ADVERTISEMENT

ತುಂಗೆಯ ಒಡಲಿಗೆ ನಿತ್ಯ ಕೊಳಚೆ ನೀರು!

10 ವರ್ಷಗಳಾದರೂ ಕೋರ್ಟ್ ನಿಯಮ ಪಾಲಿಸದ ಶಿವಮೊಗ್ಗ ಪಾಲಿಕೆ

ಚಂದ್ರಹಾಸ ಹಿರೇಮಳಲಿ
Published 16 ಏಪ್ರಿಲ್ 2016, 19:30 IST
Last Updated 16 ಏಪ್ರಿಲ್ 2016, 19:30 IST
ಶಿವಮೊಗ್ಗ ಗುಂಡಪ್ಪಶೆಡ್ ಬಳಿ ಯುಜಿಡಿ ಹಾಗೂ ಚರಂಡಿಯ ಕಲ್ಮಶದ ನೀರು ತುಂಗಾ ನದಿ ಸೇರುತ್ತಿರುವ ದೃಶ್ಯ   ಚಿತ್ರ: ಶಿವಮೊಗ್ಗ ನಾಗರಾಜ್‌
ಶಿವಮೊಗ್ಗ ಗುಂಡಪ್ಪಶೆಡ್ ಬಳಿ ಯುಜಿಡಿ ಹಾಗೂ ಚರಂಡಿಯ ಕಲ್ಮಶದ ನೀರು ತುಂಗಾ ನದಿ ಸೇರುತ್ತಿರುವ ದೃಶ್ಯ ಚಿತ್ರ: ಶಿವಮೊಗ್ಗ ನಾಗರಾಜ್‌   

ಶಿವಮೊಗ್ಗ: ತುಂಗಾ ಪಾನ, ಗಂಗಾ ಸ್ನಾನ ಎಂಬ ಮಾತಿದೆ. ಆದರೆ ಶುದ್ಧ ಕುಡಿಯುವ ನೀರಿನ ಮೂಲ ಎಂದೇ ನಂಬಿರುವ ತುಂಗಾ ನದಿಯ ಒಡಲಿಗೆ ಪ್ರತಿ ದಿನ ಶಿವಮೊಗ್ಗ ನಗರದಿಂದ 3.5 ಕೋಟಿ ಲೀಟರ್‌ ಕೊಳಚೆ ನೀರು ಸೇರುತ್ತಿದೆ!

ಯಾವುದೇ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಬಳಕೆ ಮಾಡಿದ ನೀರು, ಶೌಚದ ಕಲ್ಮಶ ನೇರವಾಗಿ ನದಿಗೆ ಬಿಡುವುದಕ್ಕೆ 10 ವರ್ಷಗಳ ಹಿಂದೆಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಹೈಕೋರ್ಟ್, ಪ್ರತಿ ಸ್ಥಳೀಯ ಸಂಸ್ಥೆಗಳೂ ಕಡ್ಡಾಯವಾಗಿ ‘ಮಲಿನ ನೀರು ಶುದ್ಧೀಕರಣ ಘಟಕ’ ಸ್ಥಾಪಿಸಿ, ಜೈವಿಕ ಆಮ್ಲಜನಕ ಪ್ರಮಾಣ (ಬಯೊಲಾಜಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌) ನಿಯಂತ್ರಿಸಿ ನದಿಗೆ ಹರಿಸುವಂತೆ ಸೂಚಿಸಿತ್ತು. ಆದರೆ, ಶಿವಮೊಗ್ಗ ನಗರ ಪಾಲಿಕೆ ಸೇರಿದಂತೆ ತುಂಗಾ ನದಿ ತೀರದ ಹೆಚ್ಚಿನ ಸ್ಥಳೀಯ ಸಂಸ್ಥೆಗಳು ಇಂದಿಗೂ ಹೈಕೋರ್ಟ್‌ ಆದೇಶ ಪಾಲಿಸಲು ವಿಫಲವಾಗಿವೆ.

ನಗರಕ್ಕೆ ಗಾಜನೂರು ತುಂಗಾ ಜಲಾಶಯ ಸೇರಿದಂತೆ ವಿವಿಧ ಮೂಲಗಳಿಂದ ಪ್ರತಿ ದಿನ 4.72 ಕೋಟಿ ಲೀಟರ್ ನೀರು ಸರಬರಾಜು ಮಾಡಲಾಗುತ್ತದೆ. ಅದರಲ್ಲಿ ಬಳಕೆಯಾದ 3.5 ಕೋಟಿ ಲೀಟರ್‌ ಕೊಳಚೆ ನೀರು ನೇರವಾಗಿ ನದಿಯ ಒಡಲು ಸೇರುತ್ತಿದೆ.

‘ಯುಜಿಡಿ ಸೇರಿದಂತೆ ನಗರದ ಎಲ್ಲ ಕಲ್ಮಶ ನೀರನ್ನೂ ನದಿಗೆ ಹರಿಸಲಾಗುತ್ತಿದೆ. ಇದು ಜಲಚರಗಳ ಜೀವಕ್ಕೆ ಮಾರಕವಾಗಿದೆ. ಅಲ್ಲದೇ, ನದಿ ತೀರದ ಮುಂದಿನ ಗ್ರಾಮ ಹಾಗೂ ಪಟ್ಟಣಗಳ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಪರಿಸರ ತಜ್ಞ ವಿಜಯ ರಾಜ್‌.

ನಗರದ ಗಾಂಧಿಬಜಾರ್, ದುರ್ಗಿಗುಡಿ, ರವೀಂದ್ರ ನಗರ, ರಾಜೇಂದ್ರ ನಗರ ಮತ್ತಿತರ ಭಾಗಗಳಲ್ಲಿ ಹಲವು ವರ್ಷಗಳ ಹಿಂದೆಯೇ ಯುಜಿಡಿ ನಿರ್ಮಿಸಲಾಗಿದೆ. ಈ ಒಳಚರಂಡಿಗಳಲ್ಲಿ ಹರಿದು ಬರುವ ಕಲ್ಮಶ ಶುದ್ಧೀಕರಿಸಲು 10 ವರ್ಷಗಳ ಹಿಂದೆಯೇ ಗುಂಡಪ್ಪ ಶೆಡ್ ಬಳಿ 53 ಲಕ್ಷ ಲೀಟರ್‌ ಸಾಮರ್ಥ್ಯದ ಮಲಿನ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದರೂ, ಸ್ಥಳೀಯರ ವಿರೋಧದ ಕಾರಣ ಘಟಕದ ಕಾರ್ಯನಿರ್ವಹಣೆ 5 ವರ್ಷಗಳಿಂದ ಸ್ಥಗಿತಗೊಂಡಿದೆ.

ನಂತರ ರಾಜ್ಯ ಸರ್ಕಾರ ₹ 61.8 ಕೋಟಿ ಅನುದಾನದಲ್ಲಿ ನಗರದ ಇತರೆ ಭಾಗಗಳಲ್ಲಿ ಯುಜಿಡಿ ಸಂಪರ್ಕ ಕಲ್ಪಿಸಿ, ತ್ಯಾವರೆಚಟ್ನಹಳ್ಳಿ ಬಳಿ 3.5 ಕೋಟಿ ಲೀಟರ್‌ ಸಾಮರ್ಥ್ಯದ ಮಲಿನ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು 2008–09ನೇ ಸಾಲಿನಲ್ಲೇ ಟೆಂಡರ್ ಕರೆದಿತ್ತು. ಆದರೆ, ಯಾವ ಕಂಪೆನಿಯೂ ಆಸಕ್ತಿ ತೋರಿರಲಿಲ್ಲ. ಕೊನೆಗೆ ಹೈದರಾಬಾದ್‌ ಮೂಲದ ವಿಎಸ್‌ಎ ಕಂಪೆನಿ ಟೆಂಡರ್ ಪಡೆದರೂ  ಕಾಮಗಾರಿ ವೆಚ್ಚ ₹ 100 ಕೋಟಿ ತಲುಪಿತ್ತು. ಕೊನೆಗೂ  6 ತಿಂಗಳ ಹಿಂದೆ ಘಟಕ ಸ್ಥಾಪನೆಯಿತು. ಆದರೆ ಇಂದಿಗೂ ಬಳಕೆಯಾಗುತ್ತಿಲ್ಲ.

‘ಈ ಹಿಂದೆ ಟೆಂಡರ್‌ ಪಡೆದ ಕಂಪೆನಿ ಅರ್ಧಕ್ಕೆ ಕಾಮಗಾರಿ ಕೈಬಿಟ್ಟ ಕಾರಣ 3 ವರ್ಷ ವಿಳಂಬವಾಗಿತ್ತು. ತ್ಯಾವರೆಚಟ್ನಹಳ್ಳಿ ಬಳಿ ಮಲಿನ ನೀರು ಶುದ್ಧೀಕರಣ ಘಟಕ ಪೂರ್ಣಗೊಂಡಿದೆ. ನಗರದ ಎಲ್ಲ ಕೊಳಚೆ ನೀರನ್ನೂ ಅಲ್ಲಿಗೆ ಪಂಪ್ ಮಾಡಿ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮದಂತೆ ಶೀಘ್ರದಲ್ಲೇ ಕೊಳಚೆ ನೀರು ಶುದ್ಧೀಕರಿಸಿ, ಜೈವಿಕ ಆಮ್ಲಜನಕ ಪ್ರಮಾಣ ನಿಯಂತ್ರಿಸಿ ನದಿಗೆ ಬಿಡಲಾಗುವುದು. ರೈತರು ಬಯಸಿದರೆ ಶುದ್ಧೀಕರಿಸಿದ ನೀರು ಬೆಳೆಗೆ ಬಳಕೆ ಮಾಡಿಕೊಳ್ಳಬಹುದು’ ಎನ್ನುತ್ತಾರೆ  ಕಾರ್ಯಪಾಲಕ ಎಂಜಿನಿಯರ್ ಜಿ.ಎ.ರವಿಕೀರ್ತಿ.

* ಪಾಲಿಕೆ ಸೇರಿದಂತೆ ‘ಸೂಡಾ’ ವ್ಯಾಪ್ತಿಯ ಎಲ್ಲ ಹೊಸ ಬಡಾವಣೆಗಳಲ್ಲೂ ಯುಜಿಡಿ ಜಾಲ ಬೆಸೆದು, ಸಂಪೂರ್ಣ ಮಲಿನ ನೀರು ಶುದ್ಧೀಕರಿಸಲು ಇನ್ನೂ     ₹ 450 ಕೋಟಿ  ಕ್ರಿಯಾಯೋಜನೆ ರೂಪಿಸಬೇಕಿದೆ
-ಜಿ.ಎ.ರವಿಕೀರ್ತಿ,
ಕಾರ್ಯಪಾಲಕ ಎಂಜಿನಿಯರ್,
ಕರ್ನಾಟಕ ಜಲ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.