ADVERTISEMENT

ಡಿಕೆಎಸ್‌, ಜಾರಕಿಹೊಳಿ ವಿರುದ್ಧ ದೂರು

ಮುಖ್ಯಮಂತ್ರಿ ಜನತಾದರ್ಶನಕ್ಕೆ ಸಾಲುಗಟ್ಟಿ ಬಂದ ಜನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಜನತಾದರ್ಶನದಲ್ಲಿ ಪಾರ್ಶ್ವವಾಯುದಿಂದ ಸ್ವಯಂ ನಿವೃತ್ತಿ ಪಡೆದ ತನ್ನ ತಂದೆಯ ಅನುಕಂಪದ ನೌಕರಿಯನ್ನು ತನಗೆ ನೀಡ­ಬೇಕು ಎಂದು ಕೋರಿ ಚನ್ನಪಟ್ಟಣದ ನವಿಲೆ ಗ್ರಾಮದ ಮೀನಾಕ್ಷಿ ಎಂಬು­ವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು	–ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಜನತಾದರ್ಶನದಲ್ಲಿ ಪಾರ್ಶ್ವವಾಯುದಿಂದ ಸ್ವಯಂ ನಿವೃತ್ತಿ ಪಡೆದ ತನ್ನ ತಂದೆಯ ಅನುಕಂಪದ ನೌಕರಿಯನ್ನು ತನಗೆ ನೀಡ­ಬೇಕು ಎಂದು ಕೋರಿ ಚನ್ನಪಟ್ಟಣದ ನವಿಲೆ ಗ್ರಾಮದ ಮೀನಾಕ್ಷಿ ಎಂಬು­ವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಂಸತ್‌ ಸದಸ್ಯ ಡಿ.ಕೆ. ಸುರೇಶ್‌, ಶಾಸಕ ರಮೇಶ್‌ ಜಾರಕಿ­ಹೊಳಿ ವಿರುದ್ಧ ದೂರು, ಕುಟುಂಬಕ್ಕೆ ಆಸರೆಯಾಗಿರುವ ಅಂಗವಿಕಲ ಮಗನಿಗೆ ಉದ್ಯೋಗ ಕೊಡಿಸುವಂತೆ ತಾಯಿ­ಯಿಂದ ಮನವಿ, ವೈದ್ಯಕೀಯ ಪರಿ­ಹಾರಕ್ಕೆ ಮನವಿಗಳ ಮಹಾಪೂರ.

ಇವು ಮಂಗಳವಾರ ಮುಖ್ಯಮಂತ್ರಿ ಗೃಹಕಚೇರಿ ‘ಕೃಷ್ಣಾ’ದಲ್ಲಿ ಸಿದ್ದರಾಮಯ್ಯ ಅವರು ನಡೆಸಿದ ಜನತಾದರ್ಶನದಲ್ಲಿ ಕಂಡು ಬಂದ ದೃಶ್ಯಗಳು.
‘ಕನಕಪುರದಲ್ಲಿ ನಮ್ಮ  ಜಮೀನಿನ ಪಕ್ಕದಲ್ಲಿ ಲಿಂಗಪ್ಪ ಎನ್ನುವವರ ಹೆಸರಿ­ನಲ್ಲಿ ಸಂಸತ್‌ ಸದಸ್ಯ ಡಿ.ಕೆ. ಸುರೇಶ್‌ ಅವರು ಕಲ್ಲು ಗಣಿಗಾರಿಕೆ ನಡೆಸುತ್ತಿ­ದ್ದಾರೆ. ಅಲ್ಲಿ ನಡೆಸುವ ಸ್ಫೋಟದಿಂದ ನಮ್ಮ ಜಮೀನಿನಲ್ಲಿ ಕಲ್ಲುಗಳು ಬೀಳುತ್ತಿವೆ. ಗಣಿಗಾರಿಕೆಯಿಂದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದೇ ದುಸ್ತರವಾಗಿದೆ.

ದೂಳಿನಿಂದ ನಮಗೆ ಬಹಳ ತೊಂದರೆಯಾಗುತ್ತಿದೆ. ಆದರೆ, ನಮಗೆ ಇದುವರೆಗೆ ಯಾವುದೇ ರೀತಿ ಪರಿಹಾರ ನೀಡಿಲ್ಲ. ಏನಾದರೂ ಪ್ರಶ್ನಿಸಿ­ದರೆ ದೌರ್ಜನ್ಯ ನಡೆಸಲು ಮುಂದಾಗು­ತ್ತಾರೆ’ ಎಂದು ಸೇನೆಯಲ್ಲಿರುವ ಸುಬೇ­ದಾರ್‌ ನಾಗರಾಜಯ್ಯ ಮುಖ್ಯಮಂತ್ರಿ ಅವರಿಗೆ ದೂರು ಸಲ್ಲಿಸಿದರು.

ಬೆಳಗಾವಿ ಜಿಲ್ಲೆಯ ಗೋಕಾಕ್‌­ಫಾಲ್ಸ್‌­ನಿಂದ ಬಂದಿದ್ದ ಕಾರ್ಮಿಕರು, ರಾಜ್ಯ ಸರ್ಕಾರ ಗೋಕಾಕ್‌ ಮಿಲ್‌ ಜತೆ 1093 ಎಕರೆ ಜಮೀನಿಗಾಗಿ ಮಾಡಿ­ಕೊಂಡ ಒಪ್ಪಂದವನ್ನು ತಕ್ಷಣವೇ ರದ್ದು­ಪಡಿಸಿ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

1884ರಲ್ಲಿ ಬ್ರಿಟಿಷ್‌ ಸರ್ಕಾರ ಹಾಗೂ ಗೋಕಾಕ ವಾಟರ್‌ ಪವರ್‌ ಅಂಡ್‌ ಮ್ಯಾನುಫ್ಯಾಕ್ಚರಿಂಗ್‌ ಕಂಪೆನಿ ಮಧ್ಯೆ 1093 ಎಕರೆ ಜಮೀನಿಗೆ 99 ವರ್ಷಗಳ ಅವಧಿಗೆ ಲೀಸ್‌ ಆಧಾರದ ಮೇಲೆ ಒಪ್ಪಂದವಾಗಿತ್ತು. ಆದರೆ, ಒಪ್ಪಂದದ ಅವಧಿ ಮುಗಿದರೂ ಅನಧಿಕೃತವಾಗಿ ಒಬ್ಬರಿಂದ ಮತ್ತೊಬ್ಬ­ರಿಗೆ ಪರಭಾರೆಯಾಗುತ್ತಿದೆ. ಈ ಹಸ್ತಾಂತರ ಕಾರ್ಯದಲ್ಲಿ ಸ್ಥಳೀಯ ಶಾಸಕ ರಮೇಶ್‌ ಜಾರಕಿಹೊಳಿ ಅವರ ಕೈವಾಡವಿದೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕಾನೂನು­ಬಾಹಿರವಾಗಿ ಬಂಡವಾಳ­ಶಾಹಿಗಳಿಗೆ ಒತ್ತೆ ಇಡಲಾಗಿದೆ. ಕಾನೂನು ಉಲ್ಲಂಘಿಸಿ ಈ ಜಮೀನು ಪಡೆದಿರುವುದರಿಂದ ತಕ್ಷಣವೇ ತನಿಖೆ ನಡೆಸಿ ಜಮೀನನ್ನು ವಾಪಸ್‌ ಪಡೆಯ­ಬೇಕು ಎಂದು ಒತ್ತಾಯಿಸಿದರು.

ರಾಜಾಜಿನಗರ ನಿವಾಸಿ ಮುನಿ­ವೆಂಕಟಮ್ಮ ಅವರದು ದಯನೀಯ ಸ್ಥಿತಿಯ ಬದುಕು. ಪತಿ ಗಂಗಪ್ಪ ಅವರಿಗೆ ಕ್ಯಾನ್ಸರ್‌ ಕಾಯಿಲೆ. ಮಗಳು ಮಾನಸಿಕ ಅಸ್ವಸ್ಥೆ. ಮಗ ಅಂಗವಿಕಲ. ಬದುಕಿನ ಎಲ್ಲ ಸಂಕಟಗಳನ್ನು ಒಡಲಲ್ಲಿಟ್ಟು­ಕೊಂಡು ಮುನಿವೆಂಕಟಮ್ಮ ಮುಖ್ಯ­ಮಂತ್ರಿ ಬಳಿ ನೆರವಿಗಾಗಿ ಬಂದಿದ್ದರು.

ಕುಟುಂಬಕ್ಕೆ ಆಸರೆಯಾಗಿರುವ ಮಗನಿ­ಗೊಂದು ಶಾಶ್ವತ ಉದ್ಯೋಗ ಕೊಡಿಸಿ ಎಂದು ಮುಖ್ಯಮಂತ್ರಿ ಅವರಲ್ಲಿ ಅಂಗಲಾಚಿದರು. ಈ ಕುಟುಂಬದ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ, ಬಿಬಿಎಂಪಿ­ಯಲ್ಲಿ ಗುತ್ತಿಗೆ ಆಧಾರದ ಮೇಲೆ ಜೀವನಕ್ಕೆ ಅನುಕೂಲವಾಗುವ ಉದ್ಯೋಗ ನೀಡಿ ಎಂದು ಆಯುಕ್ತರಿಗೆ ಸೂಚಿಸಿದರು.

ತಮಗಾಗಿರುವ ವಂಚನೆ ಕುರಿತು ದೂರು ಸಲ್ಲಿಸಿದ ಬೆಳಗಾವಿಯ ವಿಮಲಾ ಎಚ್‌. ಉರಣಕರ್‌ ಅವರು, ‘ಸರ್ಕಾರಿ ವೈದ್ಯರಾಗಿದ್ದ ತಮ್ಮ ಪತಿ 1983ರಲ್ಲಿ ಕೊಲೆಯಾದರು. ಆ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದ ತಮ್ಮ ಸಹೋದರ ಅನುಕಂಪದ ಆಧಾರದ ಸರ್ಕಾರಿ ನೌಕರಿಯನ್ನು ಗಿಟ್ಟಿಸಿಕೊಂಡ. ಆದರೆ, ಯಾವುದೇ ರೀತಿಯಲ್ಲಿ ತಮಗೆ ನೆರವಾಗದೆ ವಂಚಿಸಿ­ದ್ದಾನೆ. ಆತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಬೇಕು’  ಎಂದು ಕೋರಿದರು.

17 ವರ್ಷಗಳಿಂದ ಆಶ್ರಯ ಮನೆಗೆ ಅಲೆದಾಡುತ್ತಿರುವ ಶಿಗ್ಗಾಂವ ಪಟ್ಟಣದ ಹಣ್ಣಿನ ವ್ಯಾಪಾರಿ ಜಿಲಾನಿ ಹುಸೇನ್‌­ಸಾಬ್‌, ತಮಗೊಂದು ಆಸರೆಗಾಗಿ ಯಾವುದಾದರೂ ಯೋಜನೆಯಲ್ಲಿ ಮನೆ ನೀಡಿ ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಅಕಾಡೆಮಿ, ಮಂಡಳಿಗೆ ದುಂಬಾಲು
ಈ ಬಾರಿಯ ಜನತಾದರ್ಶನ­ದಲ್ಲೂ ಅಕಾಡೆಮಿ, ನಿಗಮ ಮತ್ತು ಮಂಡಳಿ­ಗಳ ಅಧ್ಯಕ್ಷ ಸ್ಥಾನಕ್ಕೆ ನೇಮಿಸು­ವಂತೆ ಮುಖ್ಯಮಂತ್ರಿಗೆ ಹಲವರು ಮನವಿ ಸಲ್ಲಿಸಿದರು.

ದಾವಣಗೆರೆಯ ಬುಡೇನ್‌­ಸಾಬ್‌ ಎನ್ನುವವರು ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ನೇಮಿಸಬೇಕು ಎಂದು ಮನವಿ ಸಲ್ಲಿಸಿದರು. ಬೆಂಗಳೂರಿನ  ಸುಂದರರಾಜ್‌ ಎನ್ನುವವರು ಸಹ ನಿಗಮ ಅಥವಾ ಮಂಡಳಿಗೆ ತಮ್ಮನ್ನು ಪರಿಗಣಿಸಬೇಕು ಎಂದು ಕೋರಿದರು. ಇದೇ ರೀತಿ ಕಾಂಗ್ರೆಸ್‌ ಪಕ್ಷದ ಕಿರಿಯ, ಹಿರಿಯ ನಾಯಕರು ಮನವಿಗಳನ್ನು ಸಲ್ಲಿಸಿದರು.

ಎಸ್‌ಎಂಎಸ್‌ ಸಂದೇಶ
ಜನತಾದರ್ಶನದಲ್ಲಿ ಪರಿಹಾರ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸುವ ಮನವಿಗಳ ಸ್ಥಿತಿಗತಿಯ ಮಾಹಿತಿ ನೀಡುವ ಎಸ್‌ಎಂಎಸ್‌ ಸೇವೆಯನ್ನು ಮಂಗಳವಾರದಿಂದ ಆರಂಭಿಸಲಾಗಿದೆ.

ಮನವಿ ಸಲ್ಲಿಸುವವರ ವಿವರ ಮತ್ತು  ವಿಷಯವನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ನಂತರ ಮನವಿ ಸಲ್ಲಿಸುವವರಿಗೆ ಒಂದು ಸಂಖ್ಯೆಯನ್ನು ನೀಡಲಾಗುತ್ತದೆ. ಮನವಿ ಜತೆಗೆ ಸಾರ್ವಜನಿಕರು ತಮ್ಮ ಮೊಬೈಲ್‌ ದೂರವಾಣಿ ಸಂಖ್ಯೆ ನಮೂದಿಸಿದರೆ ಮನವಿ ಯಾವ ಹಂತದಲ್ಲಿದೆ, ಯಾವ ರೀತಿ ಪರಿಹಾರ ದೊರೆಯಲಿದೆ ಇತ್ಯಾದಿ ವಿವರಗಳು ಎಸ್‌ಎಂಎಸ್‌ ಮೂಲಕ ದೊರೆಯಲಿವೆ.

ಇದರ ಜತೆಗೆ ಸಾರ್ವಜನಿಕರು ಟೋಲ್‌ ಫ್ರೀ ಸಂಖ್ಯೆ: 44554455 ಕರೆ ಮಾಡಿಯೂ ಮಾಹಿತಿ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT