ಬೆಂಗಳೂರು: `ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ಕೇಂದ್ರ ಆಡಳಿತ ನ್ಯಾಯಮಂಡಳಿ ಆದೇಶವನ್ನು ಎತ್ತಿ ಹಿಡಿದು ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು~ ಎಂದು ಗೃಹ ಸಚಿವ ಆರ್.ಅಶೋಕ ಹೇಳಿದರು.
ನಗರದ ಕೋರಮಂಗಲದಲ್ಲಿರುವ ರಾಜ್ಯ ಮೀಸಲು ಪೊಲೀಸ್ ಪಡೆ ಮೈದಾನದಲ್ಲಿ ಸೋಮವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಂಬಂಧ ಅಡ್ವೊಕೇಟ್ ಜನರಲ್ ಜತೆ ಚರ್ಚಿಸಲಾಗಿದೆ. ಸದ್ಯದಲ್ಲೇ ಮೇಲ್ಮನವಿ ಸಲ್ಲಿಸಲಾಗುತ್ತದೆ~ ಎಂದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಶಿಫಾರಸು ಮಾಡಿದ್ದ ಮೂವರು ಅಧಿಕಾರಿಗಳ ಪಟ್ಟಿಯಲ್ಲಿ ಶಂಕರ ಬಿದರಿ ಅವರ ಹೆಸರು ಸಹ ಇತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೇ ಯುಪಿಎಸ್‌ಸಿ ಶಿಫಾರಸು ಮಾಡಿದ್ದ ಅಧಿಕಾರಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ. ಸರ್ಕಾರದ ಈ ವಿಶೇಷ ಅಧಿಕಾರವನ್ನು ಮೊಟಕುಗೊಳಿಸಿರುವುದು ಸರಿಯಲ್ಲ ಎಂದು ತಿಳಿಸಿದರು.
ರಾಜ್ಯದೆಲ್ಲೆಡೆ ಪೊಲೀಸ್ ವಸತಿ ಸಮುಚ್ಚಯಗಳ ಸ್ಥಿತಿ ಶೋಚನೀಯವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ವಸತಿ ಸಮುಚ್ಚಯಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದೇನೆ. ಅಲ್ಲದೇ ವಸತಿ ಸಮುಚ್ಚಯಗಳ ಆಧುನೀಕರಣಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ನ್ಯಾಯಸಮ್ಮತ: ಇದೇ ಸಮಾರಂಭದಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ಕಾರದಿಂದ ಯಾವುದೇ ಲೋಪವಾಗಿಲ್ಲ. ನ್ಯಾಯಸಮ್ಮತವಾಗಿಯೇ ಬಿದರಿ ಅವರನ್ನು ಆ ಹುದ್ದೆಗೆ ನೇಮಕ ಮಾಡಲಾಗಿತ್ತು~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.