ADVERTISEMENT

ಜೆಡಿಎಸ್‌ನಿಂದ ಸಿ.ಎಸ್. ಪುಟ್ಟರಾಜು ಕಣಕ್ಕೆ

ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಕಣಕ್ಕೆ ಇಳಿಯುತ್ತಿದ್ದು, ಶುಕ್ರವಾರ (ಆ. 2) ಮಧ್ಯಾಹ್ನ 12.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಶಾಸಕ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಪುಟ್ಟರಾಜು ಪಕ್ಷದ ಒಮ್ಮತದ ಆಯ್ಕೆ. ನಾವೆಲ್ಲರೂ, ಒಗ್ಗಟ್ಟಿನಿಂದ ದುಡಿಯುವ ಮೂಲಕ ಅವರನ್ನು ಗೆಲ್ಲಿಸ ಲಿದ್ದೇವೆ. ಆ  ಮೂಲಕ ಕ್ಷೇತ್ರ ವನ್ನು ಮತ್ತೆ ಜೆಡಿ ಎಸ್ ತೆಕ್ಕೆಯಲ್ಲೇ  ಉಳಿಸಿಕೊಳ್ಳಲಿ ದ್ದೇವೆ' ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಪುಟ್ಟರಾಜು ಉಮೇದುವಾರಿಕೆಸಲ್ಲಿಸುವ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಶಾಸಕರು ಹಾಜರಿರಲಿದ್ದಾರೆ. ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.

ಮುಜುಗರ ಇದೆ: ಅವಧಿ ಪೂರ್ಣಗೊಳ್ಳುವ ಮುನ್ನವೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಮುಜುಗರ ಇದ್ದರೂ ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ ತೃಪ್ತಿಯೂ ಇದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

`ನಾನು ರಾಜೀನಾಮೆ ನೀಡಿದ್ದು ಮುಜುಗರ ತಂದರೂ `ಆಪರೇಷನ್ ಕಮಲ'ದಷ್ಟು ಕೆಟ್ಟದಲ್ಲ ಎಂದು ಸಮರ್ಥಿಸಿಕೊಂಡರು. ಎಲ್ಲ ಪಕ್ಷಗಳು ಒಪ್ಪುವಂತಹ  ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂಬ ಇರಾದೆ ಇದ್ದರೂ, ಇತರ ಪಕ್ಷಗಳಿಂದ ಸಹಮತ ದೊರೆಯದಿದ್ದರಿಂದ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಬೇಕಾಯಿತು ಎಂದರು.

ಘೋಷಿತ ಅಭ್ಯರ್ಥಿ, ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು, ಶಾಸಕರಾದ ಬಿ. ರಾಮಕೃಷ್ಣ, ಎ.ಬಿ. ರಮೇಶ್‌ಬಾಬು ಬಂಡಿಸಿದ್ದೇಗೌಡ, ಕೆ.ಸಿ. ನಾರಾಯಣಗೌಡ, ಮಾಜಿ ಶಾಸಕರಾದ ಡಾ.ಅನ್ನದಾನಿ, ಪ್ರಭಾವತಿ ಜಯರಾಮ್,ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಡಿ. ರಮೇಶ್, ಜಿ.ಪಂ. ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.