್ಟೇ ಡೋಣಿ ನದಿಯಲ್ಲಿ ನೀರು. ಇನ್ನು ಕೆರೆ-ಕಟ್ಟೆಗಳಿದ್ದರೂ ಅವುಗಳ ಒಡಲು ಸದಾ ಖಾಲಿ ಖಾಲಿ.

ರಾಜಸ್ತಾನದ ಜಲ ತಜ್ಞ ಡಾ.ರಾಜೇಂದ್ರ ಸಿಂಗ್ ಕಂಡುಕೊಂಡಂತೆ, ‘ಬರಗಾಲ ಮತ್ತು ಅತಿಯಾದ ಉಷ್ಣತೆ ವಿಜಾಪುರ ಜಿಲ್ಲೆಯ ಬಹುದೊಡ್ಡ ಸಮಸ್ಯೆ. ಬರ ಸದಾ ಬಾಧಿಸುತ್ತಿದ್ದರೆ ಹೆಚ್ಚಿನ ಉಷ್ಣತೆಯಿಂದಾಗಿ ಇಲ್ಲಿಯ ನದಿ-ಜಲಾಶಯ-ಕೆರೆಗಳ ನೀರು ಆವಿಯ ರೂಪದಲ್ಲಿ ಮಾಯವಾಗುತ್ತಿದೆ’.

ಕೃಷ್ಣಾ-, ಭೀಮಾ ತೀರದಲ್ಲಿ ಕಬ್ಬು, ಗೋವಿನ ಜೋಳ ಮತ್ತಿತರ ಬೆಳೆ ಹುಲುಸಾಗಿರುವುದರಿಂದ ಆ ಪ್ರದೇಶದ ರೈತರು ಖುಷಿಯಾಗಿದ್ದಾರೆ. ಖುಷ್ಕಿ ಪ್ರದೇಶದ ಬಹುತೇಕ ರೈತರು ಬಾಡಿದ ಬೆಳೆ ತೆಗೆದು ಬಿಳಿಜೋಳ ಬಿತ್ತನೆಗೆ ಭೂಮಿ ಹದ ಮಾಡಲು ಸಜ್ಜಾಗುತ್ತಿದ್ದಾರೆ.

ಚಿಂತೆ ಕಾಡುತ್ತಿದೆ
ಮೆಕ್ಕೆಜೋಳ, ತೊಗರಿ ಬಿತ್ತಿದ್ವಿರಿ. ಮಳಿ ಹೋಗಿ  ಎಲ್ಲಾ ಒಣಗ್ಯಾವ್ರಿ. ದನಕ್ಕ ಮೇವೂ ಬರಂಗಿಲ್ರಿ. ಮುಂದ ಏನಪಾ ಅನ್ನೋ ಚಿಂತಿ ಕಾಡ್ತೇತ್ರಿ.
ಮಹಾದೇವಿ ಅಳೊಳ್ಳಿ, ರೈತ ಮಹಿಳೆ. ತಾಂಬಾ(ತಾ.ಇಂಡಿ)

ಇದೆಲ್ಲ ನಮ್ಮ ಹಣೆಬರಹ

ನಿತ್ಯವೂ ಆಗಸ ನೋಡುವುದು ತಪ್ಪಿಲ್ಲ. ರಾತ್ರಿ ಮೋಡಗಳು ತೇಲುತ್ತಿರುತ್ತವೆಯಾದರೂ ಬೆಳಿಗ್ಗೆ ನೋಡುವಷ್ಟರಲ್ಲಿ ಆಗಸ ಶುಭ್ರವಾಗಿರುತ್ತದೆ. ಏನ್ ಮಾಡೋದು ಹೇಳಿ, ಇದೆಲ್ಲ ನಮ್ಮ ಹಣೆಬರಹ.
-ಶ್ಯಾಮ್ ಯಶವಂತ ಮೊಹಿತೆ, ರೈತ, ಸಿದ್ದಾಪುರ (ತಾ. ವಿಜಾಪುರ)

ಇಳುವರಿ ಕಡಿಮೆ

ಜೂನ್ ತಿಂಗಳಲ್ಲಿ ಮಳೆ ಆಗಲಿಲ್ಲ. ಜುಲೈ ತಿಂಗಳಲ್ಲಿ ಅತ್ಯಧಿಕ 206 ಮಿ.ಮೀ. (ವಾಡಿಕೆಯ ಮಳೆ 77ಮಿ.ಮೀ.) ಮಳೆ ಆಯಿತು. ಆ ಇಡೀ ತಿಂಗಳು ಮೋಡ ಮುಸುಕಿದ ವಾತಾವರಣ ಇತ್ತು. ಸೂರ್ಯಕಿರಣಗಳ ಕೊರತೆಯಿಂದ ಬೆಳೆಯ ಬೆಳವಣಿಗೆ ಕುಂಠಿತಗೊಂಡಿತು. ತೋರಿಕೆಗೆ ಮಳೆ ಹೆಚ್ಚಾಗಿದೆ ಎಂದು ಕಂಡರೂ ಬೆಳೆಗೆ ಪ್ರಯೋಜವಾಗಿಲ್ಲ. ತೇವಾಂಶದ ಕೊರತೆಯಿಂದ ಬಹುತೇಕ ಕಡೆಗಳಲ್ಲಿ ಬೆಳೆ ಬಾಡುತ್ತಿದೆ. ಇಳುವರಿಯೂ ಕಡಿಮೆಯಾಗಲಿದೆ. ಪರಿಸ್ಥಿತಿ ಅಷ್ಟೇನು ತೃಪ್ತಿದಾಯಕವಾಗಿಲ್ಲ.
-ಡಾ.ಎಚ್. ವೆಂಕಟೇಶ್, ಕೃಷಿ ಹವಾಮಾನ ಶಾಸ್ತ್ರಜ್ಞ,
ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ವಿಜಾಪುರ

ಮಳೆ ಬಂದರೆ ಚೇತರಿಕೆ

ವಿಜಾಪುರ ಜಿಲ್ಲೆಯಲ್ಲಿ 4.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆ ಪೈಕಿ 4.41 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆ ಕೊರತೆಯಾಗಿದ್ದು, ತಕ್ಷಣ ಮಳೆ ಬಂದರೆ ಬೆಳೆ ಚೇತರಿಕೆಯಾಗುತ್ತದೆ. ಕೆಲ ಹೋಬಳಿಗಳಲ್ಲಿ ಮಳೆ ಕೊರತೆಯಿಂದ ಬೆಳೆ ಬಾಡುತ್ತಿರುವ ಕುರಿತು ವರದಿ ತರಿಸಿಕೊಳ್ಳುತ್ತಿದ್ದೇವೆ.
-ಲಿಂಗಮೂರ್ತಿ, ಜಂಟಿ ಕೃಷಿ ನಿರ್ದೇಶಕ

ಎರಡು ತಿಂಗಳಿಗೆ ಮೇವಿದೆ

ಜಿಲ್ಲೆಯಲ್ಲಿ ಒಟ್ಟು 4.09 ಲಕ್ಷ ಜಾನುವಾರುಗಳಿದ್ದು, ಪ್ರತಿ ವಾರಕ್ಕೆ 14,334 ಟನ್ ಮೇವು ಬೇಕು. ರೈತರಲ್ಲಿ ಸದ್ಯ 1.15 ಲಕ್ಷ ಟನ್ ಮೇವು ದಾಸ್ತಾನಿದ್ದು, ಎರಡು ತಿಂಗಳಿಗೆ ಸಾಲುತ್ತದೆ.
-ಡಾ.ಕೆ.ಆರ್. ಜೋಶಿ, ಪ್ರಭಾರ ಉಪ ನಿರ್ದೇಶಕ, ಪಶುಸಂಗೋಪನೆ ಇಲಾಖೆ

ಟ್ಯಾಂಕರ್ ನೀರು

ಜಿಲ್ಲೆಯ 127 ಗ್ರಾಮಗಳು ಹಾಗೂ 49 ಜನವಸತಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಬೆಳೆ ನಷ್ಟದ ಬಗ್ಗೆ ಇನ್ನೂ ವರದಿ ಬಂದಿಲ್ಲ.
-ಜೆ.ಸಿದ್ದಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT