ADVERTISEMENT

`ತಿರುಳ್ಗನ್ನಡ ನಾಡು': ಸಂಶೋಧನೆ ಅಗತ್ಯ

ಶಾಸನ ತಜ್ಞ ಡಾ.ಶ್ರೀನಿವಾಸ ರಿತ್ತಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2013, 19:59 IST
Last Updated 9 ಮಾರ್ಚ್ 2013, 19:59 IST

ಹಾವೇರಿ: ಕವಿರಾಜಮಾರ್ಗದಲ್ಲಿ ಪ್ರಸ್ತಾಪಿಸಲಾದ `ತಿರುಳ್ಗನ್ನಡ ನಾಡು' ಯಾವುದು ಎಂಬುದಕ್ಕೆ ಇಲ್ಲಿವರೆಗೆ ನಡೆದ ಸಂಶೋಧನೆಗಳಿಂದ ಸ್ಪಷ್ಟ ಉತ್ತರ ದೊರೆತಿಲ್ಲ. ವಿದ್ವಾಂಸರು, ಸಂಶೋಧಕರು ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿ ಹೊಸ ಹೊಳವು ನೀಡುವ ಅಗತ್ಯವಾಗಿದೆ ಎಂದು 17ನೇ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷ, ಶಾಸನ ತಜ್ಞ ಡಾ. ಶ್ರೀನಿವಾಸ ರಿತ್ತಿ ಶನಿವಾರ ಹೇಳಿದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ ಹಾಗೂ ಕೆರಿಮತ್ತಿಹಳ್ಳಿಯ ಕ.ವಿ.ವಿ ರಾಜೀವಗಾಂಧಿ ಸ್ನಾತಕೋತ್ತರ ಕೇಂದ್ರದ ಆಶ್ರಯದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು. `ಸಂಶೋಧಕ ಡಾ.ಕಾಶೀನಾಥ ಪಾಠಕ್  ಕವಿರಾಜಮಾರ್ಗವನ್ನು ಪ್ರಕಟಿಸಿ ಒಂದು ಶತಮಾನದ ಗತಿಸಿದೆ. ಅದರಲ್ಲಿ ಪ್ರಸ್ತಾಪಿಸಿರುವ ತಿರುಳ್ಗನ್ನಡ ನಾಡು ಕುರಿತು ಅಂದಿನಿಂದ ಇಂದಿನವರೆಗೆ ಹಲವಾರು ವಿದ್ವಾಂಸರು ತಮಗೆ ದೊರೆತ ಆಧಾರಗಳ ಮೇಲೆ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.

ಆದರೆ, ಅವುಗಳು ಸಮರ್ಪಕ ಉತ್ತರಗಳು ಎಂದು ನನಗೆ ಅನಿಸುತ್ತಿಲ್ಲ' ಎಂದರು. `ಗ್ರಂಥಕಾರ ಹೇಳುವಂತೆ ಕಿಸುವೊಳಲು (ಐಹೊಳೆ), ಕೋಪನಗರ (ಕೊಪ್ಪಳ), ಪುಲಿಗೆರೆ (ಲಕ್ಷ್ಮೇಶ್ವರ) ಹಾಗೂ ಒಂಕುಂದ (ಬೆಳಗಾವಿ) ಈ ನಾಲ್ಕು ಊರುಗಳ ನಡುವಿನ ಪ್ರದೇಶದ ನಾಡೇ ಕನ್ನಡದ ತಿರುಳ್ ಆಗಿದೆ. ಇದನ್ನೇ ತಿರುಳ್‌ಗನ್ನಡ ನಾಡು ಎಂದು ವಿದ್ವಾಂಸರು ಅರ್ಥ ಮಾಡಿಕೊಂಡಿದ್ದಾರೆ.

ಅಂದರೆ, ಈ ನಾಲ್ಕು ಊರುಗಳ ಮಧ್ಯದಲ್ಲಿ ನೈಜವಾದ, ಶಿಷ್ಟವಾದ, ಶ್ರೇಷ್ಠವಾದ, ಕೆಚ್ಚೆದೆಯ ಕನ್ನಡ ಬಳಕೆಯಲ್ಲಿ ಇತ್ತೆ? ಹಾಗಾದರೆ, ಉಳಿದ ಭಾಗಗಳಲ್ಲಿ ಇದ್ದ ಕನ್ನಡ ಯಾವುದು' ಎಂದು ಅವರು ಪ್ರಶ್ನಿಸಿದರು `ಅದು ಅಲ್ಲದೆ ಅಷ್ಟೊಂದು ಶ್ರೇಷ್ಠ ಕನ್ನಡ ಈ ಭಾಗದಲ್ಲಿ ಇದ್ದರೂ, ಆ ಸಮಯದಲ್ಲಿ ಯಾವುದೇ ಸಾಹಿತ್ಯಿಕ ಕೃತಿಗಳು ರಚನೆಯಾಗಲಿಲ್ಲವೇ?

ಅಥವಾ ರಚನೆ ಆಗಿದ್ದರೆ, ಆ ಸಾಹಿತ್ಯ ಕೃತಿಗಳಾವವು? ಆಗಿ ಹೋಗಿರುವ ಕೃತಿಕಾರರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲದಾಗಿದೆ. ಕವಿರಾಜಮಾರ್ಗವನ್ನು ಆಳವಾಗಿ ಅಧ್ಯಯನ ಮಾಡಿರುವ ಡಾ. ಎಂ.ಎಂ.ಕಲಬುರ್ಗಿ, ಎಂ.ಚಿದಾನಂದಮೂರ್ತಿ, ರಾಜಪುರೋಹಿತ ಅವರಿಗೂ ಈ ಪ್ರಶ್ನೆಗಳು ಅಷ್ಟಾಗಿ ಕಾಡಿದಂತೆ ಕಾಣುತ್ತಿಲ್ಲ' ಎಂದು ಅಭಿಪ್ರಾಯಪಟ್ಟರು.

`ಈ ನಾಲ್ಕು ಊರುಗಳ ಪ್ರದೇಶವು ಈಗಿನ ಧಾರವಾಡ ಜಿಲ್ಲೆಯ ಬಹುಭಾಗ (ಹುಬ್ಬಳ್ಳಿ, ಕಲಘಟಗಿ ತಾಲ್ಲೂಕು ಹೊರತುಪಡಿಸಿ), ಸಂಪೂರ್ಣ ಗದಗ ಜಿಲ್ಲೆ, ಬೆಳಗಾವಿ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಕಾವೇರಿಯಿಂದ ಗೋದಾವರಿವರೆಗಿನ ವಿಶಾಲ ನಾಡಿನಲ್ಲಿ ಈ ಚಿಕ್ಕ ಭೂ ಪ್ರದೇಶವಷ್ಟೇ ತಿರುಳ್ಗನ್ನಡ ನಾಡು ಕರೆಸಿಕೊಂಡಿರುವುದು ವಿಚಿತ್ರವೇ ಸರಿ ಎಂದು ಹೇಳಿರುವ ಅವರು, ಕವಿರಾಜಮಾರ್ಗಕಾರ ಕೂಡಾ ಈ ಪ್ರದೇಶವನ್ನು ತಿರುಳ್ಗನ್ನಡ ಎಂದು ಹೇಳಿರುವುದು ಏಕೆ ಎಂಬುದನ್ನು ಸ್ಪಷ್ಟಪಡಿಸದೇ ಇರುವುದು ಈ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದೆ' ಎಂದು ಹೇಳಿದರು.

ಸಮ್ಮೇಳನವನ್ನು ಕವಿವಿ ಕುಲಪತಿ ಡಾ.ಎಚ್.ಬಿ.ವಾಲೀಕಾರ ಉದ್ಘಾಟಿಸಿದರು. ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜೆ.ಎಂ.ನಾಗಯ್ಯ, ಕಾರ್ಯದರ್ಶಿ ಡಾ.ಪಿ.ಕೆ.ರಾಠೋಡ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.