ADVERTISEMENT

‘ಜಿಎಸ್‌ಟಿಯಲ್ಲಿನ ಲೋಪ ಶೀಘ್ರ ನಿವಾರಣೆ’

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST

ಬೀದರ್: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿನ ಸಣ್ಣಪುಟ್ಟ ಲೋಪಗಳನ್ನು ಶೀಘ್ರದಲ್ಲೇ ನಿವಾರಿಸಲಾಗುವುದು’ ಎಂದು ಮೋದಿ ಹೇಳಿದರು.

‘ದೇಶದ ಜನ ಜಿಎಸ್‌ಟಿ ವಿರೋಧಿಸಿಲ್ಲ. ಸಣ್ಣಪುಟ್ಟ ಸಮಸ್ಯೆಗಳ ಬಗೆಗೆ ಪ್ರಸ್ತಾಪ ಮಾಡುತ್ತಿದ್ದಾರೆ. ಜಿಎಸ್‌ಟಿ ವಿಷಯದಲ್ಲಿ ವಿರೋಧ ಪಕ್ಷಗಳು ಒಂದಾಗಿ ರಾಜಕೀಯ ಮಾಡಲು ಹೊರಟಿವೆ’ ಎಂದು ಟೀಕಿಸಿದರು.

‘ವ್ಯಾಪಾರಿಗಳ ಹಳೆಯ ಕಡತ  ತೆಗೆಯಲು ಅಧಿಕಾರಿಗಳಿಗೆ ಇನ್ನು ಅವಕಾಶ ನೀಡುವುದಿಲ್ಲ. ಪ್ರಾಮಾಣಿಕವಾಗಿ ವ್ಯವಹಾರ ಮಾಡುವವರಿಗೆ ಸಹಕಾರ ನೀಡುತ್ತೇವೆ. ಅಧಿಕಾರಿಗಳು ಕಿರಿಕಿರಿ ಮಾಡಿದರೆ ಒಂದು ಪತ್ರ ಬರೆದರೂ ಸಾಕು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ’ ಎಂದು ಹೇಳಿದರು.

ADVERTISEMENT

ನಿರ್ಲಕ್ಷ್ಯದ ಅಪರಾಧ: ‘ಹಿಂದಿನ ಸರ್ಕಾರ ನಿರ್ಲಕ್ಷ್ಯದ ಅಪರಾಧ ಮಾಡಿದ ಕಾರಣ ಸಾವಿರ ರೂಪಾಯಿಯ ಯೋಜನೆಗೆ ಒಂದು ಕೋಟಿ ರೂಪಾಯಿ ಖರ್ಚು ಮಾಡಬೇಕಾದ ಪ್ರಸಂಗ ಬಂದಿದೆ’ ಎಂದು ಹೇಳಿದರು.

‘30ರಿಂದ 40 ವರ್ಷಗಳ ಹಿಂದೆ ಅನೇಕ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದ್ದು, ಅವು ಕಡತಗಳಲ್ಲಿ ಉಳಿದುಕೊಂಡಿದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ₹ 9 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ’ ಎಂದರು.

‘ಹಿಂದಿನ ಸರ್ಕಾರ ಕೊನೆಯ ಮೂರು ವರ್ಷಗಳಲ್ಲಿ 1,100 ಕಿ.ಮೀ ಹೊಸ ರೈಲು ಮಾರ್ಗ ನಿರ್ಮಿಸಿದರೆ, ನಮ್ಮ ಸರ್ಕಾರ 2,100 ಕಿ.ಮೀ ರೈಲು ಮಾರ್ಗ ನಿರ್ಮಾಣ ಮಾಡಿದೆ. ಹಿಂದಿನ ಸರ್ಕಾರ 1,300 ಕಿ.ಮೀ ಉದ್ದದ ಜೋಡಿ ರೈಲು ಮಾರ್ಗ ಮಾಡಿದರೆ, ನಮ್ಮ ಸರ್ಕಾರ 2,600 ಕಿ.ಮೀ ಜೋಡಿ ರೈಲು ಮಾರ್ಗ ನಿರ್ಮಿಸಿದೆ’ ಎಂದರು.

ರೈಲ್ವೆ ಸಚಿವ ಪೀಯೂಷ್‌ ಗೋಯಲ್‌, ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತಕುಮಾರ, ರಮೇಶ ಜಿಗಜಿಣಗಿ, ಅನಂತಕುಮಾರ ಹೆಗಡೆ, ಸಂಸದರಾದ ಬಿ.ಎಸ್. ಯಡಿಯೂರಪ್ಪ, ಭಗವಂತ ಖೂಬಾ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ಶಾಸಕ ಪ್ರಭು ಚವಾಣ್‌, ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.