ADVERTISEMENT

ಜೆನರಿಕ್ ಔಷಧಿ ಹೆಚ್ಚಿನ ಬೆಲೆಗೆ ಮಾರಾಟ- ಸಚಿವರು ಭಾಗಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 19:35 IST
Last Updated 23 ಜುಲೈ 2012, 19:35 IST

ಬೆಂಗಳೂರು: `ಕಡಿಮೆ ಬೆಲೆಗೆ ಜೆನರಿಕ್ ಔಷಧಿ ಸರಬರಾಜು ಮಾಡುವುದಾಗಿ ಸುಳ್ಳು ಹೇಳಿ, 10 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಅಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ~ ಎಂದು ಆಡಳಿತಾರೂಢ ಬಿಜೆಪಿ ಶಾಸಕ ಡಾ.ಸಾರ್ವಭೌಮ ಬಗಲಿ ಅವರು ಸಚಿವರ ವಿರುದ್ಧ ನೇರ ಆರೋಪ ಮಾಡಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಬರ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, `ಅಕ್ರಮದಲ್ಲಿ ಭಾಗಿಯಾಗಿರುವ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದಕ್ಕೆ ನೆರವಾದ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಮತ್ತು ಅಧೀನ ಕಾರ್ಯದರ್ಶಿಯನ್ನು ಜೈಲಿಗೆ ಕಳುಹಿಸಬೇಕು~ ಎಂದರು.

`ನಾನು ಕೂಡ ಒಬ್ಬ ವೈದ್ಯ. ಇಂಡಿಯಲ್ಲಿರುವ ನನ್ನ ಔಷಧಿ ಅಂಗಡಿಯಲ್ಲಿ ಸಿಟ್ರಿಜಿನ್ ಮಾತ್ರೆಗೆ 2.30 ರೂಪಾಯಿ ತೆಗೆದುಕೊಳ್ಳುತ್ತೇವೆ. ಆದರೆ, ಅದೇ ಮಾತ್ರೆಗೆ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿನ ಜೆನರಿಕ್ ಔಷಧಿ ಮಳಿಗೆಯಲ್ಲಿ 25 ರೂಪಾಯಿ ನೀಡಬೇಕಾಗಿದೆ.
 
7.7 ರೂಪಾಯಿಯ `ಪ್ಯಾಂಟೊಪ್ರಜೊಲ್~ ಮಾತ್ರೆಗೆ 57 ರೂಪಾಯಿ ವಸೂಲಿ ಮಾಡಲಾಗುತ್ತಿದೆ. 2.75 ರೂಪಾಯಿ ಬೆಲೆಯ ಫ್ಲುಕೊನಜೊಲ್ ಮಾತ್ರೆಗೆ 29 ರೂಪಾಯಿ ಹಾಗೂ 19 ರೂಪಾಯಿಯ ಸೆಫ್ಟ್ರಿಯಾಕ್ಸನ್ ಇಂಜೆಕ್ಷನ್‌ಗೆ 57 ರೂಪಾಯಿ ವಸೂಲಿ ಮಾಡುತ್ತಿದ್ದು, ಇದೊಂದು ಹಗಲು ದರೋಡೆ~ ಎಂದು ದೂರಿದರು.

`ಈ ಮಾತ್ರೆ ಮತ್ತು ಇಂಜೆಕ್ಷನ್‌ಗಳ ಬೆಲೆಯನ್ನು ಉದಾಹರಣೆಯಾಗಿ ನೀಡಿದ್ದೇನೆ. ಸ್ವತಃ ನಾನೇ ಹೋಗಿ ಖರೀದಿ ಮಾಡಿ ತಂದಿದ್ದು, ರಶೀದಿ ಕೂಡ ಇದೆ. ಗರಿಷ್ಠ ಮಾರಾಟ ಬೆಲೆಯನ್ನು ದುಪ್ಪಟ್ಟು ಏರಿಸುವುದು, ನಂತರ ಅದರಲ್ಲಿ ಶೇ 50ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಸುಳ್ಳು ಹೇಳುವುದು ಸರಿಯಲ್ಲ. ಇತರ ಎಲ್ಲ ಔಷಧಿಗಳ ಬೆಲೆಗಳು ಇದೇ ರೀತಿ ಹೆಚ್ಚು ಇದ್ದು, ಒಟ್ಟಾರೆ 10 ಪಟ್ಟು ದುಬಾರಿ ಆಗಿವೆ. ಇದು ಸಾರ್ವಜನಿಕರಿಗೆ ಹೊರೆಯಾಗ ಲಿದೆ~ ಎಂದು ಹೇಳಿದರು.

`ಜೆನರಿಕ್ ಔಷಧಿ ಮಾರಾಟಕ್ಕೆ ಅವಕಾಶ ಕೋರಿ ಖಾಸಗಿ ಸಂಸ್ಥೆಗಳು ಸಲ್ಲಿಸಿದ ಮನವಿಗೆ ಒಂದೆರಡು ದಿನದಲ್ಲೇ ಒಪ್ಪಿಗೆ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಮಳಿಗೆಗಳು ಕೂಡ ಆರಂಭಿಸಲಾಯಿತು. ತರಾತುರಿಯ ತೀರ್ಮಾನಗಳನ್ನು ಗಮನಿಸಿದರೆ ಅಕ್ರಮಗಳು ನಡೆದಿರುವ ಬಗ್ಗೆ ಶಂಕೆ ಇದ್ದು, ತನಿಖೆ ನಡೆಸಬೇಕು~ ಎಂದರು.

ಬಗಲಿ ಅವರ ಮಾತಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರೂ ಬೆಂಬಲಿಸಿದರು. ತನಿಖೆಗೆ ನಡೆಸಲು ಸದನ ಸಮಿತಿ ರಚಿಸಬೇಕು ಎಂದು ಜೆಡಿಎಸ್‌ನ ಬಂಡೆಪ್ಪ ಕಾಶಂಪುರ ಒತ್ತಾಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.