ADVERTISEMENT

ಟಿಕೆಟ್‌ಗಾಗಿ ಜಿಗಿತ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಟಿಕೆಟ್‌ ಸಿಗದೇ ನಿರಾಸೆಗೊಂಡವರಲ್ಲಿ ಸಾಕಷ್ಟು ನಾಯಕರು ಈಗ ಜೆಡಿಎಸ್ ಕಡೆಗೆ ಮುಖ ಮಾಡಿದ್ದು, ಮಂಗಳವಾರ ನಾಲ್ವರು ಟಿಕೆಟ್‌ ಆಕಾಂಕ್ಷಿಗಳು ಜೆಡಿಎಸ್‌ ಸೇರಿದರು.

ಬಿಜೆಪಿ ತೊರೆದಿರುವ ಹೇಮಚಂದ್ರ ಸಾಗರ್‌, ಜಿ.ಎಚ್‌.ರಾಮಚಂದ್ರ, ಕಾಂಗ್ರೆಸ್‌ನ ಪಿ.ರಮೇಶ್‌, ಪುಟ್ಟರಾಜು ಮತ್ತು ಹನುಮಂತರಾಯಪ್ಪ ಮತ್ತು ಬೆಂಬಲಿಗರು ಜೆಡಿಎಸ್‌ ಸೇರಿದರು. ಪುಲಿಕೇಶಿನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವ ದಿವಂಗತ ಬಿ.ಬಸವಲಿಂಗಪ್ಪ ಪುತ್ರ ಕಾಂಗ್ರೆಸ್‌ನ ಬಿ. ಪ್ರಸನ್ನ ಕುಮಾರ್‌ ಬುಧವಾರ ಜೆಡಿಎಸ್‌ ಸೇರಲಿದ್ದಾರೆ. ಮಂಗಳವಾರ ರಾತ್ರಿ ಈ ಸಂಬಂಧ ದೇವೇಗೌಡ ಮತ್ತು ಕುಮಾರಸ್ವಾಮಿ ಜತೆ ಮಾತುಕತೆ ನಡೆಸಿದರು. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಟಿಕೆಟ್‌ ಸಿಗದೇ ಇರುವುದರಿಂದ ಅಸಮಾಧಾನಗೊಂಡಿರುವ ಎನ್‌.ವೈ.ಗೋಪಾಲಕೃಷ್ಣ ಬುಧವಾರ ಬಿಜೆಪಿ ಸೇರಲಿದ್ದಾರೆ.

ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಎನ್.ವೈ.ಗೋಪಾಲಕೃಷ್ಣ ಅವರನ್ನು ಪಕ್ಷಕ್ಕೆ ಕರೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕಲಬುರ್ಗಿಯಲ್ಲಿ ಟಿಕೆಟ್ ಕೈತಪ್ಪಿರುವ ಬಿಜೆಪಿ ನಾಯಕ ಶಶಿಲ್‌ ನಮೋಶಿಯವರನ್ನು ಪಕ್ಷಕ್ಕೆ ಸೆಳೆಯಲು ಜೆಡಿಎಸ್‌ ನಾಯಕರು ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ಕಾಂಗ್ರೆಸ್‌ನ ಜೇಡರಹಳ್ಳಿ ಕೃಷ್ಣಪ್ಪ ಜೆಡಿಎಸ್‌ ಸೇರುವ ಸಿದ್ಧತೆ ನಡೆಸಿದ್ದಾರೆ. ‘ಜೇಡರಹಳ್ಳಿ ಕೃಷ್ಣಪ್ಪ ಸೇರ್ಪಡೆ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಜೆಡಿಎಸ್‌ ವಕ್ತಾರ ಟಿ.ಎ.ಶರವಣ ತಿಳಿಸಿದ್ದಾರೆ.

ಸಾಗರ ಕ್ಷೇತ್ರಕ್ಕೆ ಟಿಕೆಟ್‌ ಸಿಗದೇ ನಿರಾಶೆಗೊಂಡಿರುವ ಬೇಳೂರು ಗೋಪಾಲಕೃಷ್ಣ ಜೆಡಿಎಸ್‌ನತ್ತ ಹೆಜ್ಜೆ ಹಾಕುವ ಸಾಧ್ಯತೆ ಇದೆ. ಕೆಲವು ಜೆಡಿಎಸ್‌ ಮುಖಂಡರು ಅವರನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ, ತಮ್ಮ ಮುಂದಿನ ನಡೆಯ ಬಗ್ಗೆ ಬುಧವಾರ ತೀರ್ಮಾನ ಪ್ರಕಟಿಸುವುದಾಗಿ ಗೋಪಾಲಕೃಷ್ಣ ಹೇಳಿದ್ದಾರೆ.

ಮೊಳಕಾಲ್ಮೂರು ಶಾಸಕ ಎಸ್‌. ತಿಪ್ಪೇಸ್ವಾಮಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಸ್ಪರ್ಧಿಸಲು ಟಿಕೆಟ್‌ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಮೈಸೂರಿಗೆ ತೆರಳಿದ್ದರು. ಆದರೆ, ಸಿದ್ದರಾಮಯ್ಯ ಭೇಟಿಗೆ ಅವಕಾಶ ನೀಡಲಿಲ್ಲ. ಈಗ ಬಾಗಿಲು ಬಂದ್‌ ಆಗಿದೆ. ಯಾರಿಗೂ ಟಿಕೆಟ್‌ ಕೊಡಲು ಸಾಧ್ಯವಿಲ್ಲ ಎಂದು ತಮ್ಮ ಸಹಾಯಕರ ಬಳಿ ಹೇಳಿ ಹಿಂದಕ್ಕೆ ಕಳುಹಿಸಿದರು ಎಂದು ಮೂಲಗಳು ಹೇಳಿವೆ.

ಬಾಗೇಪಲ್ಲಿ ಕಾಂಗ್ರೆಸ್ ಟಿಕೆಟ್‌ ಸಿಗದಿರುವ ಎನ್‌. ಸಂಪಂಗಿ, ಪುಲಿಕೇಶಿ ನಗರ ಕ್ಷೇತ್ರದ ಆಕಾಂಕ್ಷಿಯಾಗಿದ್ದ  ಛಲವಾದಿ ನಾರಾಯಣ ಸ್ವಾಮಿ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.

ಇಂದಿನಿಂದ ‘ಬಿ’ ಫಾರಂ ವಿತರಣೆ

ಬುಧವಾರ ಅಕ್ಷಯ ತೃತೀಯ ಮತ್ತು ಬಸವ ಜಯಂತಿ ಕಾರಣ  ಅಭ್ಯರ್ಥಿಗಳಿಗೆ ‘ಬಿ’ ಫಾರಂ ವಿತರಿಸಲಾಗುವುದು ಎಂದು ಜೆಡಿಎಸ್‌ ವಕ್ತಾರ ಟಿ.ಎ.ಶರವಣ ತಿಳಿಸಿದರು.

ಈಗಾಗಲೇ 120 ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿದ್ದು, ಉಳಿದ ಕ್ಷೇತ್ರಗಳಿಗೆ ಇದೇ 20 ಅಥವಾ 21 ರಂದು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಇನ್ನೆರಡು ದಿನಗಳಲ್ಲಿ ಬೇರೆ– ಬೇರೆ ಜಿಲ್ಲೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಪ್ರಮುಖ ನಾಯಕರು ಪಕ್ಷವನ್ನು ಸೇರಲಿದ್ದಾರೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.