ADVERTISEMENT

ಜಾಮೀನು ವಿಚಾರಣೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಎರಡನೇ ಖಾಸಗಿ ದೂರಿನ ಸಂಬಂಧ ಜಾಮೀನು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ. 

 ಸುಪ್ರೀಂಕೋರ್ಟ್ ವಕೀಲ ಉದಯ್ ಲಲಿತ್ ಶನಿವಾರ ಸುದೀರ್ಘ ಕಾಲ ಯಡಿಯೂರಪ್ಪ ಪರ ವಾದ ಮಂಡಿಸಿದರು.

`ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್. ಕೆ.ಸುಧೀಂದ್ರ ರಾವ್ ಬೆಳಿಗ್ಗೆ 11 ಗಂಟೆಗೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡರು. ಖಾಸಗಿ ದೂರು ಸಲ್ಲಿಸಲು ರಾಜ್ಯಪಾಲರು ಅನುಮತಿ ನೀಡಿರುವುದು, ನಂತರದ ಬೆಳವಣಿಗೆಗಳು, ದೂರಿನಲ್ಲಿ ಪ್ರಸ್ತಾಪಿಸಿರುವ ಡಿನೋಟಿಫಿಕೇಷನ್ ಪ್ರಕರಣಗಳ ಪೂರ್ಣ ವಿವರಗಳನ್ನು ಪರಿಶೀಲಿಸಿ ಯಡಿಯೂರಪ್ಪ ಅವರಿಗೆ ಜಾಮೀನು ನೀಡುವಂತೆ ಉದಯ್ ಲಲಿತ್ ಹಲವು ಗಂಟೆಗಳ ಕಾಲ ವಾದಿಸಿದರು.

ರಾಜ್ಯಪಾಲರು 15 ಪ್ರಕರಣಗಳನ್ನು ಒಟ್ಟಾಗಿ ಪರಿಗಣಿಸಿ ಖಾಸಗಿ ದೂರು ಸಲ್ಲಿಕೆಗೆ ಅನುಮತಿ ನೀಡಿದ್ದರು. ಆದರೆ, ಸಿರಾಜಿನ್ ಬಾಷಾ ಈ ಪ್ರಕರಣಗಳನ್ನು ಐದು ಪ್ರತ್ಯೇಕ ದೂರುಗಳನ್ನಾಗಿ ವಿಭಜಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಇದು ಕಾನೂನಿಗೆ ವಿರುದ್ಧವಾದ ನಡವಳಿಕೆ. ರಾಜ್ಯಪಾಲರು ಅವಧಿ ಆಧಾರಿತ ಅನುಮತಿ ನೀಡಿದ್ದರು. ಅದನ್ನು ದೂರು ಸಲ್ಲಿಸಿದ ವ್ಯಕ್ತಿ ಪ್ರಕರಣ ಆಧಾರಿತ ಅನುಮತಿಯನ್ನಾಗಿ ತಾವೇ ಪರಿವರ್ತಿಸಿದ್ದಾರೆ. ಎಲ್ಲ ಪ್ರಕರಣಗಳಲ್ಲೂ ಶಿಕ್ಷೆಯಾದರೆ ಶಿಕ್ಷೆಯ ಪ್ರಮಾಣ ಹೆಚ್ಚಬಹುದು ಎಂಬ ದುರುದ್ದೇಶದಿಂದ ಈ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಆರೋಪ ನಿರಾಧಾರ: ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಡಿನೋಟಿಫೈ ಮಾಡುವ ಮೂಲಕ ಯಡಿಯೂರಪ್ಪ ಅವರು ತಮ್ಮ ಸಹಚರರಾದ ಮಂಜುನಾಥ್ ಮತ್ತು ಅಕ್ಕಮಹಾದೇವಿ ಎಂಬುವರಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದ ಸಂಗತಿ.

ಮಂಜುನಾಥ್ ಮತ್ತು ಅಕ್ಕಮಹಾದೇವಿ  ಯಡಿಯೂರಪ್ಪ ಅವರ ಸಂಬಂಧಿಗಳಲ್ಲ. ಅವರಿಗೆ ಸಂಬಂಧಿಸಿದ ವಿಷಯವನ್ನು ಖಾಸಗಿ ದೂರಿನ ವ್ಯಾಪ್ತಿಗೆ ತಂದಿರುವುದೇ ತಪ್ಪು. ಆರೋಪಿಯು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ `ಮಾಹಿತಿ ಹಕ್ಕು ಕಾಯ್ದೆ~ ಅಡಿಯಲ್ಲಿ ಈ ದಾಖಲೆಗಳನ್ನು ಪಡೆದಿದ್ದಾರೆ.

ಆಗ ಆರೋಪಿಯಿಂದ ಯಾವುದೇ ತೊಂದರೆ ಆಗಿಲ್ಲ. ಈಗ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇಲ್ಲ. ಇಂತಹ ಸಂದರ್ಭದಲ್ಲಿ ಅವರು ಸಾಕ್ಷ್ಯನಾಶಕ್ಕೆ ಪ್ರಯತ್ನಿಸುವ ಪ್ರಶ್ನೆಯೇ ಇಲ್ಲ. ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಎ.ಆರ್. ಅಂತುಳೆ ಸೇರಿದಂತೆ ಹಲವರ ವಿರುದ್ಧದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳು ನೀಡಿರುವ ತೀರ್ಪುಗಳನ್ನು ಪ್ರಸ್ತಾಪಿಸಿದ ಉದಯ್, ತಮ್ಮ ಕಕ್ಷಿದಾರರು ಜಾಮೀನು ಪಡೆಯಲು ಅರ್ಹವಾಗಿದ್ದಾರೆ ಎಂದು ವಾದಿಸಿದರು.
 
ಒಂದು ವೇಳೆ ಅವರಿಗೆ ಜಾಮೀನು ನಿರಾಕರಿಸಿ, ಬಂಧನಕ್ಕೆ ದಾರಿ ಮಾಡಿಕೊಟ್ಟರೆ ಅದು ರಾಜಕೀಯ ದಾಳವಾಗಿ ಬಳಕೆಯಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು. ದಿನವಿಡೀ ವಾದ ಆಲಿಸಿದ ನ್ಯಾಯಾಧೀಶರು, ಸೋಮವಾರ ವಿಚಾರಣೆ ಮುಂದುವರೆಸುವುದಾಗಿ ಪ್ರಕಟಿಸಿದರು.
 

ದಿನವಿಡೀ ಕಟಕಟೆಯಲ್ಲಿ...

ತಮ್ಮ ಸಂಬಂಧಿಕರೊಬ್ಬರಿಗೆ ತೀವ್ರ ವಾದ ಆರೋಗ್ಯ ಸಮಸ್ಯೆ ಇದೆ ಎಂಬ ಕಾರಣ ನೀಡಿ ಯಡಿಯೂರಪ್ಪ ಅವರು ದಿನದ ಮಟ್ಟಿಗೆ ವಿಚಾರಣೆಗೆ ಖುದ್ದು ಹಾಜರಿಯಿಂದ ವಿನಾಯಿತಿ ಪಡೆದಿ ದ್ದರು. ಆದರೆ, ಅವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಅಳಿಯ ಆರ್.ಎನ್. ಸೋಹನ್‌ಕುಮಾರ್, ಶಾಸಕ ಡಾ.ಡಿ. ಹೇಮಚಂದ್ರ ಸಾಗರ್ ಸೇರಿದಂತೆ ಇತರೆ ಎಲ್ಲ ಆರೋಪಿಗಳು ದಿನವಿಡೀ ಕಟಕಟೆಯಲ್ಲಿ ನಿಲ್ಲಬೇಕಾಯಿತು.

ADVERTISEMENT

ವಾದ-ವಿವಾದ!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಖಾಸಗಿ ದೂರಿನ ವಿಚಾರಣೆ ವೇಳೆ ಶನಿವಾರ ನ್ಯಾಯಾಲಯದಲ್ಲೇ ಉಭಯ ಬಣದ ವಕೀಲರು ಮಾತಿನ ಸಮರ ನಡೆಸಿದರು. 

ಯಡಿಯೂರಪ್ಪ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್ ವಕೀಲ ಉದಯ್ ಲಲಿತ್ ಪ್ರಕರಣದ ಬಗ್ಗೆ ದೂರು ಸಲ್ಲಿಸಿರುವ ಸಿರಾಜಿನ್ ಬಾಷಾ ಅವರ ವ್ಯಕ್ತಿತ್ವದ ಬಗ್ಗೆಯೇ ಪರೋಕ್ಷವಾಗಿ ಪ್ರಶ್ನೆ ಎತ್ತಿದರು.  ದೂರು ಸಲ್ಲಿಸಿರುವ ವ್ಯಕ್ತಿ ಯಾರು ಎಂಬುದೇ ಗೊತ್ತಿಲ್ಲ~ ಎಂದು ವ್ಯಂಗ್ಯ ಮಾಡಿದರು.

ನಂತರ ವಾದ ಮಂಡನೆ ಆರಂಭಿಸಿದ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರವಿ ಬಿ.ನಾಯ್ಕ, `ಸಿರಾಜಿನ್ ಬಾಷಾ ವ್ಯಕ್ತಿತ್ವ ಸರಿ ಇಲ್ಲ. ಅವರ ವಿರುದ್ಧ ವಕೀಲರ ಪರಿಷತ್ತಿನಲ್ಲಿ ವಿಚಾರಣೆ ಬಾಕಿ ಇದೆ~ ಎಂದು ಪ್ರಸ್ತಾಪಿಸಿದರು.

ಆಗ ಪ್ರತ್ಯುತ್ತರ ನೀಡಿದ ಸಿರಾಜಿನ್ ಪರ ವಕೀಲ ಸಿ.ಎಚ್.ಹನುಮಂತರಾಯ ಅವರು, `ಯಡಿಯೂರಪ್ಪ ತಮ್ಮ ಪತ್ನಿಯನ್ನೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಇದೆ. ಆ ಬಗ್ಗೆ ಸಲ್ಲಿಸಿರುವ ಮೇಲ್ಮನವಿ ಈಗಲೂ ಹೈಕೋರ್ಟ್‌ನಲ್ಲಿ ಬಾಕಿ ಇದೆ~ ಎಂದರು.

ಹನುಮಂತರಾಯ ಅವರ ಪ್ರತಿಕ್ರಿಯೆಯಿಂದ ಕೋಪಗೊಂಡ ನಾಯ್ಕ, `ಬಹುಪತ್ನಿತ್ವ ಹೊಂದಿರುವ ವ್ಯಕ್ತಿಯೊಬ್ಬರು ಬಾಷಾ ಹಿಂದೆ ಇದ್ದಾರೆ ಎಂಬುದು ನಮಗೆ ಗೊತ್ತು. ಯಡಿಯೂರಪ್ಪ ಅವರನ್ನು ಜೈಲಿನಲ್ಲಿ ನೋಡುವ ಉದ್ದೇಶದಿಂದ ಆ ವ್ಯಕ್ತಿ ಖಾಸಗಿ ದೂರು ಸಲ್ಲಿಸಲು ಪ್ರೇರಣೆ ನೀಡಿದ್ದಾರೆ~ ಎಂದು ಆರೋಪಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.