ADVERTISEMENT

ತೆರೆದ ವಾಹನದಲ್ಲಿ ಪ್ರಕಾಶ್ ರೈ ಮೆರವಣಿಗೆಗೆ ನಕಾರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:40 IST
Last Updated 13 ಏಪ್ರಿಲ್ 2018, 19:40 IST
ಕಲಬುರ್ಗಿಯಲ್ಲಿ ನಟ ಪ್ರಕಾಶ್ ರೈ ಅವರು ಶುಕ್ರವಾರ ತೆರೆದ ವಾಹನದಲ್ಲಿ ನಿಂತು ನೆರೆದ ಜನರತ್ತ ಕೈಬೀಸಿದರು
ಕಲಬುರ್ಗಿಯಲ್ಲಿ ನಟ ಪ್ರಕಾಶ್ ರೈ ಅವರು ಶುಕ್ರವಾರ ತೆರೆದ ವಾಹನದಲ್ಲಿ ನಿಂತು ನೆರೆದ ಜನರತ್ತ ಕೈಬೀಸಿದರು   

ಕಲಬುರ್ಗಿ: ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಸಂಜೆ ನಗರಕ್ಕೆ ಬಂದ ನಟ ಪ್ರಕಾಶ್ ರೈ ಅವರನ್ನು ಸಮಿತಿ ಸದಸ್ಯರು ಅಲಂಕೃತ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಪೊಲೀಸರು ಮೆರವಣಿಗೆಯನ್ನು ತಡೆದರು.

ಆರಂಭದಲ್ಲಿ ವಾಹನ ಹತ್ತಿದ ಪ್ರಕಾಶ್ ರೈ ನೆರೆದ ಜನರತ್ತ ಕೈಬೀಸಿದರು. ಯುವಕರು, ಅಭಿಮಾನಿಗಳು ಅವರ ವಾಹನದ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಅನುಮತಿ ನಿರಾಕರಿಸಿದರು. ಅಲ್ಲದೆ, ಬೈಕ್ ರ್‍ಯಾಲಿಗೂ ಅವಕಾಶ ನೀಡಲಿಲ್ಲ. ಹೀಗಾಗಿ ಪ್ರಕಾಶ್ ರೈ ಕಾರಿನಲ್ಲೇ ಜಗತ್ ವೃತ್ತಕ್ಕೆ ಬಂದರು.

ಮುತ್ತಿಗೆ ಖಂಡಿಸಿ ಪ್ರತಿಭಟನೆ: ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲು ಗುರುವಾರ ರಾತ್ರಿಯೇ ನಗರಕ್ಕೆ ಬಂದಿದ್ದ ಪ್ರಕಾಶ್ ರೈ ಅವರ ಕಾರಿಗೆ ಕೆಲವರು ಮುತ್ತಿಗೆ ಹಾಕಿದ್ದನ್ನು ಖಂಡಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ಮಾಡಿದರು.

ADVERTISEMENT

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರು ಪ್ರಕಾಶ್ ರೈ ಅವರಿದ್ದ ಕಾರಿಗೆ ಮುತ್ತಿಗೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಹಲ್ಲೆಗೆ
ಯತ್ನಿಸಿದ್ದಾರೆ. ಆ ಬಳಿಕ ಮೋದಿ.. ಮೋದಿ.. ಎಂದು ಘೋಷಣೆ ಕೂಗಿ ಮುಜುಗರ ಉಂಟು ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಗತ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಊಟಕ್ಕೆ ತೆರಳಿದ್ದಾಗ ಮುತ್ತಿಗೆ: ‘ಪ್ರಕಾಶ್ ರೈ ಅವರು ಗುಲಬರ್ಗಾ ಕ್ಲಬ್‌ನಲ್ಲಿ ಊಟ ಮುಗಿಸಿಕೊಂಡು ಕಾರಿನಲ್ಲಿ ಹೊರ ಬರುತ್ತಿದ್ದರು.  ಈ ವೇಳೆ ಅಡ್ಡಗಟ್ಟಿದ 8–10 ಯುವಕರ ಗುಂಪು ಹಾರಹಾಕಲು ಮುಂದಾಯಿತು. ಆದರೆ ಪ್ರಕಾಶ್ ರೈ ನಿರಾಕರಿಸಿದರು. ಇದರಿಂದ ನಿರಾಶರಾದ ಯುವಕರು ಮೋದಿ.. ಮೋದಿ.. ಎಂದು ಘೋಷಣೆ ಕೂಗಿದರು’ ಎಂದು ಪೊಲೀಸ್ ಮೂಲ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.