ADVERTISEMENT

ಜಾನಪದ ವಿವಿ ಉದ್ಘಾಟನೆಗೆ ಅಡ್ಡಿ ಏನು?

ವಿಜಯ್ ಹೂಗಾರ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಹಾವೇರಿ: ದೇಶದ ಪ್ರಥಮ ಜಾನಪದ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯದ ಜಾನಪದ ವಿಶ್ವವಿದ್ಯಾಲಯ `ಅಧಿಕಾರ ರಾಜಕಾರಣ~ದ ಸುಳಿಗೆ ಸಿಲುಕಿದೆ. ವರ್ಷವಾದರೂ ಅದರ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ.

2010-11ನೇ ಸಾಲಿನ ಮುಂಗಡಪತ್ರದಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಗ್ರಾಮದ ಬಳಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸುವ ಘೋಷಣೆ ಮಾಡಿದರು. ಆದರೆ ರಾಜ್ಯ ಸರ್ಕಾರ ಘೋಷಣೆಗೆ ತೋರಿದ ಆಸಕ್ತಿಯನ್ನು ಅದರ ಉದ್ಘಾಟನೆಗೆ ತೋರುತ್ತಿಲ್ಲ. ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ನಡೆದಿರುವ ಕಿತ್ತಾಟ ವಿವಿ ಉದ್ಘಾಟನೆಗೆ ಅಡ್ಡಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿವಿ ಘೋಷಣೆ ಜತೆಗೆ ಅದರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ 7.5 ಕೋಟಿ ರೂ. ಸೇರಿ 17.5 ಕೋಟಿ ರೂಪಾಯಿ ಅನುದಾನ ದೊರೆತಿದೆ. ಭೂಮಿ ಹಸ್ತಾಂತರ ಹಾಗೂ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ.  ಕುಲಪತಿ, ಕುಲಸಚಿವರು, ಅಗತ್ಯ ಸಿಬ್ಬಂದಿ ನೇಮಕವೂ ಆಗಿದೆ. ಗೊಟಗೋಡಿ ಬಳಿ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಿರುವ ಪ್ರವಾಸೋದ್ಯಮ ಇಲಾಖೆಯ ಯಾತ್ರಿ ನಿವಾಸ ಕಟ್ಟಡವನ್ನು ನವೀಕರಿಸಿ ತಾತ್ಕಾಲಿಕ ಆಡಳಿತ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ.

ಅಷ್ಟೇ ಅಲ್ಲದೇ ಕುಲಪತಿಗಳು ಅಧಿಕಾರ ವಹಿಸಿಕೊಂಡ ನಂತರ ವಿವಿ ಲಾಂಛನವನ್ನು ಬಿಡುಗಡೆಗೊಳಿಸಿದ್ದಾರೆ. ಜಾನಪದ ಸಂಪುಟಗಳ ಮುದ್ರಣ ಕಾರ್ಯ ಆರಂಭಿಸಿದ್ದಾರೆ. ಗ್ರಾಮ ಚರಿತ್ರೆ, ಕೋಶ ಅಧ್ಯಯನ ಹಾಗೂ ಜಾನಪದ ವಸ್ತುಗಳ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ವಿಶ್ವವಿದ್ಯಾಲಯ ಇಷ್ಟೊಂದು ಚಟುವಟಿಕೆಗಳು ನಡೆಸುತ್ತಿದ್ದರೂ ಅದರ ಉದ್ಘಾಟನೆ ಯಾವಾಗ ಎನ್ನುವ ಪ್ರಶ್ನೆ ಹಾಗೇ ಉಳಿದಿದೆ.

ಎರಡು ಬಾರಿ ಮುಂದೂಡಿಕೆ: ಈ ಹಿಂದೆ ಎರಡು ಬಾರಿ ಉದ್ಘಾಟನೆಗೆ ದಿನ ನಿಗದಿ ಮಾಡಿ ಯಾವುದಾವುದೋ ಕಾರಣ ನೀಡಿ ಮುಂದೂಡಿದೆ. ವಿಶ್ವವಿದ್ಯಾಲಯ ಉದ್ಘಾಟನೆ ಮುಂದೂಡಲು ಕಾರಣಗಳಿಲ್ಲ. ರಾಜ್ಯಪಾಲರು ದಿನ ನೀಡಬೇಕಾಗಿದೆ. ಅದೇ ಕಾರಣಕ್ಕೆ ಉದ್ಘಾಟನೆ ವಿಳಂಬವಾಗಿದೆ ಎಂದು ವಿವಿ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಹಾಗೂ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.