ADVERTISEMENT

ದತ್ತಜಯಂತಿಗೆ ಶಾಂತಿಯುತ ತೆರೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2010, 9:05 IST
Last Updated 21 ಡಿಸೆಂಬರ್ 2010, 9:05 IST
ದತ್ತಜಯಂತಿಗೆ ಶಾಂತಿಯುತ ತೆರೆ
ದತ್ತಜಯಂತಿಗೆ ಶಾಂತಿಯುತ ತೆರೆ   

ಚಿಕ್ಕಮಗಳೂರು:  ತಾಲ್ಲೂಕಿನ ಬಾಬಾಬುಡನ್‌ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ಸೋಮವಾರ ದತ್ತ ಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ನೆರವೇರಿತು.
ಜಿಲ್ಲಾ/ ತಾಲ್ಲೂಕು ಪಂಚಾಯಿತಿ ಚುನಾವಣೆ, ಮೈಕೊರೆಯುವ ಚಳಿ ಮತ್ತು ತುಂತುರು ಮಳೆಯಿಂದಾಗಿ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಮಧ್ಯಾಹ್ನ 2 ಗಂಟೆಯವರೆಗೆ ಒಟ್ಟು 6000 ಭಕ್ತರು ತೆರಳಿದ್ದಾರೆ ಎಂದು ಕೈಮರ ಚೆಕ್‌ಪೋಸ್ಟ್ ಪೊಲೀಸರು ಮಾಹಿತಿ ನೀಡಿದರು.

ಗುಹೆಯ ತಾತ್ಕಾಲಿಕ ಪುನರ್ ನಿರ್ಮಾಣ ಕಾಮಗಾರಿಯನ್ನು ತರಾತುರಿಯಲ್ಲಿ ಪೂರ್ಣಗೊಳಿಸಿದ್ದ ರಾಜ್ಯ ಸರ್ಕಾರ ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಾಲಾಧಾರಿಗಳ ಗುಹೆ ಪ್ರವೇಶಕ್ಕೆ ಅನುಮತಿ ನೀಡಿತ್ತು. ಗುಹೆಯೊಳಗೆ ದತ್ತಪಾದುಕೆಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಗಿರಿಗೆ ಆಗಮಿಸಿದ್ದ ಮಾಲಾಧಾರಿಗಳಲ್ಲಿ ಕರಾವಳಿ ಜಿಲ್ಲೆಯ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.  ಮಂಗಳೂರು, ಉಡುಪಿ, ಕಾರ್ಕಳ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಿನಿ ಬಸ್‌ಗಳು ಬಂದಿದ್ದವು.

ದತ್ತಪೀಠದ ಬಲಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ ನಡೆಸಲು ಹಾಕಿದ್ದ ತಾತ್ಕಾಲಿಕ ಶೆಡ್‌ನ ಕೆಲವು ಶೀಟ್‌ಗಳು ಗಾಳಿಗೆ ಹಾರಿ ಹೋಗಿದ್ದವು. ಅಳಿದುಳಿದ ಶೆಡ್‌ನಲ್ಲಿಯೇ ದತ್ತಹೋಮ, ಗಣಹೋಮ ಸೇರಿದಂತೆ ವಿವಿಧ ಪೂಜಾವಿಧಿಗಳನ್ನು ನೆರವೇರಿಸಲು ಸಂಘ ಪರಿವಾರ ಯತ್ನಿಸುತ್ತಿತ್ತು.

ಪ್ರಜ್ವಲಿಸದ ಅಗ್ನಿ: ಮುಂಜಾನೆ 9 ಗಂಟೆಗೆ ಹೋಮ ಪ್ರಾರಂಭಿಸಲು ಅಗ್ನಿ ಪೂಜೆ ನಡೆಸಿದರೂ ಜೋರು ಗಾಳಿ ಮತ್ತು ಥಂಡಿ ವಾತಾವರಣದಿಂದಾಗಿ ಹೋಮಕುಂಡದಲ್ಲಿ ಅಗ್ನಿ ಪ್ರಜ್ವಲಿಸಲೇ ಇಲ್ಲ. ಅಂತೂ ಇಂತೂ 11 ಗಂಟೆಗೆ ಕರ್ಪೂರಗಳು ಉರಿಯತೊಡಗಿದವು. ತಕ್ಷಣ ಮಾಲಾಧಾರಿಗಳು ಹೋಮಕುಂಡ ಸುತ್ತ ತಡೆಗೋಡೆಯಂತೆ ನಿಂತು ದತ್ತಹೋಮ ನಡೆಯಲು ನೆರವಾದರು.

ವಿಎಚ್‌ಪಿ ಮುಖಂಡ ಶಿವಶಂಕರ್ ಮತ್ತು ಬಜರಂಗದಳದ ಪ್ರಾಂತ ಸಂಚಾಲಕ ಸೂರ್ಯನಾರಾಯಣ್ ಪೂರ್ಣಾಹುತಿ ನೆರವೇರಿಸಿದರು.
ಅಧಿಕಾರಿಗಳಿಗೆ ಪೇಚಾಟ: ಬೆಂಗಳೂರಿನ ಶ್ರೀಧರಾಶ್ರಮದ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಪಾದುಕೆಗಳ ದರ್ಶನ ಪಡೆದು ಒಳಗೆ ಕುಳಿತವರು ಗಂಟೆಗಳು ಕಳೆದರೂ ಮೇಲೆ ಏಳದಿದ್ದುದು ಕಂದಾಯ ಅಧಿಕಾರಿಗಳಲ್ಲಿ ಆತಂಕದ ಗೆರೆ ಮೂಡಿಸಿದ್ದವು.

ಹಲವು ಬಾರಿ ಅಧಿಕಾರಿಗಳು ಮತ್ತು ಪೊಲೀಸರು ‘ಮೇಲೇಳಿ ಸ್ವಾಮೀಜಿ’ ಎಂದು ಸೂಚಿಸಿದರೂ ಅಧಿಕಾರಿಗಳ ವಿನಂತಿಗೆ ಮೌನವ್ರತ ಹಿಡಿದಿದ್ದ ಸ್ವಾಮೀಜಿ ಸೊಪ್ಪು ಹಾಕಲಿಲ್ಲ. ಅಂತೂ ಇಂತೂ ಸ್ವಾಮೀಜಿ ಮಧ್ಯಾಹ್ನ 12 ಗಂಟೆಗೆ ಗುಹೆಯಿಂದ ಹೊರ ಬಂದರು.

40 ವರ್ಷದೊಳಗಿನ ಪೊಲೀಸರು:
ದತ್ತ ಜಯಂತಿ ನಿಭಾಯಿಸಲು ಸಾವಿರಾರು ಪೊಲೀಸರು ಕರ್ತವ್ಯದ ಮೇಲೆ ಗಿರಿಗೆ ಬಂದಿದ್ದರು. ಇದೇ ಮೊದಲ ಬಾರಿಗೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪೊಲೀಸರನ್ನು ಮಾತ್ರ ಇಲಾಖೆ ಗಿರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದು ವಿಶೇಷವಾಗಿತ್ತು.

ಭಾರೀ ಚಳಿಯಿಂದಾಗಿ ಪೊಲೀಸರು ಅನಾರೋಗ್ಯ ಪೀಡಿತರಾಗುತ್ತಿದ್ದುದು ಕೆಲವೊಮ್ಮೆ ಅಸುನೀಗುತ್ತಿದ್ದುದನ್ನು ಗಮನಿಸಿ ಜಿಲ್ಲಾ ಪೊಲೀಸರು ಈ ನಿಯಮ ಜಾರಿ ಮಾಡಿದ್ದರು.

ಪಶ್ಚಿಮ ವಲಯ ಐಜಿಪಿ ಅಲೋಕ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಿತ್ರ ಹೆರಾಜೆ ಬಂದೋಬಸ್ತ್‌ನ ಉಸ್ತುವಾರಿ ಹೊತ್ತಿದ್ದರು.

ಶಾಸಕರಾದ ಸಿ.ಟಿ.ರವಿ, ಡಿ.ಎನ್.ಜೀವರಾಜ್, ಎಂ.ಪಿ.ಕುಮಾರಸ್ವಾಮಿ, ಸಂಸದ ಡಿ.ವಿ.ಸದಾನಂದಗೌಡ, ಸಂಘ ಪರಿವಾರದ ಮುಖಂಡರಾದ ಪ್ರದೀಪ್, ರಘು, ಖಾಂಡ್ಯ ಪ್ರವೀಣ್, ಶಿವಶಂಕರ್, ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ವಕ್ತಾರ ಪ್ರಕಾಶ್‌ಶರ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.