ADVERTISEMENT

ತೀವ್ರ ಕುತೂಹಲಿ, ಜ್ಞಾನದಾಹಿ ಅಮಿತಾವ್‌

ಮಂಗಳೂರಿನಲ್ಲಿ ಜತೆಯಾಗಿ ಓಡಾಡಿದ ನೆನಪು ಹಂಚಿಕೊಂಡ ಸಾಹಿತಿ

ಪ್ರೊ.ಬಿ.ಎ.ವಿವೇಕ್‌ ರೈ
Published 14 ಡಿಸೆಂಬರ್ 2018, 20:15 IST
Last Updated 14 ಡಿಸೆಂಬರ್ 2018, 20:15 IST
ಪ್ರೊ.ಬಿ.ಎ.ವಿವೇಕ್‌ ರೈ
ಪ್ರೊ.ಬಿ.ಎ.ವಿವೇಕ್‌ ರೈ   

ಮಂಗಳೂರು: ಅಮಿತಾವ್‌ ಘೋಷ್‌ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸುದ್ದಿ ಕೇಳಿ ಅವರೊಡನೆ ಕಳೆದ ದಿನಗಳು ನನ್ನ ಕಣ್ಣಮುಂದೆ ಒಮ್ಮೆಲೇ ಮರುಕಳಿಸಿದವು.

‘ಇನ್‌ ಆನ್‌ ಆಂಟಿಕ್‌ ಲ್ಯಾಂಡ್‌’ ಎಂಬ ಕಾದಂಬರಿಗೆ ತಯಾರಿ ನಡೆಸುತ್ತ ಅವರು 1990ರಲ್ಲಿ ಮಂಗಳೂರಿಗೆ ಬಂದಿದ್ದರು. ಅವರ ಜ್ಞಾನದ ಹುಡುಕಾಟ ನೋಡಿ ನಾನು ದಂಗಾಗಿದ್ದೆ.

ಅವರು ಇಲ್ಲಿಗೆ ಬರಲು ಒಂದು ಹಿನ್ನೆಲೆ ಇದೆ. ಅಬ್ರಹಾಂ ಬೆನ್‌ ಇಜು ಎಂಬ ವರ್ತಕ 1132ರ ಸುಮಾರಿಗೆ ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದ. ಇಲ್ಲಿಂದಲೇ ಜುಡೋ ಅರೆಬಿಕ್ ಭಾಷೆಯಲ್ಲಿ ತನ್ನೂರಿಗೆ ಪತ್ರಗಳನ್ನು ಬರೆಯುತ್ತಿದ್ದ. ಆ ಪತ್ರದಲ್ಲಿ ತನ್ನ ಸಹಾಯಕನೊಬ್ಬನ ಹೆಸರನ್ನು ಪದೇ ಪದೇ ಉಲ್ಲೇಖಿಸಿದ್ದ. ಆ ಪತ್ರಗಳನ್ನು ಅಮಿತಾವ್‌ ಅಧ್ಯಯನ ಮಾಡುತ್ತಿದ್ದರು. ಪತ್ರದಲ್ಲಿ ಉಲ್ಲೇಖವಾದ ಆ ಸಹಾಯಕನ ಹೆಸರನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕಾಗಿ ಅವರು ಮಂಗಳೂರಿಗೆ ಬಂದಿದ್ದರು.

ADVERTISEMENT

ಹಿಂದಿನ ಕಾಲದಲ್ಲಿ ತುಳುನಾಡಿನ ಬೆರ್ಮದೇವರ ಹೆಸರನ್ನು ಎಲ್ಲರೂ ಇಟ್ಟುಕೊಳ್ಳುವುದು ರೂಢಿ. ಆದ್ದರಿಂದ ಸಹಾಯಕನ ಹೆಸರು ‘ಬೊಮ್ಮ’ ಎನ್ನುವುದು ನನ್ನ ಅರಿವಿಗೆ ಬಂತು. ಅರೇಬಿಕ್ ಭಾಷೆಯಲ್ಲಿ ಅದನ್ನು ಸಂಕ್ಷಿಪ್ತವಾಗಿ ಉಲ್ಲೇಖಿಸಲಾಗಿತ್ತು.

ಅಮಿತಾವ್‌ ಅವರು ಇಲ್ಲಿ ಬಂದಾಗ ಮಂಜುರಾನ್‌ (ಈಗಿನ ತಾಜ್‌ ಗೇಟ್‌ವೇ) ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಸಂಜೆ ದೂರದರ್ಶನದಲ್ಲಿ ಪ್ರಸಾರವಾದ ‘ಕೋಟಿಚೆನ್ನಯ’ ಎಂಬ ತುಳು ಚಿತ್ರವನ್ನು ವೀಕ್ಷಿಸುತ್ತಿದ್ದಾಗ ‘ಕೆಮ್ಮೆಲೆತ ಬೊಮ್ಮ..’ ಎಂಬ ಉಲ್ಲೇಖದ ಹಾಡು ಹೇಳಿ ಅವರಿಗೆ ಖುಷಿಯಾಯಿತು. ನಾನು ನೀಡಿದ ಮಾಹಿತಿ ಬಗ್ಗೆ ಮತ್ತಷ್ಟು ವಿಶ್ವಾಸ ಮೂಡಿತು. ಹೀಗೆ ಅಧ್ಯಯನ ಮಾಡಿ ಬರೆದ ಕಾದಂಬರಿಯಲ್ಲಿ ಅವರು ‘ಮಂಗಳೂರು’ ಎಂಬ ಒಂದು ಅಧ್ಯಾಯವನ್ನೇ ಉಲ್ಲೇಖಿಸಿದ್ದಾರೆ. ಕಾದಂಬರಿಯಲ್ಲಿ ಕಥಾನಾಯಕ ಮತ್ತು ಕಾದಂಬರಿಕಾರನ ಮಾತುಗಳು ಸಮಾನಾಂತರವಾಗಿಯೇ ಸಾಗುತ್ತವೆ. ಹಾಗಾಗಿ ನನ್ನಹೆಸರನ್ನೂ ಅದರಲ್ಲಿ ಉಲ್ಲೇಖಿಸಿದ್ದಾರೆ.

ನಮ್ಮ ಮನೆಯಲ್ಲಿ ಅವರು ಸರಳ ಊಟ ಸೇವಿಸಿದರು. ಆದರೆ ನನ್ನ ಪುಸ್ತಕದ ಸಂಗ್ರಹವನ್ನೆಲ್ಲ ಅವರು ಗಮನಿಸಿ ತುಳುವಿಗೆ ಸಂಬಂಧಿಸಿ ಇಂಗ್ಲಿಷ್‌ನಲ್ಲಿ ಕೆ.ವಿ. ರಮೇಶ್‌, ಗುರುರಾಜ್‌ಭಟ್‌ ಅವರ ಪುಸ್ತಕಗಳನ್ನು ತೆಗೆದುಕೊಂಡರು. ಮನೆಯಿಂದ ಆಟೋದಲ್ಲಿ ಹೋಗುತ್ತ ತುಳು ಸಂಸ್ಕೃತಿಯ ಹಲವು ವಿಚಾರಗಳನ್ನು ಕೇಳಿ ತಿಳಿದುಕೊಂಡರು. ತುಳುನಾಡಿನ ಬೆರ್ಮ ದೇವೆರ್‌ ವೈದಿಕ ಸಾಂಸ್ಕೃತಿಕ ಬ್ರಹ್ಮದೇವರಲ್ಲ. ಕುದುರೆ ಮೇಲೆ ಕುಳಿತ ಯೋಧನ ಪರಿಕಲ್ಪನೆ ತುಳುವರದು. ಬಂದರಿನಲ್ಲಿ ಹರಾಜಿಗೆ ಸಿದ್ಧನಾಗಿದ್ದ ಬೊಮ್ಮ ಮತ್ತು ಆಶು ಎಂಬ ಹುಡುಗಿಯನ್ನು ಬೆನ್‌ ಇಜು ಬಿಡಿಸಿಕೊಳ್ಳುತ್ತಾನೆ ಎಂಬ ಉಲ್ಲೇಖ ಆತನ ಪತ್ರದಲ್ಲಿದೆ.

ನಾವು ಕಡಲ ದಂಡೆಗೆ ನಡೆದುಕೊಂಡೇ ಹೋದೆವು. ಬೆಂಗರೆಯಲ್ಲಿ ದೋಣಿಯಲ್ಲಿ ಸುತ್ತಾಡಿ ಹಳೇ ಬಂದರಿನ ಪರಿಚಯವನ್ನು ಮಾಡಿಕೊಂಡರು. ವರ್ತಕ ಬೆನ್‌ ಇಜು ಓಡಾಡಿದ ಜಾಗ ಯಾವುದಿರಬಹುದು ಎಂದು ಊಹಿಸಿಕೊಳ್ಳಲು ಯತ್ನಿಸಿರಬಹುದು. ಇಲ್ಲಿನ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುವ ತೀವ್ರ ಕುತೂಹಲಿ ಅವರಾಗಿದ್ದರು. ಅವರು ಕಾದಂಬರಿಯಲ್ಲಿ ನನ್ನ ಹೆಸರು ಉಲ್ಲೇಖಿಸಿದ್ದರಿಂದ ನಾನು ಕೂಡ ಪ್ರಸಿದ್ಧನಾದೆ ಎನಿಸುತ್ತದೆ.

ಇದೀಗ ಅವರಿಗೆ ಸಂದ ಗೌರವದಲ್ಲಿ ತುಳುನಾಡಿನ ಪಾಲೂ ಇದೆ ಎಂದು ತುಂಬ ಖುಷಿಯಾಗುತ್ತಿದೆ. ತುಂಬ ಅಡಿಟಿಪ್ಪಣಿಗಳನ್ನು ಬರೆದ ಅಧ್ಯಯನ ಶೀಲ ಕಾದಂಬರಿ ಅವರದ್ದು. ಈಗ ಬಹಳ ಹೆಮ್ಮೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.