ADVERTISEMENT

ತಪ್ಪಿದ ಡಿಸಿಎಂ ಸ್ಥಾನ; ಶಿವಕುಮಾರ್‌ ಅಸಮಾಧಾನ

ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ: ಸೋನಿಯಾ, ರಾಹುಲ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಮೇ 2018, 19:30 IST
Last Updated 23 ಮೇ 2018, 19:30 IST
ತಪ್ಪಿದ ಡಿಸಿಎಂ ಸ್ಥಾನ; ಶಿವಕುಮಾರ್‌ ಅಸಮಾಧಾನ
ತಪ್ಪಿದ ಡಿಸಿಎಂ ಸ್ಥಾನ; ಶಿವಕುಮಾರ್‌ ಅಸಮಾಧಾನ   

ಬೆಂಗಳೂರು: ಉಪ ಮುಖ್ಯಮಂತ್ರಿ (ಡಿಸಿಎಂ) ಸ್ಥಾನ ಸಿಗದ ಕಾರಣಕ್ಕೆ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮುನಿಸಿಕೊಂಡಿದ್ದಾರೆ.

ಪ್ರಮಾಣ ವಚನ ಸಮಾರಂಭ ನಡೆಯುವುದಕ್ಕೆ ಕೆಲವೇ ಗಂಟೆಗಳ ಮೊದಲ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಿವಕುಮಾರ್‌, ‘ಪರಮೇಶ್ವರ ಅವರನ್ನು ಪಕ್ಷ ಡಿಸಿಎಂ ಮಾಡಿದೆ. ಅವರು ಎಂಟು ವರ್ಷಗಳಿಂದ ಪಕ್ಷದ ಅಧ್ಯಕ್ಷರಾಗಿದ್ದಾರೆ. ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು, ಹಲವರು ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ನಾನು ಆ ಸ್ಥಾನದ ಆಕಾಂಕ್ಷಿ ಅಲ್ಲ. ಹಾಗೆಂದು, ನಾನೊಬ್ಬ ಸನ್ಯಾಸಿ ಅಲ್ಲ, ಆಗುವುದೂ ಇಲ್ಲ. ನಾನೊಬ್ಬ ರಾಜಕಾರಣಿ. ನಾನು ಪುಟ್‌ಬಾಲ್‌ ಆಟಗಾರನಲ್ಲ; ಚೆಸ್‌ ಆಟಗಾರ’ ಎಂದರು.

ಪ್ರತ್ಯೇಕ ಮಾತುಕತೆ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮತ್ತು ಅಧ್ಯಕ್ಷ ರಾಹುಲ್‌ ಗಾಂಧಿ, ಶಿವಕುಮಾರ್‌ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

ADVERTISEMENT

‘ಪಕ್ಷ ನೀಡಿದ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಆದರೆ, ಪ್ರತಿ ಬಾರಿ ನನಗೆ ದ್ರೋಹವಾಗುತ್ತಿದೆ’ ಎಂದು ಶಿವಕುಮಾರ್‌ ಭಾವುಕರಾಗಿ ಹೇಳಿಕೊಂಡರು ಎಂದು ಗೊತ್ತಾಗಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್‌ ಕೂಡ ಶಿವಕುಮಾರ್‌ ಬೆಂಬಲಕ್ಕೆ ನಿಂತರು ಎನ್ನಲಾಗಿದೆ.

‘ನಿಮ್ಮ ನೋವು ಅರ್ಥವಾಗುತ್ತಿದೆ. ನೀವು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ನಿಮ್ಮನ್ನು ಕಡೆಗಣಿಸುವ ಮಾತೇ ಇಲ್ಲ’ ಎಂದು ಸೋನಿಯಾ ಮತ್ತು ರಾಹುಲ್‌ ಸಮಾಧಾನಪಡಿಸಿದರು ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.